ಬೆಳಗಾವಿಯ ಸುವರ್ಣಸೌಧದಲ್ಲಿ ತಮ್ಮ ಗ್ರಾಮದ ಶಾಲಾ ಶೌಚಗೃಹದ ಸಮಸ್ಯೆ ಬಗ್ಗೆ ಅಹವಾಲು ನೀಡಲು ಬಂದ ರೈತರನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಚಿವರ ವರ್ತನೆಯಿಂದ ಆಕ್ರೋಶಗೊಂಡ ರೈತರು, ಅವರ ಕೊಠಡಿಯ ಮುಂದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಸುವರ್ಣಸೌಧ (ಡಿ.17) ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ರೈತರು ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ತಮ್ಮ ಗ್ರಾಮದ ಶಾಲಾ ಸಮಸ್ಯೆಯ ಅಹವಾಲು ನೀಡಲು ಬಂದಿದ್ದ ರೈತರನ್ನು ಸಚಿವರು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸುವರ್ಣಸೌಧದ ಮೊದಲ ಮಹಡಿಯಲ್ಲಿರುವ ಸಚಿವರ ಕೊಠಡಿಯ ಮುಂದೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲ ಕೆಲಸ ಮಾಡಿದ್ದೇನೆ ಇಲ್ಲಿಂದ ಹೊರಡಿ ಎಂದ ಸಚಿವ:

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶೌಚಗೃಹದ ವ್ಯವಸ್ಥೆ ಇಲ್ಲದ ಕಾರಣ, ವಿದ್ಯಾರ್ಥಿಗಳು ಪಡುತ್ತಿರುವ ತೊಂದರೆಯನ್ನು ಸಚಿವರ ಗಮನಕ್ಕೆ ತರಲು ರೈತರು ಆಗಮಿಸಿದ್ದರು. ಶಾಲೆಯಲ್ಲಿ ಶೌಚಗೃಹ ನಿರ್ಮಿಸುವಂತೆ ಮನವಿ ಮಾಡಲು ಹೋದಾಗ ಸಚಿವರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನಲಾಗಿದೆ. ಅಲ್ಲದೇ, ನಾನು ಎಲ್ಲ ಕೆಲಸಗಳನ್ನೂ ಮಾಡಿದ್ದೇನೆ, ಮೊದಲು ಇಲ್ಲಿಂದ ಹೊರಡಿ' ಎಂದು ಸಚಿವರು ಏರುಧ್ವನಿಯಲ್ಲಿ ರೈತರನ್ನು ಕಳುಹಿಸಲು ಯತ್ನಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ನೀವು ಎಂಥ ಸಚಿವರು? - ಸುವರ್ಣಸೌಧದಲ್ಲಿ ರೈತರ ಘೋಷಣೆ

ಸಚಿವರ ವರ್ತನೆಯಿಂದ ಆಘಾತಕ್ಕೊಳಗಾದ ರೈತರು, 'ರೈತರಿಗೆ ಸರಿಯಾಗಿ ಸ್ಪಂದಿಸದ ನೀವು ಎಂಥ ಸಚಿವರು?' ಎಂದು ಸ್ಥಳದಲ್ಲೇ ಆಕ್ರೋಶ ಹೊರಹಾಕಿದರು. ಸಚಿವರ ಚೇಂಬರ್ ಎದುರೇ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ತಮ್ಮ ಅಹವಾಲನ್ನು ಕನಿಷ್ಠ ಪಕ್ಷ ಆಲಿಸದ ಸಚಿವರ ಧೋರಣೆಯನ್ನು ಖಂಡಿಸಿದರು. ಇದರಿಂದ ಸುವರ್ಣಸೌಧದ ಮೊದಲ ಮಹಡಿಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರ ಮಧ್ಯಪ್ರವೇಶ; ರೈತರ ಮನವೊಲಿಕೆ

ರೈತರ ಪ್ರತಿಭಟನೆ ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘೋಷಣೆ ಕೂಗುತ್ತಿದ್ದ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರು. ಪೊಲೀಸರು ಕೊನೆಗೂ ರೈತರನ್ನು ಮನವೊಲಿಸಿ ಸಚಿವರ ಚೇಂಬರ್‌ನಿಂದ ಹೊರಕ್ಕೆ ಕರೆದುಕೊಂಡು ಬಂದರು. ಸಚಿವರ ಈ ವರ್ತನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.