ಬೆಂಗಳೂರಿನಲ್ಲಿ ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನನ್ನು, ಪೊಲೀಸ್ ಕಾನ್ಸ್ಟೇಬಲ್ ಹಣಮಂತ ಪುಟಾಣಿ ಸುಮಾರು ಒಂದು ಕಿಲೋಮೀಟರ್ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತ ಆರೋಪಿ ಸೈಯದ್ ಜಾಫರ್ನಿಂದ 6 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು (ಫೆ. 17): ರಾಜಧಾನಿಯಲ್ಲಿ ಹಾಡಹಗಲೇ ಸರಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೆಚ್ಚೆದೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸುಮಾರು ಒಂದು ಕಿಲೋಮೀಟರ್ ಬೆನ್ನಟ್ಟಿ ಹಿಡಿದಿರುವ ಸಾಹಸಮಯ ಘಟನೆ ಬೆಳಕಿಗೆ ಬಂದಿದೆ.
ಸಿನಿಮಾ ಸ್ಟೈಲ್ನಲ್ಲಿ ಆರೋಪಿಯ ಬೆನ್ನಟ್ಟಿದ ಕಾನ್ಸ್ಟೇಬಲ್
ಫೆಬ್ರವರಿ 5 ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ರಾಕ್ಷಾಯಣಿ ಎಂಬ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಆರೋಪಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಈ ವೇಳೆ ಸ್ಥಳದಲ್ಲಿದ್ದ ಸಶಸ್ತ್ರ ಮೀಸಲು ಪಡೆಯ (CAR) ಕಾನ್ಸ್ಟೇಬಲ್ ಹಣಮಂತ ಪುಟಾಣಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನು ಬಿಡದ ಹಣಮಂತ ಅವರು, ಸತತ ಒಂದು ಕಿಲೋಮೀಟರ್ ವರೆಗೆ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಕೊನೆಗೂ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
ಬಂಧಿತ ಆರೋಪಿಯನ್ನು ಸೈಯದ್ ಜಾಫರ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನಿಂದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ, 40 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಕರ್ತವ್ಯ ಪ್ರಜ್ಞೆ ಮೆರೆದ ಕಾನ್ಸ್ಟೇಬಲ್ ಹಣಮಂತ ಪುಟಾಣಿ ಅವರ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.ಇನ್ನು ಸಾರ್ವಜನಿಕ ವಲಯದಲ್ಲಿ ಪೊಲೀಸ್ ಬೆನ್ನಟ್ಟಿ ಕಳ್ಳನನ್ನ ಹಿಡಿದ ಪರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



