ಗಣೇಶೋತ್ಸವದಲ್ಲಿ ಡಿಜೆ ಸಂಗೀತ ನಿಷೇಧ ವಿರೋಧಿಸಿ ಪ್ರತಿಭಟನೆ ಹಾಗೂ ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ ಆರೋಪದಡಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ದಾವಣಗೆರೆಯಲ್ಲಿ ಎಫ್‌ಐಆರ್ ದಾಖಲು.
ದಾವಣಗೆರೆ (ಆ.30): ಗಣೇಶೋತ್ಸವದ ವೇಳೆ ಡಿಜೆ ಸಂಗೀತಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಾಗೂ ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಡಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಣೇಶೋತ್ಸವ ಡಿಜೆ ನಿಷೇಧ ವಿರುದ್ಧ ಪ್ರತಿಭಟನೆ
ದಾವಣಗೆರೆ ಜಿಲ್ಲಾಡಳಿತವು ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಸಂಗೀತಕ್ಕೆ ನಿಷೇಧ ಹೇರಿದ ಆದೇಶವನ್ನು ವಿರೋಧಿಸಿ, ಆಗಸ್ಟ್ 23ರಂದು ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ದಾವಣಗೆರೆಯ ಹಳೆಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಜಯದೇವ ವೃತ್ತದಲ್ಲಿ ಯುವಕರನ್ನು ಪ್ರಚೋದಿಸಿ ಪ್ರತಿಭಟನೆ ನಡೆಸಿದ ಆರೋಪ ರೇಣುಕಾಚಾರ್ಯ ಅವರ ಮೇಲೆ ಕೇಳಿಬಂದಿದೆ.
ಇದನ್ನೂ ಓದಿ: ಚುಂಚಿಫಾಲ್ಸ್‌ನಲ್ಲಿ ಪ್ರವಾಸಿಗರಿಗೆ ಕಿರುಕುಳ: ಪ್ರವೇಶಕ್ಕೆ 100 ರಿಂದ 500 ವಸೂಲಿ, ವಿಡಿಯೋ ವೈರಲ್
ರೇಣುಕಾಚಾರ್ಯ ಹೇಳಿದ್ದೇನು?
ಆಗಸ್ಟ್ 28ರಂದು ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ, 'ಮೈಕ್‌ನಲ್ಲಿ ಆಜಾನ್ ಕೂಗುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ತಾಕತ್ ಇದ್ದರೆ ಆಜಾನ್ ಕೂಗುವುದನ್ನು ನಿರ್ಬಂಧಿಸಿ, ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದನ್ನು ತಡೆಯಿರಿ' ಪೊಲೀಸರನ್ನುದ್ದೇಶಿಸಿ ಕಿಡಿಕಾರಿದ್ದರು. ಈ ಹೇಳಿಕೆಯು ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆ ತಂದು ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವಂತಹ ಪ್ರಚೋದನಾತ್ಮಕ ಸ್ವರೂಪದ್ದಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಡಿಜಿ-ಐಜಿಪಿಯಾಗಿ ಡಾ.ಸಲೀಂ ಮುಂದುವರಿಕೆ ಸಾಧ್ಯತೆ?
ಯಾವ್ಯಾವ ಸೆಕ್ಷನ್?
ಈ ಆರೋಪಗಳ ಆಧಾರದ ಮೇಲೆ, ರೇಣುಕಾಚಾರ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 126(2), 189(2), 190, 287, 353(2), ಮತ್ತು 49ರ ಅಡಿಯಲ್ಲಿ ಕೇಸು ದಾಖಲಾಗಿದೆ. ಈ ವಿಭಾಗಗಳು ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯಗಳು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳು, ಮತ್ತು ಕಾನೂನು ಜಾರಿಗೊಳಿಸುವ ಸಿಬ್ಬಂದಿಗೆ ಅಡ್ಡಿಪಡಿಸುವ ಕೃತ್ಯಗಳಿಗೆ ಸಂಬಂಧಿಸಿವೆ.
ಈ ಘಟನೆಯಿಂದ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯ ಮತ್ತು ಸಾರ್ವಜನಿಕ ಶಾಂತಿಯ ಬಗ್ಗೆ ಚರ್ಚೆ ತೀವ್ರಗೊಂಡಿದೆ. ರೇಣುಕಾಚಾರ್ಯ ಈ ಆರೋಪಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ಎಲ್ಲರ ಗಮನ ಸೆಳೆದಿದೆ.
ಎಫ್‌ಐಆರ್‌ಗೆ ಜಗ್ಗಲ್ಲ, ಬಗ್ಗಲ್ಲ: ರೇಣುಕಾಚಾರ್ಯ:
ನನ್ನ ಮೇಲೆ ನೂರು ಕೇಸ್ ಹಾಕಿದರೂ ನಾನು ಇಂಥವಕ್ಕೆಲ್ಲ ಜಗ್ಗಲ್ಲ, ಬಗ್ಗಲ್ಲ ಎಂದು ಎಂಪಿ ರೇಣುಕಾಚಾರ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಫ್‌ಐಆರ್ ದಾಖಲು ವಿಚಾರವಾಗಿ ಹೊನ್ನಾಳಿಯಲ್ಲಿ ಹೊನ್ನಾಳಿಯ ಬಂಬೂ ಬಜಾರ್ ಗಣೇಶ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಷಣದ ವೇಳೆ, 'ದಾವಣಗೆರೆ, ಹೊನ್ನಾಳಿ, ಚಾಮರಾಜನಗರ ಸೇರಿ ಬೇರೆ ಜಿಲ್ಲೆಗಳಲ್ಲಿ ನನ್ನ ಮೇಲೆ ನೂರಾರು ಕೇಸ್ ಹಾಕಿದ್ರು, ಆದ್ರೂ ನಾನು ಅಂಜಿಲ್ಲ ಅಳಿಕಿಲ್ಲ ಜಗ್ಗಿಲ್ಲ ಬಗ್ಗಿಲ್ಲ. ಪೊಲೀಸ್ ಕೇಸ್ ಹಾಕಿ ನನ್ನ ಕುಗ್ಗಿಸೋಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಗಣೇಶೋತ್ಸವ ವೇಳೆ ಡಿಜೆ ಎಲ್ಲರ ಆಪೇಕ್ಷೆ ಇದೆ ಹೀಗಾಗಿ ನಾನು ಒತ್ತಾಯ ಮಾಡ್ತೀನಿ. ನಾನು ಡಿಸಿ, ಎಸ್‌ಪಿ ಜೊತೆ ಮಾತನಾಡಿದ್ದು ಡಿಜೆಗೆ ಅನುಮತಿ ಕೊಡುವ ವಿಶ್ವಾಸವಿದೆ. ಹಿಂದಿನ ಸರ್ಕಾರಗಳು ನನ್ನ ಮೇಲೆ ಕೇಸ್ ಹಾಕಿ ಬೆಳಗಾವಿ, ಬಳ್ಳಾರಿ ಜೈಲಿಗೆ ಹಾಕಿದ್ವು. ನನ್ನ ಮೇಲೆ ಏನೇ ಕೇಸ್ ಹಾಕಿ ಆದ್ರೆ ಡಿಜೆಗೆ ಅನುಮತಿ ನೀಡಿ ಎಂದು ರೇಣುಕಾಚಾರ್ಯ ಒತ್ತಾಯಿಸಿದರು.


