ಕುಣಿಗಲ್ ಬೈಪಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಾಗೂ ಕ್ಯಾಂಟರ್ ನಡುವಿನ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ತುಮಕೂರು (ಜೂ.29) ಮಳೆ, ಪ್ರವಾಹ, ಭೂಕುಸಿತದ ನಡುವೆ ಇದೀಗ ಭೀಕರ ಅಪಘಾತಕ್ಕೆ ರಾಜ್ಯದ ಜನ ಮರುಗಿದ್ದಾರೆ. ಕುಣಿಗಲ್ ಬೈಪಾಸ್ ಬಳಿ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಯೂಟರ್ನ್ ವೇಳೆ ಕಾರಿಗೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿಯಾಗಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಸಿಬೇಗೌಡ ಕುಟುಂಬ ಅಪಘಾತದಲ್ಲಿ ಮೃತಪಟ್ಟಿದೆ.
ಸೀಬೇಗೌಡ, ಪತ್ನಿ, ಮಗ ಹಾಗೂ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುಣಿಗಲ್ ಬೈಪಾಸ್ ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಘಟನೆ ನಡೆದಿದೆ. ಕುಣಿಗಲ್ ಬಳಿ ಹಾದುಹೋಗಿರುವ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬರುವ ಕುಣಿಗಲ್ ಬೈಪಾಸ್ ಬಳಿ ಕಾರು ಯೂಟರ್ನ್ ತೆಗೆದುಕೊಳ್ಳುತ್ತಿರುವಾಗ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕ್ಯಾಂಟರ್, ಕಾರಿಗೆ ಡಿಕ್ಕಿಯಾಗಿದೆ.
ಕಾರು ಸಂಪೂರ್ಣ ನಜ್ಜುಗುಜ್ಜು
ಅತೀ ವೇಗದಲ್ಲಿ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಲವು ಪಲ್ಟಿಯಾದ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಗಡಿ ತಾಲೂಕಿನ ಯಲಗಲವಾಡಿ ಗ್ರಾಮದ ಕುಟುಂಬ
ಮೃತರೆಲ್ಲರು ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ ನವರು ಎನ್ನಲಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನ ನಡೆಸಿದ್ದಾರೆ. ಮೃತದೇಹಗಳನ್ನು ಕುಣಿಗಲ್ ತಾಲ್ಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
