ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾದ ನಂತರ, ಅವರ ಪುತ್ರಿ ದೀಪಾಲಿ ಕುಲಕರ್ಣಿ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಅಪ್ಪನ ಪರ ವಿನಯ್ ಕುಲಕರ್ಣಿ ಪುತ್ರಿ ಭಾವನಾತ್ಮಕ ಬರಹ:
ಧಾರವಾಡ: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರ ಪರ ಪುತ್ರಿ ದೀಪಾಲಿ ವಿ. ಕುಲಕರ್ಣಿ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ತಂದೆಯ ಜೊತೆಗೆ ಇರುವ ಬಾಲ್ಯದ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ದೀಪಾಲಿ ತಂದೆಯ ಪರವಾಗಿ ಉದ್ದನೇಯ ಬರಹ ಬರೆದಿದ್ದಾರೆ. ಅವರ ಜೊತೆಗೆ ತಾವು ಸದಾ ಇರುತ್ತೇವೆ ಹಾಗೂ ಅವರ ವಿರುದ್ಧದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿದ್ದೇವೆ. ಜೊತೆಯಾಗಿ ನಾವು ಈ ಸಂಕಷ್ಟವನ್ನು ದಾಟಿ ಮುಂದೆ ಸಾಗುತ್ತೇವೆ. ಎಲ್ಲದರಂತೆ ಈ ಕಷ್ಟವೂ ಕಳೆದು ಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ವಿನಯ್ ಕುಲಕರ್ಣಿ ಅವರ ಕಿರಿಯ ಪುತ್ರಿ ದೀಪಾಲಿ ವಿ. ಕುಲಕರ್ಣಿ ಅವರು ಬರೆದಿರುವ ಪೋಸ್ಟ್ ಹೀಗಿದೆ ನೋಡಿ...
"ಉತ್ತರ ಕರ್ನಾಟಕದಾದ್ಯಂತ, ವಿದ್ಯಾರ್ಥಿ ನಾಯಕರಿಂದ ರಾಜ್ಯ ನಾಯಕರಾಗುವವರೆಗೆ ಅವರ ಪಯಣವನ್ನು ಜನರು ಸಾಕ್ಷಿಯಾಗಿ ನೋಡಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಸಾವಿರಾರು ಪಶುಗಳೊಂದಿಗಿನ ದೊಡ್ಡ ಡೈರಿ ಕಾರ್ಯಾಚರಣೆಯನ್ನು ನಿರ್ಮಿಸಿ ನಿರ್ವಹಿಸಿದವರು, ಯುವ ರೈತರಿಗೆ ಪ್ರೇರಣೆಯಾದವರು. ಅವರು ಯಾವಾಗಲೂ ಎಲ್ಲ ವಯಸ್ಸಿನ ಜನರೊಂದಿಗೆ ಸರಳವಾಗಿ ಬೆರೆತವರು, ಗೌರವದಿಂದ ವರ್ತಿಸಿದವರು ಮತ್ತು ಸಹಾಯಕ್ಕೆ ಸದಾ ಸಿದ್ಧರಾಗಿದ್ದವರು.
ಜನರಿಗಾಗಿ ಬದುಕಿದ ನಾಯಕನಾಗಿ, ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ಕೇವಲ ನಾಯಕನಲ್ಲ, ತಮ್ಮವರಲ್ಲೊಬ್ಬರು. ನಾವು ಅವರನ್ನು ಯಾವಾಗಲೂ ಅವರ ಕೆಲಸಗಳಿಂದಲೇ ಗುರುತಿಸಿದ್ದೇವೆ. ಅವರು ಎಂದೆಂದಿಗೂ ನಮ್ಮ ನಾಯಕ, ನಮ್ಮ ಮಾರ್ಗದರ್ಶಕ ಮತ್ತು ನಮ್ಮ ಅತಿ ದೊಡ್ಡ ಹೆಮ್ಮೆ.
ನಾವು ದೃಢವಾಗಿದ್ದೇವೆ. ಅವರ ನೈತಿಕತೆ ಮತ್ತು ಸತ್ಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ವಿಷಯಕ್ಕೆ ಸಾರ್ವಜನಿಕ ಗಮನ ಮತ್ತು ವಿಭಿನ್ನ ಅಭಿಪ್ರಾಯಗಳು ಸಾಕಷ್ಟು ಬಂದಿವೆ ಎಂಬುದನ್ನೂ ನಾವು ಅರಿತಿದ್ದೇವೆ. ನ್ಯಾಯಾಂಗ ಪ್ರಕ್ರಿಯೆಗೆ ನಾವು ಗೌರವ ನೀಡುತ್ತೇವೆ ಮತ್ತು ಮೇಲ್ಮನವಿ ನ್ಯಾಯಾಲಯಗಳತ್ತ ಪೂರ್ಣ ನಂಬಿಕೆಯಿಂದ ಮುಂದುವರಿಯುತ್ತಿದ್ದೇವೆ.
ನಮಗೆ ದೊರೆತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ಬೆಂಬಲಕ್ಕಾಗಿ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಒಟ್ಟಾಗಿ, ನಾವು ಬಲವಾಗಿ ನಿಲ್ಲುತ್ತೇವೆ. ನಾವು ಇದನ್ನೂ ದಾಟುತ್ತೇವೆ. ಇದು ಕೂಡ ಸಾಗಿಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ".
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 16 ಜನರಿಗೆ ಜೀವಾವಧಿ ಶಿಕ್ಷೆ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಯೂ ಸೇರಿದಂತೆ 16 ಜನರಿಗೆ ಜನಪ್ರತಿನಿಧಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಈ ತೀರ್ಪು ಹೊರಬಿದ್ದಿದ್ದು, ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ. ಈ ಮೊತ್ತವನ್ನು ಯೋಗೇಶ್ ಗೌಡ ಅವರ ಮಕ್ಕಳಿಗೆ ಹಾಗೂ ಅವರ ಸಹೋದರ ಗುರುನಾಥ್ ಗೌಡ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ.
ಇದನ್ನೂ ಓದಿ: 2024ರ ಟಾಪರ್ ಈಗ ಎಸಿಬಿ ಬಲೆಗೆ: 60 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಸ್‌ಡಿಎಂ ಕಾಜಲ್ ಮೀನಾ!
ಜೀವಾವಧಿ ಶಿಕ್ಷೆಗೆ ಒಳಗಾಗಿರುವ 16 ಅಪರಾಧಿಗಳು ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ A19 ಅಪರಾಧಿಗೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದ್ದು, ಅದಾಗಲೇ ಅಪರಾಧಿಗಳ ವಕೀಲರು ಈ ಬಗ್ಗೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಿನಯ್ ಕುಲಕರ್ಣಿ , ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಮತ್ತು ವಿಕಾಸ್ ಕಲಬುರಗಿ ಶಿಕ್ಷೆಗೊಳಗಾದ ಇತರ ದೋಷಿಗಳಾಗಿದ್ದಾರೆ.
ಏನಿದು ಪ್ರಕರಣ?:
ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ:


