ಲೋಕಾಯುಕ್ತರು ರಾಜ್ಯದ ಏಳು ಜಿಲ್ಲೆಗಳ ೪೦ ಸ್ಥಳಗಳಲ್ಲಿ ಏಕಕಾಲಿಕ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಏಳು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ತುಮಕೂರು, ಮಂಗಳೂರು, ವಿಜಯಪುರ, ಬೆಂಗಳೂರು, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ಮುಂದುವರೆದಿದೆ.

ಬೆಂಗಳೂರು (ಮೇ 15): ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಏಕಾಕಾಲಕ್ಕೆ 40 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ. ಬೆಂಗಳೂರು, ಮಂಗಳೂರು, ಯಾದಗಿರಿ, ವಿಜಯಪುರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇತರೆ ನೆಲೆಗಳ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಕೆಲವು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದ 7 ಜಿಲ್ಲೆಯ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ತುಮಕೂರು,ಮಂಗಳೂರು,ವಿಜಯಪುರ,ಬೆಂಗಳೂರು‌ನಗರ ,ಬೆಂಗಳೂರು, ಯಾದಗಿರಿ, ಜಿಲ್ಲೆಗಳಲ್ಲಿ ದಾಳಿ ಮಾಡಿ ರಾಜ್ಯದ ಜನರು ಭ್ರಷ್ಟರು ಎಂದು ಆರೋಪ ಮಾಡಲಾದ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

1) ರಾಜಶೇಖರ್ ನಿರ್ಮಿತಿ ಕೇಂದ್ರದ‌ ನಿರ್ದೇಶಕರು ತುಮಕೂರು 
2) ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದ.ಕ ಮಂಗಳೂರು
3) ರೇಣುಕಾ. ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿಜಯಪುರ.
4) ಮುರಳಿ ಟಿವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಬೆಂಗಳೂರು ನಗರ 
5) ಎಚ್ ಆರ್ ನಟರಾಜ್, ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ ಬೆಂಗಳೂರು
6) ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಛೇರಿ,ಬೆಂಗಳೂರು ಗ್ರಾಮಾಂತರ
7) ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ

ರಾಜ್ಯದಾದ್ಯಂತ 7 ಅಧಿಕಾರಿಗಳಿಗೆ ಸೇರಿದಂತೆ ಮನೆ, ಕಚೇರಿ, ಗೋಡೋನ್, ಸಂಬಂಧಿಕರ ಮನೆಗಳು ಸೇರಿದಂತೆ 40 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ 12 ಕಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 8 ಕಡೆ, ಯಾದಗಿರಿ 5, ವಿಜಯಪುರ 4 ಹಾಗೂ ಮಂಗಳೂರಿನ 4 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 12 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮೂರು ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ರೈಡ್ ಮಾಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕಲಬುರಗಿ: ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿಮ ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಶಹಾಪೂರ ತಹಸಿಲ್ದಾರ ಮನೆ ಮೇಲೆ ದಾಳಿ. ಅದೇ ರೀತಿ ಶಹಾಪೂರದಲ್ಲಿರುವ ತಹಸಿಲ್ದಾರ್ ಕಛೇರಿ ಮೇಲೂ ದಾಳಿ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ. ಬೆಳಂ ಬೆಳಿಗ್ಗೆ ದಾಳಿ ನಡೆಸಿ ಬ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್.ಇನಾಂದಾರ್‌ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇನ್ಸ್‌ಪೆಕ್ಟರ್ ಗಳಾದ ಸಿದ್ದರಾಯ, ಸಂಗಮೇಶ, ಅರ್ಜುನಪ್ಪ, ಅಕ್ಕಮಹಾದೇವಿ, ಬಾಬಾ ಸಾಹೇಬ ಪಾಟೀಲ್ ಅವರೂ ಇದ್ದಾರೆ.

ತುಮಕೂರು: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ತುಮಕೂರಿನ ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ತುಮಕೂರು ಅಶೋಕ ನಗರ ಎಸ್.ಐ.ಟಿಯ 4ನೇ ಕ್ರಾಸ್‌ನಲ್ಲಿರುವ ರಾಜಶೇಖರ ಸಹೋದರನ ಮನೆ ಮೇಲೆ ರೇಡ್ ಮಾಡಲಾಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದು, 10ಕ್ಕೂ ಅಧಿಕ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಜಿಲ್ಲೆಯ ಸರ್ವೆ ಮೇಲ್ವಿಚಾರಕ ಮಂಜುನಾಥ್ ಅವರು ಆದಾಯಕ್ಕಿಂತ ಅಧಿಕ ಅಪಾರ ಆಸ್ತಿ ಗಳಿಕೆಯ ಆರೋಪ ಹಿನ್ನೆಲೆಯಲ್ಲಿ ಅವರ ಮನೆ ಹಾಗು ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಲೋಕಾಯುಕ್ತ ಎಸ್ ಪಿ ನೇತೃತ್ವದಲ್ಲಿ ಮಂಗಳೂರಿನ ಬಿಜೈ ಎಂಬಲ್ಲಿರುವ ಮಂಜುನಾಥ್ ಅವರ ಮನೆ ಮೇಲೆ ದಾಳಿ ಮಾಡಿ, ಮಹತ್ವದ ದಾಖಲೆ ಪತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಜಯಪುರದಲ್ಲಿ ಲೋಕಾಯುಕ್ತ ದಾಳಿ: ಅಂಬೇಡ್ಕರ್ ನಿಗಮದ ವ್ಯವಸ್ಥಾಪಕಿಯಾಗಿದ್ದ ರೇಣುಕಾ‌ ಸಾತರ್ಲೆ ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಅವರ ನಿವಾಸಗಳ ಮೇಲೆ ದಾಳಿ. ಸೊಲ್ಲಾಪುರ ಅಪಾರ್ಟಮೆಂಟ್ ಹಾಗೂ ವಿಜಯಪುರ ನಗರದ ರಿಂಗ್ ರೋಡ್ ಬಳಿಯ ಮನೆಯ ಮೇಲೆ ರೇಡ್ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಸ್ಟಿಂಗ್ ಆಪರೇಷನ್ ಮಾಡಿ ಅಂಬೇಡ್ಕರ್ ನಿಗಮದಲ್ಲಿ ರೇಣುಕಾ ಸಾತರ್ಲೆ ಮಾಡಿದ್ದ ಅಕ್ರಮಗಳನ್ನ ಬಯಲು ಮಾಡಲಾಗಿತ್ತು. ಸುವರ್ಣ ನ್ಯೂಸ್ ವರದಿ ಹಿನ್ನೆಲೆ ಆಕೆಯನ್ನ ಅಮಾನತ್ತು ಮಾಡಿ, ಇಲಾಖಾ ತನಿಖೆ ಕೈಗೊಳ್ಳಲಾಗಿತ್ತು. ಜೊತೆಗೆ, ಲೋಕಾಯುಕ್ತ ಇಲಾಖೆಯಲ್ಲಿಯೂ ರೇಣುಕಾ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು. ಇದೀಗ ಅವರ ಮನೆ ಮೇಲೆ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಈ ಹಿಂದೆ ರೇಣುಕಾ ಅವರು ವಾಲ್ಮೀಕಿ ನಿಗಮ, ಆದಿ ಜಾಂಬವ ಸೇರಿ ಹಲವು ನಿಗಮಗಳಿಗೆ ವ್ಯವಸ್ಥಾಪಕಿಯಾಗಿದ್ದರು.