ಕರ್ನಾಟಕ ಗೃಹ ಸಚಿವರ ವಾಹನಕ್ಕೆ ಸಂಚಾರ ನಿಯಮ ಉಲ್ಲಂಘನೆಗಾಗಿ 4,500 ರೂ. ದಂಡ ವಿಧಿಸಲಾಗಿದೆ. ಮುಖ್ಯಮಂತ್ರಿಗಳ ವಾಹನಕ್ಕೂ ಇತ್ತೀಚೆಗೆ ದಂಡ ವಿಧಿಸಲಾಗಿತ್ತು. ಈ ಘಟನೆಗಳು 'ನಿಯಮ ಎಲ್ಲರಿಗೂ ಒಂದೇ' ಎಂಬ ಸಂದೇಶ ಸಾರುತ್ತಿವೆ.
ಬೆಂಗಳೂರು(ಸೆ.6): ಕರ್ನಾಟಕದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ವಾಹನ (KA04GB0555) ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದ್ದು, ರಿಯಾಯಿತಿ ದರದಲ್ಲಿ 4,500 ರೂಪಾಯಿ ದಂಡವನ್ನು ಪಾವತಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಟೊಯೊಟಾ ಫಾರ್ಚುನರ್ ಕಾರ್‌ಗೆ ಸಂಚಾರ ನಿಯಮ ಉಲ್ಲಂಘನೆಗಾಗಿ ಬೆಂಗಳೂರು ಸಂಚಾರ ಪೊಲೀಸರು ದಂಡ ವಿಧಿಸಿದ್ದರು. ಸೀಟ್ ಬೆಲ್ಟ್ ಧರಿಸದೆ ಆರು ಬಾರಿ ಸಂಚಾರ ಮಾಡಿದ್ದ ಸಿಎಂ ಅವರ ವಾಹನಕ್ಕೆ 50% ರಿಯಾಯಿತಿ ಆಫರ್‌ನಡಿ 2,500 ರೂಪಾಯಿ ದಂಡವನ್ನು ಪಾವತಿಸಲಾಗಿತ್ತು.
ಸಾರ್ವಜನಿಕರ ಒತ್ತಡ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾದ ನಂತರ ಸಿಎಂ ದಂಡವನ್ನು ಕಟ್ಟಿದ್ದರು. ಇದೀಗ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ವಾಹನಕ್ಕೂ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ರಿಯಾಯಿತಿ ಆಧಾರದಲ್ಲಿ 4,500 ರೂಪಾಯಿ ದಂಡವನ್ನು ಪಾವತಿಸಿ, ಅಧಿಕಾರಿಗಳು ವಿಷಯವನ್ನು ಕ್ಲಿಯರ್ ಮಾಡಿದ್ದಾರೆ.
ಈ ಘಟನೆಯು ರಾಜ್ಯದ ಗಣ್ಯರೂ ಸಹ ಸಂಚಾರ ನಿಯಮಗಳಿಗೆ ಬದ್ಧರಾಗಿರಬೇಕು ಎಂಬ ಸಂದೇಶವನ್ನು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, 'ನಿಯಮ ಎಲ್ಲರಿಗೂ ಒಂದೇ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರ ಕಟ್ಟುನಿಟ್ಟಿನ ಕ್ರಮವನ್ನು ಕೆಲವರು ಶ್ಲಾಘಿಸಿದರೆ, ರಿಯಾಯಿತಿ ದರದಲ್ಲಿ ದಂಡ ಪಾವತಿಯ ವಿಷಯವು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ರಾಜ್ಯದ ಸಿಎಂ, ಗೃಹ ಸಚಿವರು ಸಹ ಟ್ರಾಫಿಕ್ ಉಲ್ಲಂಘನೆಗೆ ದಂಡ ಪಾವತಿಸಿರುವುದು. ಸಂಚಾರ ನಿಯಮಗಳ ಪಾಲನೆಯ ಮಹತ್ವವನ್ನುತೋರಿಸಿದೆ. ಇದರಿಂದಾಗಿ ಸಾಮಾನ್ಯ ಜನರು ಮತ್ತು ಗಣ್ಯರೆಲ್ಲರೂ ಕಾನೂನಿನ ಮುಂದೆ ಸಮಾನ ಎಂಬ ಸಂದೇಶವನ್ನುನೀಡಿದೆ.
