ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಸರ್ಕಾರ ಪತನ, ಮದ್ದೂರಿನಲ್ಲಿ ಇಂದು ನಿಷೇಧಾಜ್ಞೆ,.ಮೇಲ್ಮನೆ ಸಭಾಪತಿ ಸ್ಥಾನದ ರೇಸಲ್ಲಿ ಹರಿಪ್ರಸಾದ್, ಬೋಸರಾಜು ಮತದಾರ ಪಟ್ಟಿಗೆ ಆಧಾರ್ 12ನೇ ಗುರುತು ದಾಖಲೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ ಓದಿ
ವಿಶ್ವಾಸ ಮತ ಕಳೆದುಕೊಂಡ ಪ್ರಧಾನಿ ಫ್ರಾಂಕೋಯಿಸ್, ಫ್ರಾನ್ಸ್ ಸರ್ಕಾರ ಪತನ
ನೇಪಾಳದಲ್ಲಿ ಸರ್ಕಾರವೇ ಅಲುಗಾಡುತ್ತಿದೆ. ಇತ್ತ ಫ್ರಾನ್ಸ್‌ನಲ್ಲಿ ಸರ್ಕಾರ ಪತನಗೊಂಡಿದೆ. ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೈರೋ ವಿಶ್ವಾಸಮತ ಕಳೆದುಕೊಂಡ ಹಿನ್ನಲೆಯಲ್ಲಿ ಸರ್ಕಾರ ಪತನಗೊಂಡಿದೆ. ಫ್ರಧಾನಿ ಫ್ರಾಂಕೋಯಿಸ್ ಬೈರೂ ಸರ್ಕಾರದ ವಿರುದ್ಧ ಸಂಸದರು ಅವಿಶ್ವಾಸ ಮತ ಚಲಾಯಿಸಿದ್ದಾರೆ. ಇದರ ಪರಿಣಾಮ ಸರ್ಕಾರ ಪತನಗೊಂಡಿದ್ದು ಮಾತ್ರವಲ್ಲ, ಫ್ರಾನ್ಸ್ ಅದ್ಯಕ್ಷ ಇಮ್ಯಾನ್ಯುಯೆಲ್ ಮಾರ್ಕೋನ್‌ಗೆ ತೀವ್ರ ಸಂಕಷ್ಟ ಎದುರಾಗಿದೆ. ಕಾರಣ ಕಳೆದ 12 ತಿಂಗಳಲ್ಲಿ ಇದೀಗ ಫ್ರಾನ್ಸ್ 4ನೇ ಪ್ರಧಾನಿಯನ್ನು ನೋಡಲಿದೆ. ಕಳೆದ ಪ್ರಧಾನಿ ಮಿಚೆಲ್ ಬಾರ್ನಿಯರ್ ಕೂಡ ಅವಿಶ್ವಾಸ ಮತದಿಂದ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದರು.
ಮೇಲ್ಮನೆ ಸಭಾಪತಿ ಸ್ಥಾನದ ರೇಸಲ್ಲಿ ಹರಿಪ್ರಸಾದ್, ಬೋಸರಾಜು ಯಾರಿಗೆ ಒಲಿಯಲಿದೆ ಭಾಗ್ಯ?
ನಾಲ್ವರ ನಾಮನಿರ್ದೇಶನದೊಂದಿಗೆ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದ ಹೊಸ್ತಿಲಿಗೆ ಬಂದ ಬೆನ್ನಲ್ಲೇ, ಸಭಾಪತಿ ಸ್ಥಾನ ಹಿರಿಯ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅಥವಾ ಹಾಲಿ ಸಭಾನಾಯಕ ಎನ್.ಎಸ್. ಬೋಸರಾಜು ಪೈಕಿ ಒಬ್ಬರಿಗೆ ಒಲಿಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆ ಆಧರಿಸಿ, ಸಭಾಪತಿ ಸ್ಥಾನಕ್ಕೆ ಈ ಇಬ್ಬರ ಪೈಕಿ ಒಬ್ಬರು ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚು ಎಂದು ಉನ್ನತ ಮೂಲಗಳು ತಿಳಿಸಿವೆ.
ಮದ್ದೂರು ಕೊತ ಕೊತ: ನಿಷೇಧಾಜ್ಞೆ ಜಾರಿ, ಇಂದು ಬಂದ್
ಭಾನುವಾರ ಸಂಜೆ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.ಘಟನೆ ಖಂಡಿಸಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಮೆರವಣಿಗೆ ಮೇಲೆ ಎರಡು ಬಾರಿ ಕಲ್ಲು ತೂರಾಟ, ಮಾರಕಾಸ್ತ್ರ ಝಳಪಿಸಿದ ಘಟನೆಗಳು ನಡೆದಿವೆ. ಈ ವೇಳೆ, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿ 6 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ, ಹಿಂದೂಪರ ಸಂಘಟನೆಗಳು ಮಂಗಳವಾರ ಮದ್ದೂರು ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ. ಇದೇ ವೇಳೆ, ಬುಧವಾರ ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಆಯೋಜಿಸಲಾಗಿದ್ದು, ರಾಜ್ಯ ಬಿಜೆಪಿ ನಾಯಕರ ನಿಯೋಗ ಇದರಲ್ಲಿ ಪಾಲ್ಗೊಳ್ಳಲಿದೆ.
ಯಾದಗಿರಿ ಅಕ್ಕಿ ಜಪ್ತಿ ಕೇಸ್ ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ: ಡೈರಿ ರಹಸ್ಯ ಬಯಲು
ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯನ್ನು ಪಾಲಿಶ್ ಮಾಡಿ ಫಾರಿನ್‌ಗೆ ಕಳುಹಿಸುವ ಜಾಲ ಯಾದಗಿರಿ ಜಿಲ್ಲೆ ಗುರುಮಠಕಲ್ಲಿನಲ್ಲಿ ಬೆಳಕಿಗೆ ಬಂದ ಬೆನ್ನಲ್ಲೇ, ಇಡೀ ಕಾರ್ಯಾಚರಣೆಗೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸುವ ರಹಸ್ಯ ಡೈರಿಯೊಂದು ಅಧಿಕಾರಿಗಳ ಕೈ ವಶವಾಗಿದೆ. ಇದು ಪ್ರಕರಣದ ಮೇಲೆ ಬೆಳಕು ಚೆಲ್ಲಲು ಅಧಿಕಾರಿಗಳಿಗೆ ನೆರವಾಗಿದೆ.
ಮತದಾರ ಪಟ್ಟಿಗೆ ಆಧಾರ್ 12ನೇ ಗುರುತು ದಾಖಲೆ
ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕಣೆಯಲ್ಲಿ ಮತದಾರರ ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್‌ನ್ನು ಕೂಡ ಕ್ರಮಬದ್ಧ ಗುರುತು ದಾಖಲೆಯನ್ನಾಗಿ ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕಾರ ಆಧಾರ್ 12ನೇ ಗುರುತು ದಾಖಲೆ ಆಗಲಿದೆ. ಈ ಮುಂಚೆ 2 ಸಲ ಆಧಾರ್ ಪರಿಗಣಿಸಿ ಎಂದು ಕೋರ್ಟು ಮೌಖಿಕವಾಗಿ ಆಯೋಗಕ್ಕೆ ಸೂಚಿಸಿತ್ತು. ಸೋಮವಾರ ಈ ಬಗ್ಗೆ ಅಂತಿಮ ಆದೇಶ ಹೊರಡಿಸಿರುವ ಪೀಠ, ‘ಪ್ರಸ್ತುತ ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆಗೆ 11 ಗುರುತು ದಾಖಲೆಗಳನ್ನು ಅಗತ್ಯವಾಗಿ ಪರಿಗಣಿಸಿದೆ. ಈಗ ಆಧಾರ್ ಕಾರ್ಡ್‌ನ್ನು 12ನೇ ಗುರುತು ದಾಖಲೆಯನ್ನಾಗಿ ತೆಗೆದುಕೊಳ್ಳಬೇಕು.
ಟ್ರಂಪ್‌ಗೆ ಹೆದರಿ ಜಿಎಸ್ಟಿ ಸುಧಾರಣೆ ಮಾಡಿಲ್ಲ, ಜನರ ಒಳಿತು ನಮ್ಮ ಗುರಿ: ನಿರ್ಮಲಾ ಸೀತಾರಾಮನ್
ದೇಶದಲ್ಲಿ ಆರ್ಥಿಕ ಸುಧಾರಣೆ ತರುವ ಉದ್ದೇಶದಿಂದ ಜಾರಿಗೆ ತರಲಾದ ಜಿಎಸ್‌ಟಿ (ಸರಕು ಮತ್ತು ಸೇವೆ ತೆರಿಗೆ) ವ್ಯವಸ್ಥೆಯನ್ನು ಇದೀಗ ಇನ್ನಷ್ಟು ಸರಳೀಕರಿಸಲಾಗಿದೆ. ಇದು ದೇಶದ 140 ಕೋಟಿ ಜನರ ನಿತ್ಯಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಹೇರಿರುವ ತೆರಿಗೆಗೆ ಪ್ರತಿಯಾಗಿ ಜಿಎಸ್‌ಟಿ ಸುಧಾರಣೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ತೆರಿಗೆ ಒತ್ತಡಕ್ಕೆ ಮಣಿದು ಅಥವಾ ಜಾಗತಿಕ ಆರ್ಥಿಕತೆಯ ಪರಿಣಾಮದಿಂದ ಮಾಡಿದ್ದಲ್ಲ. ಜನರ ಒಳಿತಿಗಾಗಿ ಮತ್ತು ಹಣದುಬ್ಬರ ನಿಯಂತ್ರಣ ಇದರ ಉದ್ದೇಶ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.


