
ಸಿದ್ದರಾಮಯ್ಯ ಜಾತಿ ಗಣತಿ ವರದಿಗೆ ಬ್ರೇಕ್; ಮರು ಸಮೀಕ್ಷೆ ಹೈಕಮಾಂಡ್ ಸೂಚನೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಳೆಯ ಜಾತಿ ಸಮೀಕ್ಷೆಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಆಕ್ಷೇಪಣೆ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಮರು ಸಮೀಕ್ಷೆಗೆ ಸೂಚಿಸಲಾಗಿದೆ. ರಾಹುಲ್ ಗಾಂಧಿ ಮಧ್ಯಸ್ಥಿಕೆಯಲ್ಲಿ ಮುಂದಿನ 3 ತಿಂಗಳಲ್ಲಿ ಹೊಸ ಸಮೀಕ್ಷೆ ಪೂರ್ಣ.
ಬೆಂಗಳೂರು (ಜೂ. 11): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೊದಲನೇ ಅವಧಿಯಲ್ಲಿ ಮಾಡಿಸಿದ್ದ ಜಾತಿ ಆಧಾರಿತ ಸಮೀಕ್ಷೆಯನ್ನು ಎರಡನೇ ಅವಧಿಯಲ್ಲಿ ಜಾರಿಗೊಳಿಸಲು ಮುಂದಾಗಿದ್ದರೂ, ಕಾಂಗ್ರೆಸ್ ಹೈಕಮಾಂಡ್‌ನಿಂದ ಭಾರೀ ಹಿನ್ನಡೆ ಎದುರಾಗಿದೆ. ಹಳೆಯ ಜಾತಿ ಗಣತಿ ಈಗ ಸಲ್ಲದು ಎಂಬ ಕಾರಣದಿಂದ ಮರು ಸಮೀಕ್ಷೆ ನಡೆಸುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.
ಹಳೆಯ ಸಮೀಕ್ಷೆಯ ನಂಬಿಕೆಗೆ ಧಕ್ಕೆ:
ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯ ಮುಖ್ಯಮಂತ್ರಿತ್ವದ ವೇಳೆ ನಡೆಸಿದ್ದ ಜಾತಿ ಸಮೀಕ್ಷೆಯ ವರದಿ ಸುಮಾರು 10 ವರ್ಷ ಹಳೆಯದಾಗಿದ್ದು, ಅದರ ಪ್ರಮಾಣಿಕತೆ ಹಾಗೂ ಪಾರದರ್ಶಕತೆಗೆ ಸಂಬಂಧಿಸಿದಂತೆ ಹಲವಾರು ಅಭಿಪ್ರಾಯ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಈಗ ಆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದು ಸಿದ್ಧವಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ಬಂದಿರುವ ತೀವ್ರ ಆಕ್ಷೇಪ ಹಾಗೂ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ, ಪಕ್ಷದ ವರಿಷ್ಠರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಸಮುದಾಯಗಳು ಜಾತಿ ಗಣತಿ ಮುಂದುವರೆದರೆ ತಮ್ಮ ಮೀಸಲಾತಿ ಪ್ರಮಾಣ ಕಡಿಮೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದವು.
ರಾಹುಲ್ ಗಾಂಧಿಯ ಮಧ್ಯಸ್ಥಿಕೆ:
ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯದಲ್ಲಿ ತೀವ್ರ ಗಮನ ಹರಿಸಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ಗೆ ಮರು ಜಾತಿ ಸಮೀಕ್ಷೆ ನಡೆಸುವಂತೆ ತಾಕೀತು ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದಾರೆ. ಹೈಕಮಾಂಡ್ ನೀಡಿರುವ ಸೂಚನೆಯಂತೆ, ಕರ್ನಾಟಕದಲ್ಲಿ ಹೊಸ ಜಾತಿ ಸಮೀಕ್ಷೆಯನ್ನು ಮುಂದಿನ 3 ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ಸಮೀಕ್ಷಾ ಸಮಿತಿಯನ್ನು ರಚಿಸುವ ಸಾಧ್ಯತೆ ಇದೆ.