ಸರಿಗಮಪ ಸೀಸನ್ 19ರ ವಿಜೇತೆ ಪ್ರಗತಿ ಬಡಿಗೇರ್ SSLC ಪರೀಕ್ಷೆಯಲ್ಲಿ ಶೇ.83.20 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಬಾಗಲಕೋಟೆ ಮೂಲದ ಪ್ರಗತಿ, ಸಂಗೀತದ ಜೊತೆಗೆ ಶಿಕ್ಷಣದಲ್ಲೂ ಸಾಧನೆ ಮಾಡಿದ್ದಾರೆ.

ಬೆಂಗಳೂರು (ಮೇ.3): ಜೀ ಕನ್ನಡ ವಾಹಿನಿ (Zee Kannada) ನಡೆಸುವ 'ಸರಿಗಮಪ' (Saregamapa) ಮ್ಯೂಸಿಕಲ್‌ ರಿಯಾಲಿಟಿ ಶೋನ 19ನೇ ಸೀಸನ್‌ನಲ್ಲಿ ಭಾಗವಹಿಸಿ ಚಾಂಪಿಯನ್‌ ಆಗಿದ್ದ ಬಾಗಲಕೋಟೆ ಮೂಲದ ಪ್ರಗತಿ ಬಡಿಗೇರ್‌ (pragathi-badiger) ಈಗ ಶಿಕ್ಷಣದಲ್ಲೂ ಸಾಧನೆ ಮಾಡಿದ್ದಾರೆ. ಶುಕ್ರವಾರ ಪ್ರಕಟವಾದ 2024-2025ರ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ (SSLC Result) ಪ್ರಗತಿ ಉತ್ತಮ ಅಂಕಗಳೊಂದಿಗೆ ಪಾಸ್‌ ಆಗಿದ್ದು, ಅವರ ಅಪ್ಪ ಬಸವರಾಜ್‌ ಬಡಿಗೇರ್‌ ಸೋಶಿಯಲ್‌ ಮೀಡಿಯಾದಲ್ಲಿ ಮಗಳ ಮಾರ್ಕ್ಸ್‌ ಕಾರ್ಡ್‌ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಶಿಕ್ಷಣದಲ್ಲಿ ಮಗಳು ಮಾಡಿರುವ ಸಾಧನೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಬಸವರಾಜ್‌ ಬಡಿಗೇರ್‌ (Basavaraj Badiger), "ಅಭಿನಂದನೆಗಳು ಮಗಳೇ.. ಹೀಗೆ ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಯತ್ತ ಮುನ್ನಡೆ ಎಂದು ಹಾರೈಸುವೆ.." ಎಂದು ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಪ್ರಗತಿ ಕೂಡ ತಮ್ಮ ಅಂಕವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ತಮ್ಮ ಶುಭಾಶೀರ್ವಾದ ಬೇಡುತ್ತಾ ನನ್ನ SSLC ಫಲಿತಾಂಶ.. 83.2%... ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮನಗಳು.." ಎಂದು ಬರೆದುಕೊಂಡಿದ್ದಾರೆ. ಬಸವರಾಜ್‌ ಬಡಿಗೇರ್‌ ಅವರ ಪೋಸ್ಟ್‌ಗೆ 90ಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ.

ಕುಶಾಲನಗರದಲ್ಲಿ ವಾಸ: ಮೂಲತಃ ಬಾಗಲಕೋಟೆಯವರಾದ ಪ್ರಗತಿ ಅವರ ಕುಟುಂಬ ಸದ್ಯ ಮಡಿಕೇರಿಯ ಕುಶಾಲನಗರದಲ್ಲಿ ವಾಸವಾಗಿದೆ. ಕೊಪ್ಪಳದಲ್ಲಿ ನಡೆದಿದ್ದ ಸರಿಗಮಪ ಶೋ ಫೈನಲ್‌ನಲ್ಲಿ ವಿಜೇತರಾಗಿದ್ದರು. ಇದು ಕುಟುಂಬದ ಅದೃಷ್ಟವನ್ನೇ ಬದಲಾಯಿಸಿತ್ತು. ವಿನ್ನರ್‌ ಆಗಿದ್ದ ಪ್ರಗತಿ ಬಡಿಗೇರ್‌ ಅವರಿಗೆ 21 ಲಕ್ಷ ರೂಪಾಯಿ ಮೌಲ್ಯದ ಸೈಟ್‌ ಹಾಗೂ 4 ಲಕ್ಷ ರೂಪಾಯಿ ನಗದು ಸಿಕ್ಕಿತ್ತು. ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋನಲ್ಲಿ ಅವರು ಗಾಯಕಿ ಇಂದು ನಾಗರಾಜ್‌ ಅವರ ತಂಡದಲ್ಲಿದ್ದರು, ಪ್ರಗತಿ ಗೆಲುವಿಗೆ ಇಂದು ನಾಗರಾಜ್‌ ಕೂಡ ಸಂಭ್ರಮಿಸಿದ್ದರು.

ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌: ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಗತಿಗೆ 1.70 ಲಕ್ಷ ಮಂದಿ ಫಾಲೋವರ್ಸ್‌ ಇದ್ದಾರೆ. ಆಕೆಯ ಪೋಸ್ಟ್‌ಅನ್ನು ಮೆಚ್ಚಿರುವ ಹಲವರು ಆಕೆಯ ಮುಂದಿನ ಶಿಕ್ಷಣದ ಜೀವನ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. 'ಪ್ರಗತಿ ಪುಟ್ಟ.. ಹೀಗೆ ನಿನ್ನ ಜೀವನ ಎಂಬ ಪಯಣದಲ್ಲಿ ಸದಾ ಮುಂಚೂಣಿಯಲ್ಲಿ ಇದ್ದು, ಜೀವನ ಸಾರ್ಥಕವಾಗಲಿ..' ಎಂದು ಒಬ್ಬರು ಬರೆದಿದ್ದರೆ, 'ಭವಿಷ್ಯ ಉಜ್ವಲವಾಗಲಿ ಮಗಳೇ..' ಎಂದು ಇನ್ನೊಬ್ಬರು ಹಾರೈಸಿದ್ದಾರೆ. 'ಹೃತ್ಪೂರ್ವಕ ಅಭಿನಂದನೆಗಳು ಪ್ರಗತಿ ಪುಟ್ಟ.. ನಿನ್ನ ಮುಂದಿನ ಜೀವನ ಸಂತೋಷದಿಂದ ಸಾಗಲಿ ಮತ್ತು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದ ನಿನ್ನ ಮೇಲಿರಲಿ...' ಎಂದು ಮತ್ತೊಬ್ಬರು ಆಕೆಯ ಸಾಧನೆ ಮೆಚ್ಚಿ ಹಾರೈಸಿದ್ದಾರೆ.

ಪ್ರಗತಿ ತೆಗೆದುಕೊಂಡಿರುವ ಅಂಕವೆಷ್ಟು: ಪ್ರಗತಿ 625ಕ್ಕೆ 520 ಅಂಕ ಸಂಪಾದಿಸಿದ್ದು, ಕನ್ನಡದಲ್ಲಿ 109, ಇಂಗ್ಲೀಷ್‌ನಲ್ಲಿ 93, ಹಿಂದಿಯಲ್ಲಿ 99, ಗಣಿತದಲಲ್ಲಿ 70, ವಿಜ್ಞಾನದಲ್ಲಿ 78, ಸಮಾಜ ವಿಜ್ಞಾನದಲ್ಲಿ 71 ಅಂಕ ಪಡೆದುಕೊಂಡಿದ್ದು, ಶೇ. 83.20ರಲ್ಲಿ ಪಾಸ್‌ ಆಗಿದ್ದಾರೆ.
ಅಪ್ಪ ಕೂಡ ಸಿಂಗರ್‌: ಪ್ರಗತಿ ಬಡಿಗೇರ್‌ ರೀತಿಯಲ್ಲಿ ಬಸವರಾಜ್‌ ಬಡಿಗೇರ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ. ಮಗಳು ಹಾಡುವ ಹಾಡುಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಬಸವರಾಜ್‌ ಬಡಿಗೇರ್‌ ಕೂಡ ಹಿಂದೂಸ್ತಾನಿ ಸಂಗೀತ ಕಲಿತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಲೈವ್‌ ಮಾಡಿ ಹಾಡು ಹೇಳಿತ್ತಿರುತ್ತಾರೆ. ಪ್ರಗತಿ ಅವರ ಸಹೋದರಿಯರೂ ಕೂಡ ಸಂಗೀತ ಕಲಿಯುತ್ತಿದ್ದು, ಸಾಕಷ್ಟು ಹಾಡುಗಳನ್ನು ಹಾಡುತ್ತಿರುತ್ತಾರೆ.

View post on Instagram