ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸವು ಸಂಪೂರ್ಣ ವೈಯಕ್ತಿಕವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ತಮ್ಮ ಮೇಲಿನ 'ಟ್ರಾನ್ಸ್‌ಫರ್ ಮಿನಿಸ್ಟರ್' ಆರೋಪವನ್ನು ತಳ್ಳಿಹಾಕಿದ ಅವರು, ಸಿಎಂ ಬದಲಾವಣೆ ಚರ್ಚೆಯಿಂದ ಅಂತರ ಕಾಯ್ದುಕೊಂಡರು.

ಮೈಸೂರು/ಚಿತ್ರದುರ್ಗ (ಫೆ.16): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸವು ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಈ ಪ್ರವಾಸವು ಕೇವಲ ವೈಯಕ್ತಿಕ ಆಸಕ್ತಿಯಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಒಳಸಂಚು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ವೈಯಕ್ತಿಕ ಪ್ರವಾಸಕ್ಕೆ ಅಡ್ಡಿಯೇಕೆ?: ಯತೀಂದ್ರ

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, 'ರಾಜ್ಯದಲ್ಲಿ ಸಚಿವರು ಮತ್ತು ಶಾಸಕರು ತಮ್ಮ ಸ್ವಂತ ಹಣದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ. ವೈಯಕ್ತಿಕ ಪ್ರವಾಸ ಎಂದ ಮೇಲೆ ಅದನ್ನು ಹೋಗಬೇಡಿ ಎಂದು ಹೇಳುವುದಕ್ಕೆ ಹೇಗೆ ಸಾಧ್ಯ? ಪ್ರವಾಸಕ್ಕೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಯಾರೂ ಪ್ರವಾಸಕ್ಕೆ ಕರೆದಿಲ್ಲ, ನಾನು ಹೋಗುತ್ತಲೂ ಇಲ್ಲ' ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಸಿಎಂ ಕುರ್ಚಿಯ ಬದಲಾವಣೆ ಅಥವಾ 'ಪವರ್ ಶೇರಿಂಗ್' ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಯತೀಂದ್ರ ನಿರಾಕರಿಸಿದರು. 'ಕುರ್ಚಿಯ ವಿಚಾರವಾಗಿ ನಾನು ನವೆಂಬರ್‌ನಿಂದಲೂ ಮಾತನಾಡುತ್ತಾ ಬಂದಿದ್ದೇನೆ. ಯಾರೋ ಹೇಳಿಕೆ ನೀಡಿದರೆ ನಾನು ಅದಕ್ಕೆಲ್ಲ ಉತ್ತರ ಕೊಡುತ್ತಾ ಕೂರುವುದಿಲ್ಲ. ಇನ್ನು ಮುಂದೆ ಈ ಬಗ್ಗೆ ನನ್ನನ್ನು ಕೇಳಬೇಡಿ' ಎಂದು ಹೇಳುವ ಮೂಲಕ ಚರ್ಚೆಯಿಂದ ಅಂತರ ಕಾಯ್ದುಕೊಂಡರು.

'ಟ್ರಾನ್ಸ್‌ಫರ್ ಮಿನಿಸ್ಟರ್' ಆರೋಪಕ್ಕೆ ಕಿಡಿ:

ತಮ್ಮನ್ನು 'ಟ್ರಾನ್ಸ್‌ಫರ್ ಮಿನಿಸ್ಟರ್' ಎಂದು ಕರೆಯುತ್ತಿರುವ ಬಿಜೆಪಿಯ ಪ್ರತಾಪ ಸಿಂಹ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಯತೀಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 'ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾತನಾಡುವುದಕ್ಕೆಲ್ಲ ಉತ್ತರ ಕೊಡಲಾಗದು. ಪ್ರತಾಪ ಸಿಂಹ ಮತ್ತು ಯತ್ನಾಳ್ ಅವರಿಗೆ ಮಾಡಲು ಕೆಲಸವಿಲ್ಲ. ಬಿಜೆಪಿ ಐಟಿ ಸೆಲ್ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ' ಎಂದು ಕಿಡಿಕಾರಿದರು.

ಜಾತ್ರೆ ಹಿನ್ನೆಲೆ ಪ್ರವಾಸ ರದ್ದು: ಟಿ. ರಘುಮೂರ್ತಿ

ಇತ್ತ ಚಿತ್ರದುರ್ಗದಲ್ಲಿ ಮಾತನಾಡಿದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ತಾವೇಕೆ ವಿದೇಶ ಪ್ರವಾಸಕ್ಕೆ ಹೋಗುತ್ತಿಲ್ಲ ಎಂಬುದನ್ನು ವಿವರಿಸಿದರು. 'ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸವು ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ನಿರ್ಧಾರವಾಗಿತ್ತು. ಬಜೆಟ್ ಕಾರಣಕ್ಕಾಗಿ ಅದನ್ನು ಮುಂದೂಡಲಾಗಿತ್ತು. ನಾವೆಲ್ಲರೂ ಸ್ನೇಹಿತರು ಸೇರಿ ಖಾಸಗಿಯಾಗಿ ಹೋಗಲು ನಿರ್ಧರಿಸಿದ್ದೆವು. ಆದರೆ, ಫೆಬ್ರವರಿ 20-21 ರಂದು ನಮ್ಮ ಸ್ವಗ್ರಾಮದಲ್ಲಿ ಜಾತ್ರೆ ಇರುವ ಕಾರಣ ನಾನು ಹೋಗುತ್ತಿಲ್ಲ' ಎಂದು ತಿಳಿಸಿದರು.

ವಿದೇಶ ಪ್ರವಾಸವನ್ನು ಅಪರಾಧ ಎಂಬಂತೆ ಬಿಂಬಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, 'ನಾವು ಮುಕ್ತವಾಗಿದ್ದೇವೆ, ಯಾವುದೇ ಮುಜುಗರವಿಲ್ಲ. ವಿರೋಧ ಪಕ್ಷದವರು ಟೀಕೆ ಮಾಡುವುದು ಅವರ ಕೆಲಸ. ಆದರೆ ಇದು ಸಂಪೂರ್ಣವಾಗಿ ಖಾಸಗಿ ಪ್ರವಾಸ' ಎಂದು ಶಾಸಕ ರಘುಮೂರ್ತಿ ಸಮರ್ಥಿಸಿಕೊಂಡರು. ಒಟ್ಟಾರೆಯಾಗಿ ಕಾಂಗ್ರೆಸ್ ಶಾಸಕರ ಈ ಪ್ರವಾಸವು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದ್ದರೂ, ಕೈ ನಾಯಕರು ಮಾತ್ರ ಇದು ಕೇವಲ ಮನರಂಜನೆಯ ಪ್ರವಾಸ ಎಂದು ವಾದಿಸುತ್ತಿದ್ದಾರೆ.