ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿಷಯವನ್ನು ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಬಿಟ್ಟು, ಅಭಿವೃದ್ಧಿ ಹಾಗೂ ರೈತರ ಸಮಸ್ಯೆ ಪರಿಹಾರದತ್ತ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು (ಅ.26): ಆರ್‌ಎಸ್‌ಎಸ್ ದಶಕಗಳಿಂದ ಪಥ ಸಂಚಲನ ಮಾಡಿಕೊಂಡು ಬರುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿಷಯ ಮುನ್ನೆಲೆಗೆ ತಂದಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆ ನಿಷೇಧಿಸಲು ಸಾಧ್ಯವಿಲ್ಲ. ಅವರ ಬಗ್ಗೆ ನಿತ್ಯ ಏಕೆ ಮಾತನಾಡುವಿರಿ? ಅವರ ಪಾಡಿಗೆ ಅವರು ಏನೋ ಮಾಡಿಕೊಂಡು ಹೋಗುತ್ತಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಮಾತು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ಕೊಡಿ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಮಾಡಿ. ಬರೀ ಟೀಕೆಗಳಿಂದ ಉಪಯೋಗವಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸರ್ಕಾರ ಸುಖಾಸುಮ್ಮನೆ ಕಾಲಹರಣ ಮಾಡುತ್ತಿದೆ
ಕೆಲ ದಿನಗಳ ಕಾಲ ಧರ್ಮಸ್ಥಳದ ಮೇಲೆ ಬಿದ್ದಿರಿ. ಎಸ್‌ಐಟಿ ಮಾಡಿ ಕಾಲಹರಣ ಮಾಡಿದಿರಿ. ಈಗ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದು ಕೇಸಿನಲ್ಲಿ ರಿಲೀಫ್ ಸಿಕ್ಕಿದೆ. ಈ ಸರ್ಕಾರದ ಕಾಲದಲ್ಲಿ ಯಾವುದೂ ತಾರ್ಕಿಕ ಅಂತ್ಯಕ್ಕೆ ಹೋಗುವುದಿಲ್ಲ. ಸುಖಾಸುಮ್ಮನೆ ಕಾಲಹರಣ ಮಾಡಿಕೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಯಾರೂ ಬೇಕಾದರೂ ಸಿಎಂ ಆಗಬಹುದು:
ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಲ್ಲಿ ಯಾರು ಬೇಕಾದರೂ ಈ ದೇಶದಲ್ಲಿ ರಾಜಕೀಯವಾಗಿ ಮುಖ್ಯಮಂತ್ರಿ ಆಗಬಹುದು. ಅದು ಅವರ ಪಕ್ಷದ ವಿಚಾರ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ಅದನ್ನು ಕಟ್ಟಿಕೊಂಡು ನನಗೇನು ಆಗಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆರ್‌ಎಸ್‌ಎಸ್ ನಿಷೇಧಿಸುವುದು ಮುಖ್ಯವಲ್ಲ. ಮೊದಲು ಜನರ ಸಮಸ್ಯೆಗಳನ್ನು ಪರಿಹರಿಸಿ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.


