ಸಿದ್ದರಾಮಯ್ಯ ಸರ್ಕಾರದ 'ಕರ್ನಾಟಕ ದ್ವೇಷ ಭಾಷಣ ವಿಧೇಯಕ-2025' ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಅಸ್ಪಷ್ಟ ವ್ಯಾಖ್ಯಾನಗಳು ಮತ್ತು ಪೊಲೀಸರಿಗೆ ನೀಡಿದ ಅಪಾರ ಅಧಿಕಾರದಿಂದ, ಈ ಕಾನೂನು ರಾಜ್ಯದಲ್ಲಿ 'ಅಘೋಷಿತ ತುರ್ತು ಪರಿಸ್ಥಿತಿ' ಸೃಷ್ಟಿಸಿದೆ.

‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ಹೆಸರಿನಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಯತ್ನವು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ.

ಈ ವಿಧೇಯಕ ಮೇಲ್ನೋಟಕ್ಕೆ ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಮಾನತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಿದಂತೆ ತೋರುತ್ತದೆ. ಆದರೆ ಇದು ಭಾರತೀಯ ಸಂವಿಧಾನದ ಮೂಲ ಉದ್ದೇಶಕ್ಕೆ, ಸಂವಿಧಾನ ರಚನಾಕಾರರ ಮೂಲ ಆಶಯಗಳಿಗೆ ವಿರುದ್ಧವಾದ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣಗೊಳಿಸುವ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಹತ್ತಿಕ್ಕುವ ಅಪಾಯಕಾರಿ ಮಸೂದೆ ಎಂಬುದು ಸ್ಪಷ್ಟ. ಈ ವಿಧೇಯಕದ ಮೂಲಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆ ಸಂದರ್ಭದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಪ್ರಯತ್ನದಲ್ಲಿದೆ. ಇದು ಕೇವಲ ಕೇವಲ ರಾಜಕೀಯ ಆರೋಪವಲ್ಲ; ವಿಧೇಯಕದ ಪದ ಪದಗಳಲ್ಲಿ ಅಡಗಿರುವ ವಾಸ್ತವ.

ಭಾರತವು 1975-77ರ ನಡುವೆ ಅನುಭವಿಸಿದ ತುರ್ತು ಪರಿಸ್ಥಿತಿ ದೇಶದ ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ. ದೇಶದಾದ್ಯಂತ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು, ವಾಕ್ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಲಾಯಿತು, ವಿರೋಧ ಪಕ್ಷದ ನಾಯಕರು ಬಂಧಿಸಲ್ಪಟ್ಟರು, ಪತ್ರಿಕೋದ್ಯಮ ಕರಾಳ ಮೌನಕ್ಕೆ ಒಳಗಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಅದೇ ಮನೋಭಾವವನ್ನು, ಆದರೆ ಹೊಸ ಪದಗಳ ಅಡಿ ಮರುಸೃಷ್ಟಿ ಮಾಡಲು ಹೊರಟಿರುವುದು ಆಘಾತಕಾರಿ. ರಾಜ್ಯದ ಜನತೆಗೆ ಈ ವಿಧೇಯಕ ಮೂಲಕ ಅತೀ ದೊಡ್ಡ ಅಪಾಯ ತಂದೊಡ್ಡಿದ್ದಾರೆ.

ಅಸ್ಪಷ್ಟ ಮತ್ತು ಅಸಮರ್ಪಕ ವ್ಯಾಖ್ಯಾನ

ಈ ಮಸೂದೆಯಲ್ಲಿ ‘ದ್ವೇಷ ಭಾಷಣ(Hate Speech)’ ಮತ್ತು ‘ದ್ವೇಷ ಅಪರಾಧ’ (Hate Crime)ಗಳಿಗೆ ನೀಡಿರುವ ವ್ಯಾಖ್ಯಾನಗಳು ಅಸ್ಪಷ್ಟ ಹಾಗೂ ಅಸಮರ್ಪಕವಾಗಿವೆ. ಈ ಕಾನೂನಿನಲ್ಲಿ ಇರುವ ಬಹಳಷ್ಟು ವ್ಯಾಖ್ಯಾನಗಳು ವ್ಯಕ್ತಿಗತ ಅಭಿಪ್ರಾಯದ (personal interpretation ) ಮೇಲೆ ಅವಲಂಬಿತವಾಗಿದೆ. ಇವುಗಳೆಲ್ಲವೂ ವ್ಯಕ್ತಿ ನಿಷ್ಠವಾಗಿರುವುದರಿಂದ, ಇವುಗಳನ್ನು ಅಧಿಕಾರಿಗಳು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುವ ಅಪಾಯವಿದೆ.

ಉದಾಹರಣೆಗೆ: ಯಾವುದೇ ಸಮುದಾಯದ ಮನಸ್ಸಿನಲ್ಲಿ ಭೀತಿ ಉಂಟುಮಾಡುವ ಮಾತು, ಭಾವನಾತ್ಮಕ ಹಾನಿ ಉಂಟು ಮಾಡುವ ಅಭಿವ್ಯಕ್ತಿ, ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇರುವ ಹೇಳಿಕೆ... ಇಂತಹ ಪದಗಳಿಗೆ ಯಾವುದೇ ಸ್ಪಷ್ಟ ಕಾನೂನು ಮಾನದಂಡಗಳಿಲ್ಲ. ಸರ್ಕಾರದ ವಿರುದ್ಧದ ಒಂದು ಟೀಕೆ, ಒಂದು ಐತಿಹಾಸಿಕ ಸತ್ಯ, ಒಂದು ಧರ್ಮ ಗ್ರಂಥದ ಉಲ್ಲೇಖ (ಆಗ್ರಂಥಗಳಲ್ಲಿ ಅನ್ಯರ ಕುರಿತು ಇರುವ ಆಕ್ರಮಣಕಾರಿ ಹಾಗೂ ಹಿಂಸಾ ಪ್ರವೃತ್ತಿಯ ಮಾತುಗಳ ಉಲ್ಲೇಖ/ಉದಾಹರಣೆಗೆ ಒಂದು ಗ್ರಂಥದಲ್ಲಿರುವ ಸಾಲು ‘ಕಾಫೀರರನ್ನು ಕೊಲ್ಲು!’ ಎಂಬ ಹೇಳಿಕೆಯ ಉಲ್ಲೇಖ) ಇವೆಲ್ಲವನ್ನೂ ‘ದ್ವೇಷ ಭಾಷಣ’ ಎಂದು ಅರ್ಥೈಸಿ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಅವಕಾಶವನ್ನು ಸರ್ಕಾರಕ್ಕೆ ಹಾಗೂ ಅಧಿಕಾರಿ ವರ್ಗಕ್ಕೆ ಈ ವಿಧೇಯಕ ಕೊಡುತ್ತದೆ. ಇದು ಸರ್ಕಾರದ ವಿರೋಧಿಗಳನ್ನು ಹತ್ತಿಕ್ಕಲು ಆಡಳಿತ ಪಕ್ಷಕ್ಕೆ ನೀಡಿದ ಮುಕ್ತ ಪರವಾನಗಿಯಂತಿದೆ.

ದುರುಪಯೋಗ ಸಾಮಾನ್ಯವಾಗಲಿದೆ

ಪ್ರಸ್ತುತ ಕಾನೂನು ಯಾವ ಉದ್ದೇಶಕ್ಕೆ ಜಾರಿಗೆ ತರುತ್ತೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯೋ ಆ ಉದ್ದೇಶಕ್ಕಿಂತ ಅವು ದುರುಪಯೋಗಗೊಳ್ಳುವ ಸಾಧ್ಯತೆಯೇ ಅಧಿಕವಾಗಿ ಕಾಣುತ್ತಿದೆ. ಈ ವಿಧೇಯಕದಡಿ ವಿರೋಧ ಪಕ್ಷದ ನಾಯಕನ ಭಾಷಣ, ಸಾಮಾಜಿಕ ಜಾಲತಾಣದ ಪೋಸ್ಟ್, ವಾಟ್ಸಾಪ್ ಸಂದೇಶದ ಫಾರ್ವರ್ಡ್, ಧಾರ್ಮಿಕ ಅಥವಾ ಸಾಂಸ್ಕೃತಿಕ ಚರ್ಚೆ ಇವೆಲ್ಲವೂ ಅಪರಾಧದ ವ್ಯಾಪ್ತಿಗೆ ಬರಬಹುದು.

ಈ ವಿಧೇಯಕ ಕೇವಲ ರಾಜಕೀಯ ನಾಯಕರಿಗಷ್ಟೇ ಅಲ್ಲ; ಸಾಮಾನ್ಯ ನಾಗರಿಕನಿಗೂ ಭೀತಿಯ ವಾತಾವರಣ ಸೃಷ್ಟಿಸುತ್ತದೆ. ಒಬ್ಬ ರೈತ, ವಿದ್ಯಾರ್ಥಿ, ಶಿಕ್ಷಕ, ಗೃಹಿಣಿ ಅಥವಾ ಉದ್ಯೋಗಿ ಯಾರಾದರೂ ಒಂದು ಸಂದೇಶವನ್ನು ತಿಳಿಯದೆ ಫಾರ್ವರ್ಡ್ ಮಾಡಿದರೂ ಅದು ‘ದ್ವೇಷ ಭಾಷಣ’ ಎಂದು ಪರಿಗಣಿಸಿದರೆ ಬಂಧನ, ಪ್ರಕರಣ, ಜೈಲು ಶಿಕ್ಷೆ ಎದುರಿಸಬೇಕಾಗಬಹುದು. ಇದು ಕಾನೂನಿನ ಮೂಲಕ ಭಯದ ಸಂಸ್ಕೃತಿಯನ್ನು ಜನರ ಮನದಲ್ಲಿ ನೆಲೆಗೊಳಿಸುವ ಪ್ರಯತ್ನ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಪೊಲೀಸ್ ರಾಜ್ಯವಾಗುವತ್ತ ಕರ್ನಾಟಕ

ವಿಧೇಯಕದಲ್ಲಿ ಪೊಲೀಸ್ ಇಲಾಖೆಗೆ ನೀಡಲಾಗಿರುವ ಅಧಿಕಾರಗಳನ್ನು ಒಮ್ಮೆ ಗಮನಿಸೋಣ.

1. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವ ಹಕ್ಕು 2.ಅಗತ್ಯವಿಲ್ಲದ ಬಂಧನ 3. ವಿಸ್ತೃತ ತನಿಖಾ ಅಧಿಕಾರ 4. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಕ್ರಮ.

ಇವುಗಳೆಲ್ಲವೂ ಕರ್ನಾಟಕ ರಾಜ್ಯವನ್ನು ಒಂದು ಪೊಲೀಸ್ ರಾಜ್ಯದತ್ತ ಕರೆದೊಯ್ಯುವ ಲಕ್ಷಣಗಳಾಗಿವೆ. ಸರ್ಕಾರ ನೆನಪಿಡಬೇಕಾದ ಅಂಶ ಏನೆಂದರೆ, ಪ್ರಜಾಪ್ರಭುತ್ವದಲ್ಲಿ ಪೊಲೀಸರು ಕಾನೂನಿನ ಸೇವಕರೇ ಹೊರತು ಆಡಳಿತ ಪಕ್ಷದ ಕೈಯಲ್ಲಿನ ರಾಜಕೀಯ ಅಸ್ತ್ರವಲ್ಲ.

ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕತ್ತರಿ

ಈ ವಿಧೇಯಕ ಜಾರಿಗೆ ಬಂದರೆ, ಪತ್ರಕರ್ತರು: ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಲು ಭಯಪಡುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳು ಹೆದರಿಕೊಳ್ಳುವ ಸಾಧ್ಯತೆ ಇದೆ. ಪ್ರತಿಯೊಬ್ಬ ಪತ್ರಕರ್ತನೂ, ಪ್ರತಿಯೊಂದು ಪತ್ರಿಕೆ ಸರ್ಕಾರ ಅಥವಾ ಸಮಾಜದ ಕುರಿತಾಗಿ ಏನೇ ಸತ್ಯವನ್ನು ಹೇಳುವ ಮೊದಲು ‘ಇದು ದ್ವೇಷ ಭಾಷಣವಾಗುತ್ತದೆಯೇ?’ ಎಂಬ ಆತಂಕದಿಂದಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಕಾಯಿದೆ ಸ್ವತಂತ್ರ ಪತ್ರಿಕೋದ್ಯಮಕ್ಕೆ ಮರಣಗಂಟೆಯಾಗುವ ಸಾಧ್ಯತೆ ತಪ್ಪಿದ್ದಲ್ಲ. ಸಾಮಾಜಿಕ ಮಾಧ್ಯಮ ಕರಾಳ ಮೌನಕ್ಕೆ ಶರಣಾಗಲಿದೆ. ಇಂದು ಸಾಮಾಜಿಕ ಮಾಧ್ಯಮ ಎಂದರೆ ಅದು ರಾಜ್ಯದ, ದೇಶದ ಸಾಮಾನ್ಯ ನಾಗರಿಕನ ಧ್ವನಿ. ಆದರೆ ಈ ವಿಧೇಯಕ ಜಾರಿಗೆ ಬಂದ ನಂತರ... ಸರ್ಕಾರದ ವಿರುದ್ಧ ಒಂದು ಪೋಸ್ಟ್ = ಅಪರಾಧ. ಇತಿಹಾಸದ ಚರ್ಚೆ = ದ್ವೇಷ. ಸಾಂಸ್ಕೃತಿಕ ಅಭಿಪ್ರಾಯ = ಅಪರಾಧ.

ಹೀಗೆ ಸಮಾಜದ ಪ್ರತಿ ಧ್ವನಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ, ಸಾಮಾಜಿಕ ಮಾಧ್ಯಮದ ಮೇಲೆ ತೂಗುಗತ್ತಿಯಾಗಿ ಪರಿಣಮಿಸಲಿದೆ. ಏಕಮುಖಿ ಪತ್ರಿಕೋದ್ಯಮಕ್ಕೆ ಪರ್ಯಾಯವಾಗಿ ಬೆಳೆದ ಡಿಜಿಟಲ್ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡು ಡಿಜಿಟಲ್ ಸೆನ್ಸಾರ್‌ಶಿಪ್‌ಗೆ ದಾರಿ ಮಾಡಿಕೊಡುತ್ತದೆ.

ಸಂವಿಧಾನಾತ್ಮಕ ವಿರೋಧಾಭಾಸ

ಭಾರತೀಯ ಸಂವಿಧಾನದ ಆರ್ಟಿಕಲ್ 19(1)(a) ನಾಗರಿಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುತ್ತದೆ. ಈ ವಿಧೇಯಕ ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲಾ ಮಾನದಂಡಗಳನ್ನೂ ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ ಆಶಯಗಳಿಗೆ ಮಣ್ಣೆರಚುವ ಕೆಲಸ ಮಾಡುತ್ತದೆ. ಬಹು ಮುಖ್ಯವಾಗಿ ಸಂವಿಧಾನದ ಮೂಲ ಆಶಯ ಬದಲಾಯಿಸುವ ಯಾವುದೇ ಕಾನೂನನ್ನು ರಚಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲ, ಇದು ಕೇಂದ್ರ ಸರ್ಕಾರದ ಪರಮಾಧಿಕಾರ. ಇದನ್ನು ಹಲವು ಪ್ರಸಂಗಗಳಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ದೇಶದ ನಾಗರಿಕನ ಮೂಲಭೂತ ಹಕ್ಕನ್ನು ಕಸಿಯುವುದರಿಂದ ಈ ಕಾನೂನು ಅಸಂವಿಧಾನಾತ್ಮಕ.

ಈಗಾಗಲೇ ಕೇಂದ್ರ ಸರ್ಕಾರ ಜಾರಿತಂದಿರುವ ಭಾರತೀಯ ನ್ಯಾಯ ಸಂಹಿತೆ-2023 ಕಾನೂನಿನಲ್ಲಿ ಕಲಂ 196, 299 ಮತ್ತು 353ರಲ್ಲಿ ಈ ವಿಧೇಯಕದ ಅಂಶಗಳು ಇವೆ. ಆದಾಗ್ಯೂ ಇಂಥ ರಾಷ್ಟ್ರವ್ಯಾಪಿ ಪರಿಣಾಮ ಬೀರುವ ಗಂಭೀರ ಕಾನೂನನ್ನು ಸಮನ್ವಯವಿಲ್ಲದೆ ಏಕಪಕ್ಷೀಯವಾಗಿ ತರಲು ಹೊರಟಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಮಾನ.

ಯಾಕೆ ವಿರೋಧಿಸಬೇಕು?

ಇಂದು ಇದು ಕೇವಲ ಒಂದು ರಾಜ್ಯದ ಕಾನೂನು ಆಗಿರಬಹುದು. ಆದರೆ ನಾಳೆ ಇದೇ ಮನಸ್ಥಿತಿ ದೇಶದಾದ್ಯಂತ ಹಬ್ಬಿ ಅಪಾಯಕಾರಿ ಕಾನೂನಿನ ಮಾದರಿ ಆಗಬಹುದು. ಇಂದು ಕರ್ನಾಟಕ, ನಾಳೆ ತೆಲಂಗಾಣ, ಕೇರಳ ಹೀಗೆ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ಸರ್ಕಾರ ಇರುವ ಇತರೆ ರಾಜ್ಯಗಳು ಇದೇ ಮಾದರಿಯ ಕಾನೂನು ತರಬಹುದು. ಹೀಗಾಗಿ ವಿರೋಧ ಪಕ್ಷ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ನಂಬುವ ಪ್ರತಿಯೊಬ್ಬ ನಾಗರಿಕ, ಬುದ್ಧಿಜೀವಿ, ಪತ್ರಕರ್ತ, ವಿದ್ಯಾರ್ಥಿ ಎಲ್ಲರೂ ಈ ಕ್ರೂರ, ಪ್ರಜಾಪ್ರಭುತ್ವ ವಿರೋಧಿ ಕಾನೂನು ವಿರೋಧಿಸಬೇಕಾಗಿದೆ. ರಾಜ್ಯದಲ್ಲಿ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಈ ವಿಧೇಯಕ ರದ್ದಾಗಲೇಬೇಕು.

ಈ ಕ್ರೂರ ಕಾನೂನಿನ ಮುಂದೆ ಸಮಾನತೆ-ಕೇವಲ ಮಾತು?

ಈ ವಿಧೇಯಕವನ್ನು ಆಯ್ದ ಕೆಲ ಸಮುದಾಯಗಳ ವಿರುದ್ಧ ಮಾತ್ರ ಬಳಸಲಾಗುವುದಿಲ್ಲ ಎಂಬ ಭರವಸೆ ಎಲ್ಲಿದೆ? ಆಡಳಿತ ಪಕ್ಷಕ್ಕೆ ಅನುಕೂಲಕರವಾದ ಹೇಳಿಕೆಗಳಿಗೆ, ಆಡಳಿತದಲ್ಲಿರುವವರ ಸಿದ್ಧಾಂತದ ಪರವಾಗಿರುವ ಚರ್ಚೆಗಳಿಗೆ ‘ಸಾಥ್ ಕೂನ್ ಮಾಫ್’ ಎಂಬ ಮನೋಭಾವ ಹಾಗು ತಮಗಿಂತ ಭಿನ್ನ ಸೈದ್ಧಾಂತಿಕ ಹಿನ್ನೆಲೆ ಹೊಂದಿರುವ ಸಂಘಟನೆಗಳಿಗೆ, ರಾಜಕೀಯ, ಸೈದ್ಧಾಂತಿಕ, ವಿರೋಧಿಗಳ ಮಾತಿಗೆ ಇದು ಕಾನೂನು ಆಗಿ ಪರಿಣಮಿಸುವುದು ಸಂವಿಧಾನಾತ್ಮಕ ಸಮಾನತೆಯ ತತ್ವವಲ್ಲ.

ದ್ವೇಷ, ಹಿಂಸೆ, ಅಪರಾಧಗಳನ್ನು ತಡೆಯಬೇಕಾದರೆ, ಈಗಿರುವ IPC / BNS ಕಲಂಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ ಸುಧಾರಿಸಬೇಕು. ನಾಗರಿಕ ಬಂಧುಗಳಿಗೆ ಈ ಕುರಿತಾಗಿ ಶಿಕ್ಷಣ ಮತ್ತು ಸಂವಾದಕ್ಕೆ ಒತ್ತು ನೀಡಬೇಕೇ ವಿನಃ ಭಯ ಹುಟ್ಟಿಸುವ ಕಾನೂನು ಪರಿಹಾರವಲ್ಲ. ‘ದ್ವೇಷ ಭಾಷಣ’ ಎಂಬ ಗೋವಿನ ಮುಖದ ಹಿಂದೆ, ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ತೋಳಮುಖದ ‘ಅಘೋಷಿತ ತುರ್ತು ಪರಿಸ್ಥಿತಿ’ ಹೇರುವ ಪ್ರಯತ್ನದಲ್ಲಿದೆ. ಇದು ಕೇವಲ ಒಂದು ಮಸೂದೆ ಅಲ್ಲ; ನಾಗರಿಕ ಸ್ವಾತಂತ್ರ್ಯದ ಮೇಲಿನ ದಾಳಿ, ಪ್ರಜಾಪ್ರಭುತ್ವಕ್ಕೆ ಅಪಾಯ, ಮತ್ತು ರಾಜ್ಯದ ಭವಿಷ್ಯದ ಮೇಲೆ ಬೀಳುವ ಕರಿ ನೆರಳು. ಇದನ್ನು ಈಗಲೇ ತಡೆದಿಲ್ಲವೆಂದಾದರೆ , ನಾಳೆ ನಾಗರಿಕರ ಮಾತಾಡುವ ಹಕ್ಕೇ (Right to Free Speech) ಅಪರಾಧವಾಗಬಹುದು