ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದೇ ವೇಳೆ, ನರೇಗಾ ಯೋಜನೆ ಹೆಸರು ಬದಲಾವಣೆ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧ ಮೋದಿ ಶಾ ರಾಜೀನಾಮೆಗೆ ಆಗ್ರಹಿಸಿದರು.
ಕೊಪ್ಪಳ (ಡಿ.21): ಈಗಾಗಲೇ ಅನೇಕ ಕಾರಣಗಳಿಂದ ವಿವಿಧ ರಾಜ್ಯಗಳು ತೊಂದರೆಯಲ್ಲಿವೆ. ಆದರೂ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಹಣ ಕೊಡುತ್ತಿದ್ದೇವೆ ಎಂದು ಹೇಳುವ ಮೂಲಕ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಪರೋಕ್ಷವಾಗಿ ರಾಜ್ಯ ಸರ್ಕಾರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಸುಳಿವು ನೀಡಿದ್ದಾರೆ.
ಮೋದಿ ವಿರುದ್ಧ ಉಗ್ರಪ್ಪ ಕಿಡಿ
ನರೆಗಾ ಯೋಜನೆಯಲ್ಲಿ ಗಾಂಧೀಜಿ ಹೆಸರನ್ನು ಕೈಬಿಟ್ಟಿರುವ ಕುರಿತು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸ್ವತಃ ತಮ್ಮ ಶ್ರೀಮತಿಗೆ ರಕ್ಷಣೆ ನೀಡದ ಪ್ರಧಾನಿ ನರೇಂದ್ರ ಮೋದಿಗೆ ರಾಮನ ಹೆಸರು ಹೇಳಲು ನೈತಿಕತೆ ಇದೇಯಾ? ರಾಮ ಬಯಸಿದ್ದು ಜಾತಿ, ವರ್ಗ ರಹಿತ ಸಮಾಜ. ಆದರೆ, ಮೋದಿ ಆ್ಯಂಡ್ ಟೀಂ ರಾಮನ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಧಾನಿ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರು.
ಮೋದಿ-ಶಾ ರಾಜೀನಾಮೆಗೆ ಆಗ್ರಹ
ಗಾಂಧೀಜಿ ಹೆಸರಿನಲ್ಲಿದ್ದ ಉದ್ಯೋಗಖಾತ್ರಿ ಯೋಜನೆಗೆ ‘ಜಿ ರಾಮ್ ಜಿ’ ಮರುನಾಮಕರಣ ಮಾಡಿ ಗಾಂಧೀಜಿಗೆ ಅಪಮಾನ ಮಾಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತನಿಖಾ ಏಜೆನ್ಸಿ ದುರ್ಬಳಕೆ ಮಾಡಿಕೊಂಡಿದ್ದು, ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.


