ಖ್ಯಾತ ಗಾಯಕ ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲು ಮುಂದಾಗಿವೆ. 

ಬೆಂಗಳೂರು (ಮೇ.3): ಖ್ಯಾತ ಗಾಯಕ ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಕನ್ನಡಿಗರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲು ಮುಂದಾಗಿವೆ. 

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿದ ಅಭಿಮಾನಿಗೆ ಪ್ರತಿಕ್ರಿಯಿಸಿದ ಸೋನು ನಿಗಮ್, 'ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ದಾಳಿ ಆಗಿದೆ' ಎಂದು ಹೇಳಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.

ಕನ್ನಡ ಚಿತ್ರರಂಗದಿಂದ ಬ್ಯಾನ್:
ಕನ್ನಡಪರ ಸಂಘಟನೆಗಳು ಸೋನು ನಿಗಮ್ ಅವರ ಈ ಹೇಳಿಕೆಯನ್ನು ಕನ್ನಡಿಗರಿಗೆ ಅವಮಾನಕಾರಿ ಎಂದು ಖಂಡಿಸಿದ್ದು, ಅವರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸಿವೆ. 'ಕನ್ನಡಿಗರಿಂದಲೇ ಖ್ಯಾತಿ, ಹಣ ಗಳಿಸಿದ ಸೋನು ನಿಗಮ್, ಕನ್ನಡಿಗರ ವಿರುದ್ಧವೇ ಮಾತನಾಡಿರುವುದು ಖಂಡನೀಯ. ನಿರ್ಮಾಪಕರು ಯಾವುದೇ ಕನ್ನಡ ಚಿತ್ರದಲ್ಲಿ ಇವರಿಂದ ಹಾಡು ಹಾಡಿಸಬಾರದು' ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕನ್ನಡಾಭಿಮಾನ ಭಯೋತ್ಪಾದನೆ ಹೋಲಿಸಿದ ಸೋನು ನಿಗಮ್‌, ಕನ್ನಡ ಹಾಡು ಹೇಳಿ ಅಂದಿದ್ದೇ ತಪ್ಪಾ?

ಸೋನು ನಿಗಮ್ ಕನ್ನಡಿಗರ ಕ್ಷಮೆಯಾಚಿಸಲಿ:

ಸೋನು ನಿಗಮ್ ಇಂತಹ ಹೇಳಿಕೆಯಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅವಹೇಳನವಾಗಿದೆ. ಒಂದು ವೇಳೆ ಸೋನು ನಿಗಮ್ ಕ್ಷಮೆ ಕೇಳಿದರೂ ಕ್ಷಮಿಸದಿರುವಂತೆ ಕನ್ನಡಪರ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಲಿವೆ. 

ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ದೂರು ದಾಖಲಾಗಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಕನ್ನಡ ಚಿತ್ರರಂಗದಿಂದ ಸೋನು ನಿಗಮ್‌ರನ್ನು ಬಹಿಷ್ಕರಿಸಬೇಕು. ಇವರಿಗೆ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ನೀಡಬಾರದು ಎಂದು ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ. 

ಈ ವಿವಾದದ ಬಗ್ಗೆ ಸೋನು ನಿಗಮ್ ಇನ್ನೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಕನ್ನಡಿಗರ ಆಕ್ರೋಶ ಮತ್ತು ಕನ್ನಡಪರ ಸಂಘಟನೆಗಳ ಕ್ರಮದಿಂದ ಈ ವಿವಾದ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಪಹಲ್ಗಾಮ್‌ ದುರಂತ ನೆನೆದ‌ ಗಾಯಕ Sonu Nigam!

ಸೋನು ನಿಗಮ್‌ಗೆ ರೂಪೇಶ್ ರಾಜಣ್ಣ&ಟೀಂ ಎಚ್ಚರಿಕೆ!
 ಕನ್ನಡಾಭಿಮಾನವನ್ನು ಪೆಹಲ್ಗಾಮ್ ದಾಳಿಗೆ ಹೋಲಿಸಿ ವಿವಾದಕ್ಕೆ ಕಾರಣವಾದ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬೆಂಗಳೂರಿನ ಅವಲಹಳ್ಳಿಯ ಖಾಸಗಿ ಕಾಲೇಜಿನ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್‌ಗೆ ಕನ್ನಡ ಹಾಡು ಹಾಡಲು ಕೇಳಿದ್ದಕ್ಕೆ ಅವರು ನೀಡಿದ ಅವಹೇಳನಕಾರಿ ಹೇಳಿಕೆಗೆ ಕಿಡಿಗೊಂಗಿರುವ ಕನ್ನಡ ಕಾರ್ಯಕರ್ತರು, ಬೆಂಗಳೂರಿನ ಹೊಟೇಲ್‌ಗಳಲ್ಲಿ ಅವರನ್ನು ಹುಡುಕಿ ಮಸಿ ಬಳಿಯಲು ನಿರ್ಧರಿಸಿದ್ದಾರೆ.

ಕನ್ನಡ ರಕ್ಷಣಾ ವೇದಿಕೆಯ ರೂಪೇಶ್ ರಾಜಣ್ಣ ನೇತೃತ್ವದ ತಂಡವು ಸೋನು ನಿಗಮ್ ಬಹಿರಂಗ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದು, ಕ್ಷಮೆ ಕೇಳದಿದ್ದರೆ ಎಲ್ಲಿ ಸಿಕ್ಕರೂ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದೆ. ಜೊತೆಗೆ, ಕಾಲೇಜ್ ಆಡಳಿತದೊಂದಿಗೆ ಮಾತನಾಡಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಅವಲಹಳ್ಳಿ ಪೊಲೀಸ್ ಠಾಣೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಲು ಸಂಘಟನೆ ಮುಂದಾಗಿದೆ.