Belagavi MES Protest: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ, ಎಂಇಎಸ್ ಆಯೋಜಿಸುವ ಮಹಾಮೇಳಾವ್‌ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಈ ನಿರ್ಧಾರದಿಂದ ಕೆರಳಿರುವ ಮಹಾರಾಷ್ಟ್ರದ ಶಿವಸೇನೆ (ಠಾಕ್ರೆ ಬಣ) ಕಾರ್ಯಕರ್ತರು, ಕರ್ನಾಟಕ ಸರ್ಕಾರಕ್ಕೆ ಗೊಡ್ಡು ಬೆದರಿಕೆ ಹಾಕಿದ್ದಾರೆ.
ಬೆಳಗಾವಿ (ಡಿ.6): ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡರಿಗೆ ಬೆಳಗಾವಿ ಜಿಲ್ಲಾಡಳಿತ ಶಾಕ್ ನೀಡಿದೆ. ಪ್ರತಿ ವರ್ಷ ಅಧಿವೇಶನದ ಸಂದರ್ಭದಲ್ಲಿ ನಡೆಯುವ ಎಂಇಎಸ್ ಮಹಾಮೇಳಾವ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ. ಜಿಲ್ಲಾಡಳಿತದ ಈ ದಿಟ್ಟ ನಿರ್ಧಾರದಿಂದ ಕೆರಳಿದ ಮಹಾರಾಷ್ಟ್ರದ ಶಿವಸೇನೆ (ಠಾಕ್ರೆ ಬಣ) ಪುಂಡರು ಮತ್ತೆ ಉದ್ಧಟತನ ಪ್ರದರ್ಶಿಸಿದ್ದು, ಕರ್ನಾಟಕ ಸರ್ಕಾರಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಕರ್ನಾಟಕ ಮಂತ್ರಿಗಳಿಗೆ ಬ್ರೇಕ್ ಹಾಕ್ತಿವಿ:
ಎಂಇಎಸ್ ಮಹಾಮೇಳಾವ್ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು ಮತ್ತು ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿ ಪ್ರವೇಶ ನಿರ್ಬಂಧಿಸಬಾರದು ಎಂದು ಶಿವಸೇನೆಯ ಠಾಕ್ರೆ ಬಣದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, "ಕರ್ನಾಟಕದ ಯಾವುದೇ ಮಂತ್ರಿಗಳಿಗೆ ಮಹಾರಾಷ್ಟ್ರದಲ್ಲಿ ಓಡಾಡಲು ಅವಕಾಶ ನೀಡುವುದಿಲ್ಲ. ಅಧಿವೇಶನದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಮಂತ್ರಿಗಳಿಗೆ ಓಡಾಡಲು ಬ್ರೇಕ್ ಹಾಕುತ್ತೇವೆ, ಎಂದು ಶಿವಸೇನೆ ಮುಖಂಡ ವಿಜಯ ದೇವಣೆ ನೇತೃತ್ವದ ಪುಂಡರು ಗೊಡ್ಡು ಬೆದರಿಕೆ ಹಾಕಿದ್ದಾರೆ.
ಕೊಲ್ಲಾಪುರ ಡಿಸಿಗೆ ಶಿವಸೇನೆ ಪುಂಡರಿಂದ ಮನವಿ:
ಠಾಕ್ರೆ ಬಣದ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಧಿಕಾರಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಡಿಯಲ್ಲಿ ಪ್ರತಿ ವರ್ಷವೂ ಅಧಿವೇಶನದ ಸಂದರ್ಭದಲ್ಲಿ ಠಾಕ್ರೆ ಬಣದ ಶಿವಸೇನೆ ಪುಂಡರಿಂದ ಈ ರೀತಿಯ ಪುಂಡಾಟಿಕೆ ಮತ್ತು ಪ್ರಚೋದನಕಾರಿ ಹೇಳಿಕೆಗಳು ಮುಂದುವರಿದಿದ್ದು, ಇದು ಎರಡೂ ರಾಜ್ಯಗಳ ನಡುವಿನ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಬೆಳಗಾವಿ ಜಿಲ್ಲಾಡಳಿತದ ನಿರಾಕರಣೆ ನಿರ್ಧಾರವು ಗಡಿಯಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.


