ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಈ ಕುರಿತಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬೀದರ್‌ (ಆ.02): ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಈ ಕುರಿತಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಅವರು ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವಕರು ಧೂಮಪಾನ, ಮದ್ಯಪಾನಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು ಮತ್ತು ಮೊಬೈಲ್‌ನಿಂದ, ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಯೋಗಾಸನ ಅಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ದೇಶದ ಹಾಗೂ ಸಮಾಜದ ಒಳಿತಿಗಾಗಿ ನಮ್ಮದೆಯಾದ ಕೊಡುಗೆ ನೀಡಬೇಕು ಎಂದರು.

ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನಾಚರಣೆ ಎಂದು ಆಚಾರಿಸಲಾಗುತ್ತಿದೆ. ಮಹಾಂತ ಶಿವಯೋಗಿಗಳು 1970ರಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ದೃಡ ಸಂಕಲ್ಪ ತೊಟ್ಟು 1974ರಲ್ಲಿ ಮಾಹಾಂತ ಜೋಳಿಗೆ, ದುಷ್ಚಟಗಳ ಭಿಕ್ಷೆ ಎಂಬ ವಾಕ್ಯದೊಂದಿಗೆ ಆಂದೋಲನ ಆರಂಭಿಸಿದರು. ಅವರ ಆಂದೋಲನ ಪರಿಣಾಮವಾಗಿ ಅನೇಕರು ವ್ಯಸನಗಳಿಂದ ಆಚೆ ಬಂದು ಉತ್ತಮ ಜೀವನ ಕಟ್ಟಿಕೊಂಡರು ಎಂದರು. ಮನೋ ತಜ್ಞವೈದ್ಯರಾದ ಡಾ.ರಾಘವೇಂದ್ರ ವಾಗೋಲ್‌ ಅವರು ವಿಶೇಷ ಉಪನ್ಯಾಸ ನೀಡಿ ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ವ್ಯವಸನ ಮುಕ್ತ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ , ವಿಜಯ ಮಹಾಂತ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ರಾಚಪ್ಪ ಮಾಶೆಟ್ಟಿ, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಮಾಶೆಟ್ಟಿ, ಪ್ರಶಾಂತ ಮಾಶೆಟ್ಟಿ , ಪದವಿ ಕಾಲೇಜಿನ ಪ್ರಾಂಶುಪಾಲರಾದ ಸ್ವಪ್ನಾ ಮಾಶಟ್ಟಿ, ನಿವೃತ್ತ ಪ್ರಾಂಶುಪಾಲರು ಹಾಗೂ ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಮೊರಾರ್ಜಿ ಕಾಲೇಜಿನ ಪ್ರಾಂಶುಪಾಲರಾದ ಚನ್ನಬಸವ ಹೇಡೆ, ವಾರ್ತಾ ಇಲಾಖೆಯ ವಿಜಯಕೃಷ್ಣ ಸೋಲಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶೈಕ್ಷಣಿಕ ಪ್ರಗತಿಗೆ ಕ್ಲಸ್ಟರ್‌ ರಚಿಸಿ: ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಖಾತ್ರಿಪಡಿಸಲು, ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಡಿಸಿ ತಲಾ ಕನಿಷ್ಠ 5 ಕಾಮಗಾರಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಇತ್ತೀಚೆಗೆ ಶಂಕುಸ್ಥಾಪನೆ, ಉದ್ಘಾಟನೆಗೊಂಡ ಕಾಮಗಾರಿಗಳ ಗುಣಮಟ್ಟ ಖಾತರಿಪಡಿಸಿಕೊಳ್ಳಿ ಎಂದರು. ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ ದುರಸ್ತಿ, ಶಾಲೆ ಮಕ್ಕಳ ಕಳಪೆ ಆಹಾರದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ಲಸ್ಟರ್‌ಗಳ ರಚಿಸಿ 2 ತಿಂಗಳ ಪುನರ್‌ ಮನನ ತರಗತಿ ನಡೆಸಲು ಆದೇಶಿಸಿದರಲ್ಲದೆ ಶಿಥಿಲ ಶಾಲೆಗಳ ಕಟ್ಟಡಗಳ ಬಗ್ಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿ ವರದಿ ಸಲ್ಲಿಸಲು ತಿಳಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಚನೆ: ಅಪ್ರಾಪ್ತ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಾದಕ ದ್ರವ್ಯ ಸಾಗಾಣಿಕೆ ಪ್ರಕರಣಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ ಸಚಿವರು, ಬಾಲಕಿಯರ ಮತ್ತು ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆ ತ್ವರಿತಗೊಳಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.