ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಬೆಂಗಳೂರು: 2020ರ ದೆಹಲಿ ದಂಗೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಹಿನ್ನೆಲೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಆಕ್ರೋಶ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿವೆ. ಇಷ್ಟೆಕ್ಕ ವಿವಾದ ಪ್ರತಿಭಟನೆಗಳ ನಡುವೆ ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮ ಪೊಲೀಸ್ ಭದ್ರತೆಯಲ್ಲಿ ನಡೆದಿದೆ.
ಗೋಡೆ ಬರಹಗಳಿಂದ ವಿವಾದಕ್ಕೆ ಶುರು
ನಗರದ ಗಾಂಧಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ “Free Umar Khalid”, “Justice for Umar Khalid”, “India stands with Umar” ಎಂಬ ಬರಹಗಳು ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದವು. ಈ ಬರಹಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ವಿವಾದಕ್ಕೆ ಕಾರಣವಾದವು. ಬಳಿಕ ಕೆಲವು ಬಿಜೆಪಿ ಕಾರ್ಯಕರ್ತರು ಇಂತಹ ಬರಹಗಳನ್ನು ವಿರೋಧಿಸಿ, ಗೋಡೆಗಳ ಮೇಲೆ ಕಪ್ಪು ಬಣ್ಣ ಹಚ್ಚಿ ಅವನ್ನು ಅಳಿಸಿರುವ ಘಟನೆ ನಡೆದಿದೆ. ಈ ಬರಹಗಳು ಗೋಡೆಗಳಲ್ಲಿ ಬೃಹತ್ ಮಟ್ಟದಲ್ಲಿ ಇದ್ದವು ಎನ್ನಲಾಗಿದೆ.
ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ
ದೊಮ್ಮಲೂರು ಪ್ರದೇಶದಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ಆ ಪರಿಸರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಗಳನ್ನು ಎರಡೂ ಬದಿ ಬಂದ್ ಮಾಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದವರ ವಿವರಗಳನ್ನು ದಾಖಲಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರತಿಯೊಬ್ಬರ ಮಾಹಿತಿ ಪಡೆದ ಪೊಲೀಸರು. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಂದಿಯ ಮೊಬೈಲ್ ನಂಬರ್ ಕೂಡ ಪಡೆದು ಹೆಸರು ನಮೂದಿಸಿಕೊಂಡರು. ಇನ್ನು ನಟ ಪ್ರಕಾಶ್ ರಾಜ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರತಿಭಟನೆ ಮತ್ತು ಪೊಲೀಸ್ ಕ್ರಮ
ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್ ಗೌತಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆದಿದ್ದು, ಕೆಲವರನ್ನು ವಶಕ್ಕೂ ಪಡೆದಿದ್ದಾರೆ. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್ ಹಿಡಿದು ಪ್ರತಿಭಟನೆ. ಪ್ರತಿಭಟನಾ ಕಾರರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನೆಗೆ ಪೂರ್ವಾನುಮತಿ ಇರದ ಕಾರಣ, ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸರು ಹಿಂದೂ ಪರ ನಾಯಕರಿಗೆ ನೋಟೀಸ್ ನೀಡಿದರು.
ಭದ್ರತಾ ವ್ಯವಸ್ಥೆ
ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿ ಇರಲು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮ್ಟೆ ಅವರ ನೇತೃತ್ವದಲ್ಲಿ, ಒಬ್ಬ ಡಿಸಿಪಿ ಹಾಗೂ ಮೂವರು ಎಸಿಪಿಗಳ ಮೇಲ್ವಿಚಾರಣೆಯಲ್ಲಿ ಭದ್ರತೆ ಒದಗಿಸಲಾಯಿತು.
ವಿವಿಧ ವಲಯಗಳಿಂದ ಪ್ರತಿಕ್ರಿಯೆ
ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2020 ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಅಂತ ಮನುಷ್ಯನನ್ನ ಕರೆಸಿ ಕಾರ್ಯಕ್ರಮ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ನೀಚ ಸರ್ಕಾರ ಇಂತಹ ಕಾರ್ಯಕ್ರಮ ಮಾಡ್ತಿದ್ದಾರೆ. ಪೊಲೀಸರ ಭಧ್ರತೆಯಲ್ಲಿ ಕಾರ್ಯಕ್ರಮ ಮಾಡ್ತಿರೋದು ನಾಚಿಕೆಗೇಡು. ಬುದ್ಧಿ ಜೀವಿಗಳು ಅಂತಾರೆ ಇವರೆಲ್ಲ ನಗರ ನಕ್ಸಲರು. ಇಂತಹ ಕಾರ್ಯಕ್ರಮ ಮಾಡ್ತಿರೋದು ದುರಂತ. ಪ್ರತಿಭಟನೆ ಮಾಡುವವರನ್ನ ಬಂಧಿಸಿದ್ದಾರೆ . ಇಂತಹ ದೇಶ ವಿರೋಧಿ ಕಾರ್ಯಕ್ರಮಕ್ಕೆ ಬಂದವರು ಎಂತವರು ಅಲ್ವಾ ಎಂದು ಕಿಡಿ ಕಾರಿದರು.
ಒಟ್ಟಿನಲ್ಲಿ, ಉಮರ್ ಖಾಲಿದ್ ಕುರಿತ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆ, ಪ್ರತಿಭಟನೆ ಹಾಗೂ ಭದ್ರತಾ ಕಾವಲು ಹೆಚ್ಚಿದದ್ದು ಗಮನಾರ್ಹವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಉಳಿದಿದೆ.


