ಉತ್ತರ ಕನ್ನಡ ಜಿಲ್ಲೆಯ ಕೈಗಾ ಕಾಡಿನ ಬಳಿ ಮತ್ತೊಮ್ಮೆ ಹುಲಿ ಕಾಣಿಸಿಕೊಂಡಿದ್ದು, ಯಲ್ಲಾಪುರಕ್ಕೆ ತೆರಳುತ್ತಿದ್ದ ದಂಪತಿಯ ಕಾರನ್ನು ಅಡ್ಡಗಟ್ಟಿ ಸುಮಾರು ಒಂದೂವರೆ ಕಿಲೋಮೀಟರ್‌ವರೆಗೆ ದಾರಿ ಬಿಡದೆ ಕಾಡಿದೆ. ಈ ಪ್ರದೇಶದಲ್ಲಿ ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಉತ್ತರ ಕನ್ನಡ (ಅ.17): ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೈಗಾ ಕಾಡಿನ ಬಳಿ ಮತ್ತೆ ಹುಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಸ್ತೆ ಮೇಲೆ ರಾಜಾರೋಷವಾಗಿ ಹುಲಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಂಕೋಲಾದ ಕರಿಕಲ್ ನಾರಾಯಣಗೌಡ ಎಂಬುವವರು ಹುಲಿ ಓಡಾಟದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೈಗಾ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ:
ನಿನ್ನೆ ಬೆಳಗ್ಗೆ ಸುಮಾರು 11.4 ರಿಂದ 12.20ರ ವೇಳೆ ತಮ್ಮ ಪತ್ನಿ ಗೀತಾ ಹೆಗಡೆ ಜತೆ ಕೈಗಾದ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಬಳಿಕ ಅಲ್ಲಿಂದ ಯಲ್ಲಾಪುರಕ್ಕೆ ಮರಳುತ್ತಿರುವಾಗ ಹರ್ಟುಗಾ ಬಳಿ ಏಕಾಏಕಿ ಹುಲಿ ಪ್ರತ್ಯಕ್ಷವಾಗಿ ನಾರಾಯಣ ಹೆಗಡೆ ಅವರು ಪ್ರಯಾಣಿಸುತ್ತಿದ್ದ ಕಾರನ್ನ ಅಡ್ಡಗಟ್ಟಿದೆ. ಕಾರು ಚಲಾಯಿಸಲು ಅವಕಾಶ ಕೊಡದೇ ಸುಮಾರು ಒಂದೂವರೆ ಕಿಮೀ ದೂರದವರೆಗೆ ಹುಲಿರಾಯ ಕಾಡಿದ್ದಾನೆ.ಒಂದೆರಡು ಬಾರಿ ದಾರಿ ಬಿಡುವಂತೆ ಕಾರಿನ ಹಾರ್ನ್ ಹಾಕಿದ್ರೂ ಜಪ್ಪಯ್ಯ ಅಂದ್ರೂ ಕದಲದ ಹುಲಿ. ಮತ್ತೆ ಮತ್ತೆ ಹಾರ್ನ್ ಹಾಕಿದ್ದಕ್ಕೆ ಗುರ್ರ್ ಎಂದು ಎದುರು ನಿಂತಿದೆ.
ಇದನ್ನೂ ಓದಿ: ಮೈಸೂರು ಹುಲಿ ದಾಳಿ: ರೈತನ ಕಣ್ಣು ಕಸಿದ ಅರಣ್ಯ ಇಲಾಖೆ ನಿರ್ಲಕ್ಷ್ಯ?
ಪದೇಪದೆ ಕಾಣಿಸುತ್ತಿವೆ ಹುಲಿಗಳು:
ಇತ್ತೀಚೀಗೆ ಪದೇಪದೆ ಕೈಗಾ, ಕದ್ರಾ ವ್ಯಾಪ್ತಿಯಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದೆ 2023ರಲ್ಲಿ ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿ ಚೇತನಾ ಎಂಬವರಿಗೆ ಹುಲಿ ಕಾಣಿಸಿತ್ತು. ಅನಂತರ 2024ರ ಜುಲೈ ತಿಂಗಳಿನಲ್ಲಿಯೂ ಇದೇ ಮಾರ್ಗದಲ್ಲಿ ಸಾಯಿ ಬಿಜ್ಜೂರು ಎಂಬವರಿಗೂ ಹುಲಿ ದರ್ಶನವಾಗಿತ್ತು. 2025ರ ಸೆಪ್ಟೆಂಬರ್ ಅವಧಿಯಲ್ಲಿ ಹಗಲಿನಲ್ಲಿಯೇ ಈ ವ್ಯಾಪ್ತಿಯಲ್ಲಿ ಹುಲಿ ಓಡಾಟ ಜೋರಾಗಿತ್ತು. ಕಳೆದ ತಿಂಗಳು ಸೆಪ್ಟೆಂಬರ್ 12ರಂದು ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದನ್ನು ಸಾಯಿನಾಥ್ ನಾಯಕ್ ಎಂಬುವವರು ವಿಡಿಯೋ ಮಾಡಿದ್ರು. ಇದೀಗ ಕೈಗಾ ಪ್ರದೇಶದಲ್ಲಿ ಬೆಳಗ್ಗೆಯೇ ಹುಲಿ ದರ್ಶನವಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸುತ್ತಮುತ್ತಲಿನ ಸ್ಥಳೀಯರು ಹೊರಗೆ ಓಡಾಡಲು ಹೆದರುವಂತಾಗಿದೆ.


