ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ತುಮಕೂರಿನ ಕೈಗಾರಿಕಾ ಅಭಿವೃದ್ಧಿಗೆ ಸಂಪರ್ಕ ಅಗತ್ಯವಿದ್ದು, ಪಿಪಿಪಿ ಮಾದರಿಯಲ್ಲಿ ಹೂಡಿಕೆದಾರರು ಸಿದ್ಧರಿದ್ದಾರೆ ಎಂದಿದ್ದಾರೆ. ಈ ವಿಚಾರಗಳು ಸಂಸದ ತೇಜಸ್ವಿ ಸೂರ್ಯ ಅವರ ಗಮನದಲ್ಲಿಲ್ಲ ಎಂದರು.
ಬೆಂಗಳೂರು (ನ.19): ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆ ರೂಪಿಸುತ್ತಿದ್ದೇವೆ. ಈ ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿ ಸೂರ್ಯ ಅವರ ಗಮನದಲ್ಲಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್‌ಶಿಪ್‌ಗೆ ಜಾಗ ಕೊಟ್ಟಿದ್ದೇವೆ. ತುಮಕೂರು ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ (ಕನೆಕ್ಟಿವಿಟಿ) ವ್ಯವಸ್ಥೆ ಬೇಕಿದೆ. ರಸ್ತೆ, ಮೆಟ್ರೋ, ರೈಲು ಸಂಪರ್ಕ ಇದ್ದರೆ ಒಳ್ಳೆಯದು. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.
ಸಂಸದ ತೇಜಸ್ವಿಗೆ ಈ ಬಗ್ಗೆ ಅರಿವಿಲ್ಲ
ಈ ಮೆಟ್ರೋ ಯೋಜನೆಯಲ್ಲಿ ಎರಡ್ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಕುರಿತು ಹೂಡಿಕೆಗೆ ಸಿದ್ಧರಿದ್ದೇವೆ ಎಂಬುದಾಗಿ ಕತಾರ್ ಮೂಲದ ಕಂಪನಿ ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಪತ್ರ ನೀಡಿದ್ದಾರೆ. ಇಷ್ಟೆಲ್ಲ ಆಗಿರುವಾಗ, ಸಂಸದ ತೇಜಸ್ವಿ ಸೂರ್ಯ ಏನೂ ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ನಾನು ಅವರೊಂದಿಗೆ ಮಾತಾಡುತ್ತೇನೆ ಎಂದರು.


