ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್.ವಾಘ್ಮೋರೆಗೆ 'ಟಾಪ್ ಎಕ್ಸಲೆನ್ಸ್ ಅವಾರ್ಡ್' ಲಭಿಸಿದೆ. ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಸಿಕ್ಕ ಮೊದಲ ಅಂತರಾಷ್ಟ್ರೀಯ ಗೌರವ, ಕನ್ನಡ ಲಿಪಿಯ ಸೌಂದರ್ಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಜಾಗತಿಕ ಮನ್ನಣೆ
ದಾವಣಗೆರೆ (ಡಿ.22) : ದಕ್ಷಿಣ ಕೊರಿಯಾದ ಚಿಯಾಂಗ್ಜು ನಗರದಲ್ಲಿ ವರ್ಲ್ಡ್ ಕ್ಯಾಲಿಗ್ರಫಿ ಅಸೋಸಿಯೇಷನ್ ಆಯೋಜಿಸಿದ 22ನೇ ಚಿಯಾಂಗ್ಜು ಜಿಕ್ಜಿ ಆ್ಯಂಡ್ ಹುನ್ಮಿನ್ಜಿಯೊಂಗುಮ್ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರೂಪದ ಮತ್ತು ಐತಿಹಾಸಿಕ ಗೌರವ ಲಭಿಸಿದೆ.
ಸುರೇಶ್ ಎಸ್.ವಾಘ್ಮೋರೆ ಅವರಿಗೆ ಟಾಪ್ ಎಕ್ಸಲೆನ್ಸ್ ಅವಾರ್ಡ್
ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್.ವಾಘ್ಮೋರೆ ಅವರಿಗೆ ಟಾಪ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಗಿದೆ. ಈ ಪ್ರಶಸ್ತಿ ಮೊದಲ ಬಾರಿಗೆ ಕನ್ನಡ ಕ್ಯಾಲಿಗ್ರಫಿಗೆ ಲಭಿಸಿರುವ ಅಂತಾರಾಷ್ಟ್ರೀಯ ಗೌರವವಾಗಿದೆ ಎಂದು ಸುರೇಶ್ ಎಸ್.ವಾಘ್ಮೋರೆ ತಿಳಿಸಿದ್ದಾರೆ.
ವಿಶ್ವದ ಅನೇಕ ದೇಶಗಳಿಂದ ಕಲಾವಿದರು ಭಾಗವಹಿಸಿದ್ದ ಈ ಪ್ರತಿಷ್ಠಿತ ಪ್ರದರ್ಶನ
ವಿಶ್ವದ ಅನೇಕ ದೇಶಗಳಿಂದ ಕಲಾವಿದರು ಭಾಗವಹಿಸಿದ್ದ ಈ ಪ್ರತಿಷ್ಠಿತ ಪ್ರದರ್ಶನದಲ್ಲಿ, ವಾಘ್ಮೋರೆ ಅವರ ಕನ್ನಡ ಕ್ಯಾಲಿಗ್ರಫಿ ಕೃತಿ ಜ್ಯೂರಿಗಳ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ಲಿಪಿಯ ಸೌಂದರ್ಯ, ಅಕ್ಷರಗಳ ವಿನ್ಯಾಸ, ಹರಿವು ಮತ್ತು ಅದರ ಸಾಂಸ್ಕೃತಿಕ ಆಳವನ್ನು ಸಮಕಾಲೀನ ದೃಷ್ಟಿಕೋನದೊಂದಿಗೆ ಪ್ರಸ್ತುತಪಡಿಸಿರುವುದು ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ ಎಂದು ಜ್ಯೂರಿ ಸದಸ್ಯರು ತಿಳಿಸಿದ್ದಾರೆ.
ಕನ್ನಡ ಲಿಪಿಯು ಶಿಲಾಶಾಸನಗಳು, ತಾಮ್ರಶಾಸನಗಳು ಮತ್ತು ತಾಳೆಹಸ್ತಪ್ರತಿಗಳ ಮೂಲಕ ಶತಮಾನಗಳ ಕಾಲ ಬೆಳೆಯುತ್ತಾ ಬಂದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಸಾಧನೆ ಕನ್ನಡ ಭಾಷೆ ಮತ್ತು ಲಿಪಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆಯುವಂತಾಗಿದೆ. ಇದರಿಂದ ಕನ್ನಡ ಕ್ಯಾಲಿಗ್ರಫಿಯು ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಲ್ಲದೆ, ಅಂತಾರಾಷ್ಟ್ರೀಯ ಕಲಾ ವೇದಿಕೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.


