ಪರವಾನಗಿ ಭೂಮಾಪಕರು ಖಾಯಮಾತಿಗಾಗಿ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಭೂಮಾಪನ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ತಾಲೂಕಿನಲ್ಲಿ 710ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಾಗಿದ್ದು, ಜಮೀನು ನೋಂದಣಿ, ಖರೀದಿ-ಮಾರಾಟದಂತಹ ಪ್ರಮುಖ ವ್ಯವಹಾರಗಳು ನಿಂತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವರದಿ: ರಾಂ ಅಜೆಕಾರು
ಕಾರ್ಕಳ: ರಾಜ್ಯದ ಪರವಾನಗಿ ಹೊಂದಿದ ಭೂಮಾಪಕರನ್ನು (ಲೈಸೆನ್ಸ್ ಸರ್ವೆಯರ್‌ಗಳನ್ನು) ಖಾಯಂಗೊಳಿಸುವಂತೆ ಒತ್ತಾಯಿಸಿ ಕಳೆದ 50 ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ ಪ್ರತಿಭಟನೆಯಿಂದಾಗಿ ಕಾರ್ಕಳ ತಾಲೂಕಿನಲ್ಲಿ ಭೂಮಾಪನ ಸಂಬಂಧಿತ ಎಲ್ಲ ಪ್ರಮುಖ ಸೇವೆಗಳು ಸ್ಥಗಿತಗೊಂಡಿದ್ದು, ಸಾರ್ವಜನಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಆಲಿನೇಷನ್, ಹದ್ದುಬಸ್ತು, ತತ್ಕಾಲ್ ಪೋಡಿ ಸೇರಿದಂತೆ ಒಟ್ಟು 710 ಅರ್ಜಿಗಳು ಬಾಕಿ ಉಳಿದಿವೆ. ಇದರಲ್ಲಿ ಹೆಬ್ರಿ ಭಾಗದಲ್ಲೇ 166 ಅರ್ಜಿಗಳು ಇನ್ನೂ ನಿರ್ವಹಣೆಯಾಗದೇ ಉಳಿದಿವೆ. ಕಾರ್ಕಳ ತಾಲ್ಲೂಕಿನಲ್ಲಿ ಒಟ್ಟು 39 ಗ್ರಾಮಗಳಿದ್ದು, ಹೆಬ್ರಿ ಭಾಗದಲ್ಲಿ 16 ಗ್ರಾಮಗಳಿವೆ. ಈ ಎಲ್ಲ ಪ್ರದೇಶಗಳಲ್ಲಿ ಭೂಮಾಪನ ಕಾರ್ಯಗಳು ಸಂಪೂರ್ಣವಾಗಿ ನಿಂತಿರುವುದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ.
ಪ್ರಸ್ತುತ ಕಾರ್ಕಳದಲ್ಲಿ 21 ಮಂದಿ ಹಾಗೂ ಹೆಬ್ರಿಯಲ್ಲಿ 6 ಮಂದಿ ಪರವಾನಗಿ ಹೊಂದಿದ ಭೂಮಾಪಕರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರು ಕಾರ್ಯನಿರ್ವಹಣೆ ನಿಲ್ಲಿಸಿದ್ದಾರೆ.
ಇದರಿಂದಾಗಿ ಜಮೀನು ರಿಜಿಸ್ಟ್ರೇಷನ್, ಖರೀದಿ–ಮಾರಾಟ, ದಾನಪತ್ರ ಸೇರಿದಂತೆ ಪ್ರಮುಖ ವ್ಯವಹಾರಗಳು ಸಂಪೂರ್ಣವಾಗಿ ನಿಂತಿವೆ. ಜಮೀನು ಖರೀದಿಸಲು ಮುಂಗಡ ಒಪ್ಪಂದ ಮಾಡಿಕೊಂಡಿದ್ದವರು ಹಣಕಾಸಿನ ಒತ್ತಡಕ್ಕೆ ಒಳಗಾಗಿದ್ದು, ಸಾಲ ಪಡೆದು ವ್ಯವಹಾರ ಆರಂಭಿಸಲು ಯೋಚಿಸಿದ್ದವರು ಸಮಸ್ಯೆಗೆ ಸಿಲುಕಿದ್ದಾರೆ. ಮನೆ ನಿರ್ಮಾಣ, ಕೃಷಿ ವಿಸ್ತರಣೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಭೂಮಿ ಬಳಸಲು ಮುಂದಾದವರ ಯೋಜನೆಗಳು ಅಸ್ಥವ್ಯಸ್ತಗೊಂಡಿವೆ.
ವಿದೇಶಗಳಿಂದ ಅಥವಾ ಇತರ ರಾಜ್ಯಗಳಿಂದ ಸ್ವಗ್ರಾಮಕ್ಕೆ ಬಂದಿರುವವರು ತಮ್ಮ ಜಮೀನಿನ ನೋಂದಣಿ ಅಥವಾ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮಯದ ಅಭಾವದಿಂದ ಮತ್ತೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗುತ್ತಿದ್ದು, ಇದರಿಂದ ಅವರಿಗೆ ಆರ್ಥಿಕ ನಷ್ಟವೂ ಉಂಟಾಗಿದೆ.
ರೈತ ವರ್ಗಕ್ಕೂ ಈ ಪರಿಸ್ಥಿತಿ ದೊಡ್ಡ ಹೊಡೆತ ನೀಡಿದೆ. ಹದ್ದುಬಸ್ತು, ಆಲಿನೇಷನ್, ಪೋಡಿ ಮುಂತಾದ ಭೂಮಾಪನ ಪ್ರಕ್ರಿಯೆಗಳು ನಡೆಯದೆ ಇರುವುದರಿಂದ ಜಮೀನಿನ ಗಡಿ ವಿವಾದಗಳು ಬಗೆಹರಿಯುತ್ತಿಲ್ಲ. ಇದರಿಂದ ನೆರೆಹೊರೆಯವರ ನಡುವೆ ಕಲಹಗಳು ಹೆಚ್ಚುವ ಸಾಧ್ಯತೆ ಇದೆ. ಕೃಷಿ ಸಾಲ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿಭಟನೆಗೆ ಕಾರಣವೇನು?
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಹಾಗೂ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಭೂಮಾಪಕರು ಹೋರಾಟಕ್ಕೆ ಇಳಿದಿದ್ದಾರೆ.
ಪ್ರಸ್ತುತ ದರ್ಕಾಸು ಪೋಡಿ ಸೇರಿದಂತೆ ಭೂಮಾಪನ ಸಂಬಂಧಿತ ಕಾರ್ಯಗಳಿಗೆ ಸರ್ಕಾರ ನಿಗದಿಪಡಿಸಿರುವ ದರ ಕೇವಲ ₹160 ಮಾತ್ರ. ಗ್ರಾಮಾಂತರ ಪ್ರದೇಶಗಳಲ್ಲಿ ದೂರದೂರಿಗೆ ಪ್ರಯಾಣಿಸಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಈ ಮೊತ್ತ ಪ್ರಯಾಣ ವೆಚ್ಚಕ್ಕೂ ಸಾಕಾಗುತ್ತಿಲ್ಲ ಎಂದು ಭೂಮಾಪಕರು ಆರೋಪಿಸುತ್ತಿದ್ದಾರೆ. ಇದರಿಂದ ತಮ್ಮ ಕೆಲಸದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದೇವೆ ಎಂಬುದು ಅವರ ಅಸಮಾಧಾನವಾಗಿದೆ.
ಇದಲ್ಲದೆ, ಭೂಮಾಪನ ಕಾರ್ಯಕ್ಕೆ ಅಗತ್ಯವಾದ ಚೈನ್ ಮ್ಯಾನ್” (ಬಾಂದೂ ಜವಾನರು) ಸೌಲಭ್ಯವೂ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಹಾಯಕ ಸಿಬ್ಬಂದಿಗೆ ಸರ್ಕಾರದಿಂದ ಯಾವುದೇ ಸಂಬಳ ಅಥವಾ ಭತ್ಯೆ ನೀಡಲಾಗುತ್ತಿಲ್ಲ. ಇದರಿಂದ ಸರ್ವೇಯರ್‌ಗಳು ತಮ್ಮ ಖರ್ಚಿನಲ್ಲಿ ಸಹಾಯಕರನ್ನು ನೇಮಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಸೌಕರ್ಯಗಳ ಕೊರತೆ, ಸಮರ್ಪಕ ವೇತನದ ಅಭಾವ ಹಾಗೂ ಉದ್ಯೋಗ ಭದ್ರತೆ ಇಲ್ಲದಿರುವುದು . ಭೂಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಖಾಯಂ ಹುದ್ದೆ ನೀಡದಿರುವುದನ್ನು ವಿರೋಧಿಸಿ ತಮ್ಮ ಹಕ್ಕುಗಳಿಗಾಗಿ ಈ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವೆ ಖಾಯಂಗೊಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ದರ್ಖಾಸ್ ಪೋಡಿಗೆ ಸರ್ಕಾರ 160 ರುಪಾಯಿ ನಿಗದಿಪಡಿಸಿದೆ. ಈ ದರ ಪ್ರಯಾಣ ವೆಚ್ಚಕ್ಕೂ ಸಾಲದು. ಚೈನ್ ಮ್ಯಾನ್’ ಸೌಲಭ್ಯವೂ ಇಲ್ಲ, ಸಹಾಯಕರಿಗೆ ಸಂಬಳವಿಲ್ಲ. ಸೌಕರ್ಯಗಳ ಕೊರತೆಯಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ತಕ್ಷಣವೇ ವೇತನ ಪರಿಷ್ಕರಣೆ ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು,
ನಟರಾಜ್ ಅಧ್ಯಕ್ಷರು ಪರವಾನಗಿ ಭೂ ಮಾಪಕರ ಸಂಘ ಕಾರ್ಕಳ


