Basangowda patil on hate speech bill: ದ್ವೇಷ ಭಾಷಣ ನಿಯಂತ್ರಣಕ್ಕೆ ಹೊಸ ಕಾನೂನು ತರುವ ಸರ್ಕಾರದ ಚಿಂತನೆಯು ತನ್ನನ್ನೇ ಗುರಿಯಾಗಿಸಿಕೊಂಡಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಹಿಂದೂಗಳ ಪರ ಮಾತನಾಡುವವರನ್ನು ಹತ್ತಿಕ್ಕಲು ಈ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದರು.

ವಿಜಯಪುರ(ಡಿ.8): ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ನಿಯಂತ್ರಿಸಲು ಹೊಸ ಕಾನೂನನ್ನು ಜಾರಿಗೆ ತರುವ ಸರ್ಕಾರದ ಚಿಂತನೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರವಾಗಿ ವಿರೋಧಿಸಿದ್ದು, ಆ ಕಾಯ್ದೆ ತನ್ನನ್ನು ಗುರಿಯಾಗಿಸಿಕೊಂಡೇ ಬರುತ್ತಿದೆ ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಟಾರ್ಗೆಟ್ ನಾನೇ, ಧನ್ಯವಾದ ಹೆಚ್‌ಕೆ ಪಾಟೀಲ್ ಎಂದ ಯತ್ನಾಳ್!

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಆ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ. ಹಿಂದೂಗಳ ಪರವಾಗಿ ಯಾರು ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡಬೇಕು ಅನ್ನೋದು ಅವರ (ಸರ್ಕಾರದ) ಉದ್ದೇಶ. ಅವರು ವಿಜಯೇಂದ್ರ, ಆರ್ ಅಶೋಕ್ ಅವರನ್ನು ಟಾರ್ಗೆಟ್ ಮಾಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೇ ಅಂಜಿಕೆ ಇದೆ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಈ ಬಿಲ್ ತರಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆ ಬಿಲ್ ಅನ್ನು ನನಗಾಗಿಯೇ ಜಾರಿಗೆ ತರುತ್ತಿದ್ದಾರೆ. ಹಾಗಾಗಿ ಹೆಚ್‌ಕೆ ಪಾಟೀಲ್ ಅವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದರು, ನಾನು ಈ ಕಾಯ್ದೆಯನ್ನು ಖಡಾಖಂಡಿತ ವಿರೋಧಿಸುವುದಾಗಿ ಯತ್ನಾಳ್ ಸ್ಪಷ್ಟಪಡಿಸಿದರು. ವಿರೋಧ ಮಾಡದೇ ಸಪೋರ್ಟ್ ಮಾಡಲೇ? ಎಂದು ಪ್ರಶ್ನಿಸಿದರು.

ಗೋ ರಕ್ಷಣಾ ಕಾಯ್ದೆ ತಿದ್ದುಪಡಿಗೆ ಎಲ್ಲರ ಸಹಕಾರ

ಗೋ ರಕ್ಷಣಾ ಕಾಯ್ದೆ ತಿದ್ದುಪಡಿ ಮಾಡುವ ಸರ್ಕಾರದ ಚಿಂತನೆ ಕುರಿತು ಮಾತನಾಡಿದ ಯತ್ನಾಳ್, ಈ ವಿಚಾರದಲ್ಲಿ ಪಕ್ಷಾತೀತವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

'ನಾವು ಗೋ ಪ್ರೇಮಿ ಶಾಸಕರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇದು ಒಂದು ಪಾರ್ಟಿಯ ವಿಚಾರ ಅಲ್ಲ. ಗೋ, ಸನಾತನ ಧರ್ಮದ ಪರ ಇರುವವರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿಯೂ ಇದ್ದಾರೆ. ಎಲ್ಲರೂ ಸೇರಿ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.