ಹೆಚ್ಚುತ್ತಿರುವ ಮನೋವೈದ್ಯಕೀಯ ಮತ್ತು ಮಾನಸಿಕ ಅಸ್ವಸ್ಥತೆಗಳ ಸವಾಲು ಎದುರಿಸಲು ವಿಶೇಷ ನವೀಕೃತ ಮತ್ತು ನಾವೀನ್ಯತಾ ಪ್ರಯತ್ನಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು (ಡಿ.06): ಹೆಚ್ಚುತ್ತಿರುವ ಮನೋವೈದ್ಯಕೀಯ ಮತ್ತು ಮಾನಸಿಕ ಅಸ್ವಸ್ಥತೆಗಳ ಸವಾಲು ಎದುರಿಸಲು ವಿಶೇಷ ನವೀಕೃತ ಮತ್ತು ನಾವೀನ್ಯತಾ ಪ್ರಯತ್ನಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ನರ ರೋಗಗಳು, ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ತಾಯಿ ಮತ್ತು ಮಕ್ಕಳ ಮಾನಸಿಕ ಸಮಸ್ಯೆಗಳು, ಹದಿಹರೆಯದವರ ಆತ್ಮ*ಹತ್ಯೆಗಳು, ಮಾದಕ ದ್ರವ್ಯ ಬಳಕೆಯ ಅಸ್ವಸ್ಥತೆಗಳು ಮತ್ತು ವೃದ್ಧಾಪ್ಯದ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು ವಿಶೇಷ ಸೌಲಭ್ಯ ಒದಗಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಶನಿವಾರ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) 28 ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಡಾ. ಪಾಟೀಲ್, ಮೈಸೂರು ಮತ್ತು ಕಲಬುರಗಿಯಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. "ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ಸ್ಥಾಪಿಸಬೇಕು" ಎಂದು ಕರೆ ನೀಡಿದರು.

ನವದೆಹಲಿಯಿಂದ ಆನ್‌ಲೈನ್‌ನಲ್ಲಿ ಹಾಜರಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಕುರಿತು ಸಚಿವರು ಮನವಿ ಸಲ್ಲಿಸಿದರು. ಕರ್ನಾಟಕವು ಒದಗಿಸಿದ ಭೂಮಿ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಅನುಮೋದನೆಯಿಂದ ಬೆಂಗಳೂರಿನ ಕ್ಯಾಲ್ಸನಹಳ್ಳಿಯಲ್ಲಿ ಪಾಲಿಟ್ರಾಮಾ ಕೇಂದ್ರವಾಗಿ ಹೊಸ ಉತ್ತರ ಕ್ಯಾಂಪಸ್ ಅನ್ನು ನಿರ್ಮಿಸಲಾಗುತ್ತದೆ. ನಿಮ್ಹಾನ್ಸ್‌ನಲ್ಲಿ ಹೊಸ ಹೊರರೋಗಿ ವಿಭಾಗ (OPD) ಸಂಕೀರ್ಣವನ್ನು ಮಂಜೂರು ಮಾಡಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಇದು ನಮ್ಮ ಬದ್ಧತೆ

ರಾಜ್ಯದಲ್ಲಿ ಎರಡು ಟೆಲಿ-ಮನಸ್ ಘಟಕಗಳು (ನಿಮ್ಹಾನ್ಸ್ ಮತ್ತು ಧಾರವಾಡದಲ್ಲಿ) ನಿರ್ವಹಿಸುತ್ತಿದೆ ಮತ್ತು ನಿಮ್ಹಾನ್ಸ್ ಅನ್ನು ಉನ್ನತ ಕೇಂದ್ರವಾಗಿಟ್ಟುಕೊಂಡು ನರವೈಜ್ಞಾನಿಕ ಆರೈಕೆಗೆ ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (Ka-BHI) ಅನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು, ರಾಜ್ಯ ಮತ್ತು ದೇಶದಲ್ಲಿ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರ ಉನ್ನತೀಕರಣಕ್ಕೆ ರಾಜ್ಯ ಸರ್ಕಾರವು ನಿಮ್ಹಾನ್ಸ್ ಮತ್ತು ಅದರ ವೃತ್ತಿಪರರೊಂದಿಗೆ ಸದಾ ಬೆನ್ನಿಗಿರುತ್ತದೆ. ಇದು ನಮ್ಮ ಬದ್ಧತೆ ಎಂದು ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.