ಕರ್ನಾಟಕದ ಹೆಮ್ಮೆಯ 'ಮೈಸೂರು ಸ್ಯಾಂಡಲ್ ಸೋಪ್'ಗೆ ನಟಿ ತಮನ್ನಾ ಭಾಟಿಯಾ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೆ.ಎಸ್.ಡಿ.ಎಲ್ ಸಂಸ್ಥೆಯು ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ 2 ವರ್ಷಗಳವರೆಗೆ ರಾಯಭಾರಿ ಮಾಡಿದೆ. ಈ ಮೂಲಕ ಶತಮಾನದ ಪರಂಪರೆಯು ಬ್ರ್ಯಾಂಡ್‌ಗೆ ಹೊಸ ಗ್ಲಾಮರ್ ಸ್ಪರ್ಶ ನೀಡಲಾಗಿದೆ.
ಬೆಂಗಳೂರು (ಫೆ.09): ಕಳೆದೊಂದು ದಶಕದಿಂದ ಕನ್ನಡಿಗರ ಮನೆಯಂಗಳದ ಸುವಾಸನೆಯಾಗಿರುವ, ಪಾರಂಪರಿಕ ಹೆಮ್ಮೆಯ 'ಮೈಸೂರು ಸ್ಯಾಂಡಲ್ ಸೋಪಿಗೆ' ಇದೀಗ ಗ್ಲಾಮರ್ ಸ್ಪರ್ಶ ಸಿಕ್ಕಿದೆ. ಅಂತೂ ಇಂತೂ ಕನ್ನಡಿಗರ ಮೈಸೂರು ಸ್ಯಾಂಡಲ್ ಸೋಪಿನ ಅಧಿಕೃತ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ನೇಮಕಗೊಂಡಿದ್ದಾರೆ. ಈ ಮೂಲಕ ಕರ್ನಾಟಕದ ಐಕಾನಿಕ್ ಬ್ರ್ಯಾಂಡ್ ಈಗ ಹೊಸ ರೂಪದೊಂದಿಗೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.
2 ವರ್ಷಗಳ ಅವಧಿಗೆ ರಾಯಭಾರಿ
ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ತಯಾರಿಸುವ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ತಮನ್ನಾ ಭಾಟಿಯಾ ಅವರನ್ನು 2 ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಇಂದಿನಿಂದ (ಫೆಬ್ರವರಿ 10) ಅವರ ಈ ಜವಾಬ್ದಾರಿಯು ವಿಧ್ಯುಕ್ತವಾಗಿ ಆರಂಭವಾಗಲಿದೆ. ಇದೇ ಸುಸಂದರ್ಭದಲ್ಲಿ ಮೈಸೂರು ಸ್ಯಾಂಡಲ್ ಸೋಪನ್ನು ನವನವೀನ ರೂಪದೊಂದಿಗೆ ಮರು ಬಿಡುಗಡೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
2030ರ ವೇಳೆಗೆ 5,000 ಕೋಟಿ ಗುರಿ
ಸೋಮವಾರ ಈ ಮಹತ್ವದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಚಿವ ಎಂ ಬಿ ಪಾಟೀಲ ಅವರು, 'ಕೆ.ಎಸ್.ಡಿ.ಎಲ್. ಸಂಸ್ಥೆಯ ವಾರ್ಷಿಕ ವಹಿವಾಟನ್ನು 2030ರ ಹೊತ್ತಿಗೆ 5,000 ಕೋಟಿ ರೂ.ಗಳ ಮಟ್ಟಕ್ಕೆ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಯುವಜನಾಂಗವನ್ನು ತಲುಪಲು ವ್ಯಾಪಕ ಪ್ರಸಾರ ಆಂದೋಲವನ್ನು ನಡೆಸಲಾಗುತ್ತಿದೆ. ಇದಕ್ಕಾಗಿ, ಸೋಶಿಯಲ್ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಗಳನ್ನು ಹೊಂದಿರುವ ತಾರಾ ವರ್ಚಸ್ಸಿನ ನಟಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಉತ್ತರ ಭಾರತದಲ್ಲಿ ಕೂಡ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸಹಿತ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿಕೊಳ್ಳಲಾಗುವುದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶತಮಾನದ ಭವ್ಯ ಪರಂಪರೆ
ಕೆ.ಎಸ್.ಡಿ.ಎಲ್ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಇದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ.ಶಾಸ್ತಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದ ಉದ್ಯಮವಾಗಿದೆ. ಪ್ರಸ್ತುತ ಒಳ್ಳೆಯ ವಹಿವಾಟು ಮತ್ತು ಲಾಭವನ್ನು ಕಾಣುತ್ತಿರುವ ಸಂಸ್ಥೆಯು ಕಳೆದ ತಿಂಗಳು ಸಾಬೂನು, ಮಾರ್ಜಕ ಮತ್ತು ಸೌಂದರ್ಯವರ್ಧಕ ಈ ಮೂರು ವಿಭಾಗಗಳಲ್ಲೂ ಸಾರ್ವಕಾಲಿಕ ಉತ್ಪಾದನೆ ಮಾಡಿದೆ.
ಖಾಸಗಿ ಕಂಪನಿಗಳಿಗೆ ಸೆಡ್ಡು
ಸಂಸ್ಥೆಯಲ್ಲಿ ಈಗ ಒಟ್ಟು 57 ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್ಡಿಎಲ್ ಉತ್ಪನ್ನಗಳ ಪ್ರಸಾರ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿಯ ವಿಷಯವೆಂದರೆ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರು ಉಳಿದ ಖಾಸಗಿ ಕಂಪನಿಗಳ ಇದೇ ತರಹದ ಉತ್ಪನ್ನಗಳ ಪ್ರಚಾರಾರ್ಥ ರೂಪದರ್ಶಿಯಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಕಟ್ಟುನಿಟ್ಟಿನ ಒಪ್ಪಂದ ಮಾಡಿಕೊಳ್ಳಲಾಗಿದೆ.
ಜಾಗತಿಕ ಮಾರುಕಟ್ಟೆಯತ್ತ ಚಿತ್ತ
ಕೆಎಸ್ಡಿಎಲ್ ಅಧ್ಯಕ್ಷರಾದ ಶಾಸಕ ಸಿ ಎಸ್ ಅಪ್ಪಾಜಿ ನಾಡಗೌಡ ಮಾತನಾಡಿ, 'ಯಾವುದೇ ಹೊಸ ಯಂತ್ರಗಳನ್ನು ಖರೀದಿಸದೆ ಹಳೆಯ ಯಂತ್ರೋಕರಣಗಳನ್ನು ಬಳಸಿಕೊಂಡೇ ಮೂರು ಪಾಳಿಯಲ್ಲಿ ಉತ್ಪಾದನೆ ನಡೆಯುತ್ತಿದೆ. ಯೂರೋಪ್ ಮತ್ತು ಮಧ್ಯ ಪ್ರಾಚ್ಯದ ದೇಶಗಳ ಮಾರುಕಟ್ಟೆ ನಮಗೆ ಮುಖ್ಯವಾಗಿದೆ' ಎಂದಿದ್ದಾರೆ. ಸಂಸ್ಥೆಯ ರಫ್ತು ವಹಿವಾಟನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದ್ದು, ವಿಜಯಪುರ ಮತ್ತು ಡಾಬಸಪೇಟೆಯಲ್ಲಿ ಹೊಸ ಉತ್ಪಾದನಾ ಘಟಕಗಳು ಶೀಘ್ರದಲ್ಲೇ ಆರಂಭವಾಗಲಿವೆ. 2025-26ರಲ್ಲಿ ಸಂಸ್ಥೆಯ ವಹಿವಾಟು 2 ಸಾವಿರ ಕೋಟಿ ರೂ. ಮುಟ್ಟುವ ನಿರೀಕ್ಷೆ ಇದೆ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ತಿಳಿಸಿದ್ದಾರೆ.


