ಹೈಕೋರ್ಟ್‌ ಆದೇಶದಂತೆ ಉಬರ್‌ ಇಂಡಿಯಾ ಸಿಸ್ಟಂ ಸೇರಿ ಇನ್ನಿತರ ಆ್ಯಪ್‌ ಆಧಾರಿತ ಸಂಸ್ಥೆಗಳಿಂದ ನೀಡಲಾಗುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.  

ಬೆಂಗಳೂರು (ಏ.27): ಹೈಕೋರ್ಟ್‌ ಆದೇಶದಂತೆ ಉಬರ್‌ ಇಂಡಿಯಾ ಸಿಸ್ಟಂ ಸೇರಿ ಇನ್ನಿತರ ಆ್ಯಪ್‌ ಆಧಾರಿತ ಸಂಸ್ಥೆಗಳಿಂದ ನೀಡಲಾಗುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಬೈಕ್‌ ಟ್ಯಾಕ್ಸಿ ಸೇವೆ ರದ್ದತಿಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿ, ಉಬರ್‌ ಇಂಡಿಯಾ ಸಿಸ್ಟಂ, ರೊಪ್ಪನ್‌ ಟ್ರಾನ್ಸ್‌ಪೋರ್ಟೇಷನ್‌ ಸರ್ವೀಸ್‌, ಎಎನ್‌ಐ ಟೆಕ್ನಾಲಜೀಸ್‌ ಮೂಲಕ ನಡೆಸಲಾಗುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಏ.2ರಂದು ಆದೇಶಿಸಲಾಗಿತ್ತು. 

ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ 6 ವಾರಗಳ ಗಡುವನ್ನೂ ವಿಧಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಈವರೆಗೆ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹೈಕೋರ್ಟ್‌ ಆದೇಶದಂತೆ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಬಾಕಿ ಪಾವತಿಗೆ ₹2000 ಕೋಟಿ ಸಾಲ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿರುವ ನೌಕರರ ಭವಿಷ್ಯ ನಿಧಿ, ನಿವೃತ್ತ ನೌಕರರ ಉಪಧನ, ರಜೆ ನಗದೀಕರಣ, ಸಿಬ್ಬಂದಿ ಬಾಕಿ, ಇಂಧನ ಸರಬರಾಜು ಬಾಕಿ, ಅಪಘಾತ ಪರಿಹಾರ ಮುಂತಾದ ಅಗತ್ಯಕ್ಕಾಗಿ ಬ್ಯಾಂಕ್‌ನಿಂದ 2000 ಕೋಟಿ ರು. ಸಾಲ ಪಡೆಯಲು ರಾಜ್ಯ ಸರ್ಕಾರ ಗ್ಯಾರಂಟಿ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕಲಬುರಗಿ ಜಿಲ್ಲೆ ಪ್ರವಾಸದಲ್ಲಿರುವ ಸಚಿವರು ಬುಧವಾರ ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಮುಂದೆ ವಿಶ್ವದ ಭೂಪಟದಲ್ಲಿ ಪಾಕಿಸ್ತಾನ ಇರಲ್ಲ: ಕೆ.ಎಸ್.ಈಶ್ವರಪ್ಪ

ರಾಜ್ಯದ 4 ಸಾರಿಗೆ ಸಂಸ್ಥೆಗಳು ಬ್ಯಾಂಕಿಂದ ಸಾಲ ತೆಗೆದುಕೊಳ್ಳಲು ಸರ್ಕಾರ ಗ್ಯಾರಂಟಿ ನೀಡುವ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಬಾಕಿ ಉಳಿಸಿಕೊಂಡಿವುವ ಹಲವು ಬಾಬ್ತು ಪಾವತಿಸಲು ಹಾಗೂ ನೌಕರರಿಗೆ ಸವಲತ್ತು ನೀಡಲು ಈ ಸಾಲ ನೆರವಾಗುತ್ತದೆ ಎಂದು ತಿಳಿಸಿದರು. ರಾಜ್ಯ ಸಾರಿಗೆ ನಿಗಮ, ಕೆಕೆಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳು ವಿವಿಧ ಬಾಬ್ತು 5,900 ಕೋಟಿ ರು. ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ 2 ಸಾವಿರ ಕೋಟಿ ರು.ಸಾಲಕ್ಕೆ ಅನುಮತಿಸುತ್ತಿರುವುದು ಮಹತ್ವ ಪಡೆದುಕೊಂಡಿದೆ.