ಗುಪ್ಪೆಡಂಥ ಮನಸು, ಕನ್ನಡ ಡಬ್ಬಿಂಗ್ ಹೊಂಗನಸು ಮೂಲಕ ತೆಲುಗು ನಾಡಿನಲ್ಲಿ ಫೇಮಸ್ ಆಗಿರೋ ಮೈಸೂರು ಹುಡುಗಿ ರಕ್ಷಾ ಗೌಡ. ಅವ್ರೀಗ ಚಿನ್ನಿ ಅನ್ನೋ ಹೊಸ ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅದು ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. 

ರಕ್ಷಾ ಗೌಡ ಮೈಸೂರಿನ ಹುಡುಗಿ. ಈ ಹಿಂದಿನ 'ಗುಪ್ಪೆಡಂತ ಮನಸು' ಅನ್ನೋ ಸೀರಿಯಲ್ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿತ್ತು. ಅದರಲ್ಲಿ ಹಳ್ಳಿಯ ಜಾಣ ಹುಡುಗಿಯೊಬ್ಬಳು ಮದುವೆಯ ಉರುಳಿಂದ ತಪ್ಪಿಸಿಕೊಂಡು ಚೆನ್ನಾಗಿ ಕಲಿತು ಕೊನೆಗೆ ತಾನು ಓದಿದ ಶಿಕ್ಷಣ ಸಂಸ್ಥೆಗೇ ಎಂಡಿ ಆಗುವ ಕಥೆ ಇತ್ತು. ಈ ಸೀರಿಯಲ್ನಲ್ಲಿ ಅವರ ಪಾತ್ರದ ಹೆಸರು ವಸುಧಾರ. ಇದು ಒಂದು ಕಡೆ ಹಳ್ಳಿ ಹುಡುಗಿಯೊಬ್ಬಳು ಕಷ್ಟಗಳನ್ನೆಲ್ಲ ಮೆಟ್ಟಿನಿಂತು ದೊಡ್ಡ ಸಾಧನೆ ಮಾಡುವ ಕಥೆಯಂತೆ ಕಂಡರೂ ಹೆಚ್ಚಿನವರನ್ನು ಸೆಳೆದದ್ದು ಈ ಕಥೆಯಲ್ಲಿದ್ದ ಲವ್ಸ್ಟೋರಿ. ಇದರಲ್ಲಿ ಹಳ್ಳಿಯಿಂದ ಸಿಟಿಗೆ ಬರುವ ವಸುಧಾರ ಮತ್ತು ಆಕೆ ಬರುವ ಕಾಲೇಜಿನ ಯುವ ಎಂಡಿ ರಿಷಿಗೆ ಆರಂಭದಲ್ಲಿ ಹಾವು ಮುಂಗುಸಿಯಷ್ಟೇ ಜಗಳ. ಕ್ರಮೇಣ ಈ ಕೋಪ ತಾಪ ಸ್ನೇಹವಾಗಿ ಸ್ನೇಹ ಪ್ರೇಮವಾಗಿ ಕಡೆಗೆ ಇಬ್ಬರೂ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುವ ರೂವಾರಿಗಳಾಗಿ ಕಾಣಿಸಿಕೊಳ್ತಾರೆ.

ಈ ಸೀರಿಯಲ್ ಕಳೆದ ವರ್ಷ ಮುಕ್ತಾಯಗೊಂಡಿತ್ತು. ಆ ಬಳಿಕ ಈ ಸೀರಿಯಲ್‌ನ ಯಂಗ್ ಆಂಡ್ ಎನರ್ಜಿಟಿಕ್ ಪಾತ್ರದಲ್ಲಿ ಮಿಂಚಿದ್ದ ಮೈಸೂರಿನವರೇ ಆದ ಮುಖೇಶ್ ಗೌಡ ನಿಹಾರ್ ಮುಖೇಶ್ ಅಂತ ಹೆಸರು ಬದಲಿಸಿಕೊಂಡು 'ತೀರ್ಥರೂಪ ತಂದೆಯವರಿಗೆ' ಅನ್ನುವ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದರು. ತೆಲುಗು ಸಿನಿಮಾದಲ್ಲೂ ನಟಿಸಿದರು. ವಸುಧಾರಾ ಪಾತ್ರ ಮಾಡಿದ ರಕ್ಷಾ 'ಮಗ್ಗಿಪುಸ್ತಕ' ಅನ್ನುವ ಬ್ರಿಡ್ಜ್ ಸಿನಿಮಾದಲ್ಲಿ ನಟಿಸಿದರು. ಇದರಲ್ಲಿ ಇವರ ಅಭಿನಯವನ್ನು ಒಂದಿಷ್ಟು ಮಂದಿ ಮೆಚ್ಚಿ ಮಾತನಾಡಿದ್ದಾರೆ. ಸದ್ಯ ಈ ಸಿನಿಮಾ ಥಿಯೇಟರಿನಲ್ಲಿದೆ.

ಚಿನ್ನಿ ಸೀರಿಯಲ್‌ನಲ್ಲಿ ನಾಯಕಿ

ಇದೀಗ ರಕ್ಷಾ ಗೌಡ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಚಿನ್ನಿ ಅನ್ನುವ ತೆಲುಗು ಸೀರಿಯಲ್ನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಸೀರಿಯಲ್ ಪ್ರೊಮೋವನ್ನು ತೆಲುಗಿನ ಸ್ಟಾರ್ ಮಾ ಚಾನೆಲ್ ಪ್ರಸಾರ ಮಾಡಿದೆ. ಇದರಲ್ಲಿ ಸಣ್ಣದೊಂದು ಪ್ರಶ್ನೋತ್ತರ ಇತ್ತು. ರಕ್ಷಾ ಅವರ ಗುಪ್ಪೆಡಂಥ ಮನಸು ಸೀರಿಯಲ್ನ ಫೇಮಸ್ ಪಾತ್ರ ವಸುಧಾರಾ ವನ್ನು ಗಮನದಲ್ಲಿಟ್ಟು, 'ಹೇಗಿದ್ದೀಯ ವಸುಧಾರಾ?' ಅನ್ನುವ ಪ್ರಶ್ನೆ ಬಂದಿದೆ. 'ವಸುಧಾರಾ ಅಲ್ಲ, ಚಿನ್ನಿ ಅಂತ ಕರೀರಿ' ಅಂತ ರಕ್ಷಾ ಹೇಳಿದ್ದಾರೆ.

'ಗುಪ್ಪೆಡಂಥ ಮನಸು' ಸೀರಿಯಲ್ ಮುಗಿದು ವರ್ಷವಾಗುತ್ತ ಬಂದರೂ ತೆಲುಗಿನ ಮಂದಿ ಇನ್ನೂ ಅದರ ಹವಾದಿಂದ ಆಚೆ ಬಂದಿಲ್ಲ. ಹೀಗಾಗಿ ಬಹಳ ಮಂದಿ ಅಂಥಾ ಡಿಗ್ನಿಫೈಡ್ ಪಾತ್ರ ಮಾಡಿದ ನಿಮಗೆ 'ಚಿನ್ನಿ' ಅನ್ನೋ ಸಾಮಾನ್ಯ ಪಾತ್ರ ಸೆಟ್ ಆಗೋದಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ. ಆದರೆ ಹೊಸ ಸೀರಿಯಲ್ನ ರಕ್ಷಾ ಅವರ ಪಾತ್ರ ರಿವೀಲ್ ಪ್ರೋಮೋಗೆ ೪೦ ಲಕ್ಷದಷ್ಟು ವೀಕ್ಷಣೆ ಸಿಕ್ಕಿದೆ. ಅವರು ಮಾತನಾಡಿದ ಈಗಷ್ಟೇ ಪ್ರಸಾರವಾದ ಪ್ರೋಮೋವನ್ನೂ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಹೆಚ್ಚಿನವರಿಗೆ ಅವರನ್ನು ವಸುಧಾರಾದಂಥಾ ಪಾತ್ರದಲ್ಲೇ ನೋಡಲು ಇಷ್ಟ. ತೀರಾ ಹೌಸ್ವೈಫ್ ಥರದ ಚಿನ್ನಿ ಪಾತ್ರದಲ್ಲಿ ನೋಡಲು, ಗೋಳಾಟ ನೋಡಲು ಇಷ್ಟವಿಲ್ಲ. ಇದನ್ನು ಅವರ ಫ್ಯಾನ್ಸ್ ಸ್ಪಷ್ಟವಾಗಿ ಹೇಳಿದ್ದಾರೆ.

ಸದ್ಯ ನಮ್ ಮೈಸೂರು ಹುಡುಗಿ ತೆಲುಗು ರಾಜ್ಯದಲ್ಲಿ ಚಿನ್ನಿಯಾಗಿ ಹೇಗೆ ಹವಾ ಎಬ್ಬಿಸಲಿದ್ದಾಳೆ ಅನ್ನೋದೇ ಕೋಲಾಹಲ. ಗುಪ್ಪೆದಂಥಾ ಮನಸು ಸೀರಿಯಲ್ನಲ್ಲಿ ಮುಖೇಶ್ ನಾಯಕನಾಗಿ ಇವರಿಬ್ಬರ ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಸೀರಿಯಲ್ನಲ್ಲಿ ಇವರಿಗೆ ಜೋಡಿಯಾಗಿ ಯಾರು ಬರಲಿದ್ದಾರೆ, ಮತ್ತೆ ಮುಖೇಶ್ ಅವರೇ ಸೀರಿಯಲ್ನತ್ತ ಮುಖ ಮಾಡ್ತಾರ ಅಂತೆಲ್ಲ ಪ್ರಶ್ನೆಗಳು ವೀಕ್ಷಕರ ತಲೆಯಲ್ಲಿವೆ.

View post on Instagram