ಜಿಲ್ಲೆಯ ಶಿರೂರಿನ ಗುಡ್ಡ ಕುಸಿತ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಕಳೆದ 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಮೃತಪಟ್ಟಿದ್ದರು. 

ಉತ್ತರ ಕನ್ನಡ (ಮಾ.09): ಜಿಲ್ಲೆಯ ಶಿರೂರಿನ ಗುಡ್ಡ ಕುಸಿತ ಪ್ರಕರಣ ಇಡೀ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಕಳೆದ 2024ರ ಜುಲೈ 16 ರಂದು ಧಾರಾಕಾರವಾಗಿ ಸುರಿದ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತವಾಗಿ 11 ಜನ ಮೃತಪಟ್ಟಿದ್ದರು. ಹೆದ್ದಾರಿ ಪಕ್ಕದಲ್ಲಿದ್ದ ಲಕ್ಷ್ಮಣ್ ನಾಯ್ಕ ಎಂಬವರ ಹೋಟೆಲ್ ಮೇಲೆ ಗುಡ್ಡ ಕುಸಿದು, ಅವರು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ದುರ್ಘಟನೆ ಬಳಿಕ ಈ ಕುಟುಂಬ ಪ್ರೀತಿಯಿಂದ ಸಾಕಿದ್ದ ಶ್ವಾನವೊಂದು ಅನಾಥವಾಗಿತ್ತು. 

ಕಾರ್ಯಚರಣೆ ನಡೆಯುವ ದಿನಗಳಲ್ಲಿ ಮಾಲಕನ ಬರುವಿಕೆಗಾಗಿ ಸ್ಥಳದಲ್ಲಿ ಬಂದು ಶ್ವಾನ ಕಾಯುತ್ತಾ ಕುಳಿತಿದ್ದದ್ದು ಸಾಕಷ್ಟು ಗಮನ ಸೆಳೆದಿತ್ತು. ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಇದನ್ನು ಗಮನಿಸಿ ಶ್ವಾನವನ್ನು ತಂದು ತನ್ನ ಮನೆಯಲ್ಲಿ ಸಾಕಲು ಮುಂದಾಗಿದ್ದರು. ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಇದೇ ಶ್ವಾನಕ್ಕೆ ತರಬೇತಿ ನೀಡಿದ್ದು, ಸದ್ಯ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈ ಶ್ವಾನ ಎಲ್ಲರ ಗಮನ ಸೆಳೆದಿದೆ. 

ಭಾನುವಾರ ಪೊಲೀಸ್ ಇಲಾಖೆಯಿಂದ ನಡೆದ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ ಜಾಗೃತಿ ಮೂಡಿಸಲು ನಡೆದ ಮ್ಯಾರಾಥಾನ್ ನಲ್ಲಿ ಈ ಶ್ವಾನ 5 ಕಿಲೋ ಮೀಟರ್ ಸಂಚರಿಸಿ ಪದಕವನ್ನು ಪಡೆದಿದೆ. ಈ ಶ್ವಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ತನ್ನ ಮನೆಯಲ್ಲಿಯೇ ಇಟ್ಟುಕೊಂಡು ತರಬೇತಿ ನೀಡಿದ್ದು, ಬೇರೆ ಶ್ವಾನಗಳಂತೆ ಈ ಶ್ವಾನ ಸಹ ಸಾಕಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ. 

ರಾಷ್ಟ್ರಮಟ್ಟದ ಆಲ್ ಇಂಡಿಯಾ ಪೊಲೀಸ್ ಡ್ಯೂಟಿ ಮೀಟ್‌ನಲ್ಲಿ ಬೆಳ್ಳಿಪದಕ ಪಡೆದ ಶ್ವಾನ ಕಾಪರ್!

ಅಲ್ಲದೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೆಚ್ಚಿನ ಶ್ವಾನವಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ಕೆಲಸಕ್ಕೆ ಹೋಗಬೇಕಾದರೆ ಸಲ್ಯೂಟ್ ಮಾಡಿಯೇ ಕಳಿಸುತ್ತದೆ. ಇನ್ನು ಮನೆಗೆ ವಾಪಾಸ್ ಬರುವ ವೇಳೆಯಲ್ಲಿ ಗೇಟ್ ಬಳಿಯೇ ಕಾಯುತ್ತಾ ಕುಳಿತಿರುತ್ತದೆ. ಬೆಂಗಳೂರಿನಲ್ಲಿ ಮೀಟಿಂಗ್ ಇನ್ನಿತರ ಕಾರಣಕ್ಕೆ ಮೂರ್ನಾಲ್ಕು ದಿನ ಎಸ್ಪಿ ನಾರಾಯಣ್ ತೆರಳಿದರೆ ಈ ಶ್ವಾನ ಮಂಕಾಗಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಶ್ವಾನ ತನ್ನ ಮನೆಯ ಸದಸ್ಯನಂತಾಗಿದೆ ಅಂತಾರೆ ಎಸ್ಪಿ ಎಂ. ನಾರಾಯಣ್.