ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಕುಟುಂಬಗಳಿಗೆ ಆರ್‌ಸಿಬಿ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಸರ್ಕಾರ ಮತ್ತು ಕೆಎಸ್‌ಸಿಎ ಘೋಷಿಸಿದ ಪರಿಹಾರದ ಜೊತೆಗೆ ಒಟ್ಟು 25 ಲಕ್ಷ ರೂ. ಸಿಗಲಿದೆ.
ಬೆಂಗಳೂರು (ಜೂ.05): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟಿನ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ಈಗಾಗಲೇ ಸರ್ಕಾರದಿಂದ ತಲಾ 10 ಲಕ್ಷ ರೂ. ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಇದೀಗ ಪುನಃ ಆರ್‌ಸಿಬಿ ತಂಡದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಣೆ ಮಾಡಿದೆ. ಈ ಮೂಲಕ ಸಂತ್ರಸ್ತ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಸಿಗಲಿದೆ.
ಇದೀಗ ಆರ್‌ಸಿಬಿ ತಂಡದಿಂದ ಅಧಿಕೃತ ಘೋಷಣೆಯೊಂದನ್ನು ಮಾಡಿದೆ. ಇದರಲ್ಲಿ 'ನಿನ್ನೆ ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆಯು ಆರ್‌ಸಿಬಿ ಕುಟುಂಬಕ್ಕೆ ತೀವ್ರ ನೋವು ಮತ್ತು ನೋವನ್ನುಂಟು ಮಾಡಿದೆ. ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಆರ್‌ಸಿಬಿ ಮೃತರ ಹನ್ನೊಂದು ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದೆ. ಇದರ ಜೊತೆಗೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳನ್ನು ಬೆಂಬಲಿಸಲು ಆರ್‌ಸಿಬಿ ಕೇರ್ಸ್ ಎಂಬ ನಿಧಿಯನ್ನು ಸಹ ರಚಿಸಲಾಗುತ್ತಿದೆ. ನಾವು ಮಾಡುವ ಪ್ರತಿಯೊಂದಕ್ಕೂ ನಮ್ಮ ಅಭಿಮಾನಿಗಳು ಯಾವಾಗಲೂ ಹೃದಯಭಾಗದಲ್ಲಿ ಇರುತ್ತಾರೆ. ನಾವು ದುಃಖದಲ್ಲಿ ಒಗ್ಗಟ್ಟಿನಿಂದ ಇರುತ್ತೇವೆ' ಎಂದು ಪೋಸ್ಟ್ ಮಾಡಿದೆ.
56 ಜನ ಗಾಯಾಳುಗಳು:
ಇನ್ನು ಕಾಲ್ತುಳಿತದ ದುರ್ಘಟನೆಯಲ್ಲಿ 11 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಜೊತೆಗೆ 56 ಜನ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಇ ಚಿಕಿತ್ಸೆ ಪಡೆಯಲು ದಾಖಲಾಗಿದ್ದರು. ಈ ಪೈಕಿ 46 ಜನ ಚಿಕಿತ್ಸೆ ಪಡೆದು ಚೇತರಿಕೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಮನೆಗಳಿಗೆ ಹೋಗಿದ್ದಾರೆ. ಉಳಿದಂತೆ 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರ್ಕಾರದಿಂದ ಚಿಕಿತ್ಸಾ ವೆಚ್ಚ:
ಇನ್ನು ಸರ್ಕಾರದಿಂದ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ತಿಳಿಸಿದೆ. ಈಗಾಗಲೇ ಹಲವು ಗಾಯಾಳುಗಳು ಕೆಲವರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಅಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇದಕ್ಕೆ ಕೋವಿಡ್ ವೇಳೆ ಪಾವತಿ ಮಾಡಲಾಗಿದ್ದ ಸ್ಯಾಟ್ಸ್ ಮಾದರಿಯಲ್ಲಿ ಗಾಯಾಳುಗಳ ಮಾಹಿತಿ ಪಡೆದು ಆಸ್ಪತ್ರೆಗಳಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿದ್ದಾರೆ.



