ಕಲಬುರಗಿ ಹೊರವಲಯದ ಪಾಣೆಗಾಂವ್ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಎತ್ತಿನ ಮೇಲೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ಚಿರತೆ ಭೀತಿಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಕಲಬುರಗಿ(ಆ.8): ಕಲಬುರಗಿ ಹೊರವಲಯದ ಪಾಣೆಗಾಂವ್ ಗ್ರಾಮದ ಹೊಲದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಚಿರತೆಯು ಹೊಲದಲ್ಲಿ ಕಟ್ಟಿದ್ದ ಎತ್ತಿನ ಮೇಲೆ ದಾಳಿ ಮಾಡಿ, ಎತ್ತಿನ ಮುಖಕ್ಕೆ ಪರಚಿ ಗಾಯಗೊಳಿಸಿದೆ. ನಾಯಿಯ ತೀವ್ರ ಬೊಗಳುವಿಕೆಯನ್ನು ಗಮನಿಸಿ ಓಡಿ ಬಂದ ಕಾರ್ಮಿಕರ ಕೂಗಾಟಕ್ಕೆ ಭಯಗೊಂಡ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ದಾಳಿಯ ಶೈಲಿ ಹಾಗೂ ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ಪಾಣೆಗಾಂವ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.
ಗ್ರಾಮ ಪಂಚಾಯತ್ ಕೂಡ ಡಂಗೂರ ಸಾರಿ ಎಚ್ಚರಿಕೆಯ ಸಂದೇಶವನ್ನು ಗ್ರಾಮಸ್ಥರಿಗೆ ತಲುಪಿಸಿದೆ. ಅರಣ್ಯ ಇಲಾಖೆಯಿಂದ ಪಾಣೆಗಾಂವ್ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನಿರಂತರ ಗಸ್ತು ತಿರುಗುವಿಕೆ ಆರಂಭವಾಗಿದ್ದು, ಚಿರತೆಯ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಸಿಕ್ಕರೆ ಬೋನ್ ಇರಿಸಿ ಸೆರೆಹಿಡಿಯುವ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಚಿರತೆಯ ಭೀತಿಯಿಂದಾಗಿ ಪಾಣೆಗಾಂವ್ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಕೃಷಿ ಕಾರ್ಮಿಕರು ಹೊಲಕ್ಕೆ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದು, ಮನೆಯಲ್ಲಿದ್ದರೂ ರಾತ್ರಿಯ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಶೀಘ್ರವಾಗಿ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


