ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ ಚಾಲಕ, ತಪ್ಪಿತಸ್ಥ ಮನೋಭಾವನೆಯಿಂದ ನಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲಿಯೇ ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದು ವಿಡಿಯೋ ವೈರಲ್ ಮಾಡಿದ್ದಾರೆ.
ಬೆಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೀದಿ ನಾಯಿಗಳ ಮೇಲೆ ನಡೆಯುವ ಕ್ರೌರ್ಯಗಳು ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಓಡಾಡುವ ಹಾಗೂ ರಸ್ತೆ ಬದಿಯಲ್ಲಿ ಮಲಗುವ ನಾಯಿಗಳ ಮೇಲೆ ವಾಹನ ಹರಿಸಿ ಅವುಗಳ ಸಾವಿಗೆ ಕಾರಣವಾಗುವವರು ತಿರುಗಿಯೂ ನೋಡದೇ ಮುಂದೆ ಹೋಗಿಬಿಡುತ್ತಾರೆ. ಆದರೆ, ಇಲ್ಲೊಬ್ಬ ಕಾರು ಚಾಲಕ ನಾಯಿ ಮೇಲೆ ಕಾರನ್ನು ಹರಿಸಿದ್ದಕ್ಕಾಗಿ ನಾಯಿಯ ಕಾಲಿಗೆ ಬಿದ್ದು, ಕಿವಿ ಹಿಡಿದು ಬಸ್ಕಿ ಹೊಡೆದು ಕ್ಷಮಾಪಣೆ ಕೇಳಿದ ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಮನುಷ್ಯರಷ್ಟೇ ಜೀವನ ಮಾಡಲು ಅರ್ಹರು. ಮನುಷ್ಯನ ಜೀವನಕ್ಕಾಗಿ ಯಾವ ಪ್ರಾಣಿ, ಪಕ್ಷಿ ಅಥವಾ ಪರಿಸರವನ್ನು ನಾಶ ಮಾಡಬಹುದು ಎಂಬ ಭ್ರಮೆ ತಲೆಗೇರಿದೆ. ಆದ್ದರಿಂದ ಸರ್ಕಾರದಿಂದ ಹಲವು ಕಾನೂನು, ಕಟ್ಟಳೆಗಳನ್ನು ನಿರ್ಮಿಸುವ ಮೂಲಕ ಮನುಷ್ಯನ ಸ್ವೇಚ್ಛಾಚಾರದ ಜೀವನಕ್ಕೆ ತಡೆ ಒಡ್ಡಲಾಗಿದೆ. ಆದಾಗ್ಯೂ ಮನುಷ್ಯನ ಜೊತೆಗೇ ವಾಸ ಮಾಡುವ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ಎತ್ತು, ನಾಯಿ, ಕುರಿ, ಕೋಳಿ ಇವುಗಳ ಮೇಲೆ ಹಲ್ಲೆ ಅಥವಾ ಅವುಗಳನ್ನು ಹೊಡೆದು ಕೊಲೆ ಮಾಡಿದರೂ ಈ ಬಗ್ಗೆ ಶಿಕ್ಷೆ ನೀಡುವಂತಹ ಯಾವುದೇ ಕಾನೂನು ನಿಯಮಗಳಿಲ್ಲ. ಹೀಗಾಗಿ, ಸಾಕು ಪ್ರಾಣಿಗಳ ಮೇಲೆ ಮಾನವನ ದೌರ್ಜನ್ಯ ಮಾತ್ರ ಎಗ್ಗಿಲ್ಲದೇ ಸಾಗಿದೆ.
ಬಹುತೇಕರು ಸಾಕು ಪ್ರಾಣಿಗಳಲ್ಲಿ ದೇವರ ಸ್ವರೂಪವನ್ನು ಕಾಣುವ ಮೂಲಕ ಅವುಗಳನ್ನು ದೈವಿಕ ಭಾವನೆಯೊಂದಿಗೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇನ್ನು ಯಾವುದೇ ಮಾಲೀಕರಿಲ್ಲದ ಬೀದಿ ನಾಯಿಗಳು, ಬೆಕ್ಕಿ ಅಥವಾ ಪಕ್ಷಿಗಳ ಮೇಲೆ ನಡೆಯುವ ಕ್ರೌರ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ಇಲ್ಲೊಬ್ಬ ವ್ಯಕ್ತಿ ತನ್ನ ಕಾರಿನಲ್ಲಿ ಹೋಗುವಾಗ ಕಾರನ್ನು ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಹರಿಸಿದ್ದಾನೆ. ಇದರಿಂದ ನಾಯಿ ಗಂಭೀರ ಗಾಯಗೊಂಡು ಸಾಯುವ ಸ್ಥಿತಿ ತಲುಪಿದಾಗ ನೀರು ಹಾಕಿ ಬದುಕಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ಆರೈಕೆಯ ನಂತರವೂ ನಾಯಿ ಬದುಕದೇ ಸ್ಥಳದಲ್ಲಿಯೇ ಸತ್ತು ಹೋಗಿದೆ. ಇದರಿಂದ ಮನನೊಂದ ಚಾಲಕ ನಾಯಿಯ ಮೇಲೆ ಕಾರು ಹರಿಸಿದ್ದಕ್ಕಾಗಿ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ತನ್ನದು ತಪ್ಪಾಗಿದೆ ಎಂದು ಕಿವಿ ಹಿಡಿದುಕೊಂಡು ಹತ್ತಾರು ಬಸ್ಕಿ ಹೊಡೆದಿದ್ದಾನೆ. ಇದಾದ ನಂತರ ನಾಯಿಯ ಮೃತದೇಹವನ್ನು ಮಣ್ಣು ಮಾಡುವುದಕ್ಕೆಂದು ಎತ್ತಿಕೊಂಡು ಹೋಗಿದ್ದಾರೆ.

ಈ ಘಟನೆ ನಡೆದ ಸ್ಥಳವನ್ನು ನೋಡಿದರೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿರಬಹುದು ಎಂದು ಅಂದಾಜಿಸಬಹುದು. ಕಾರಿನ ನಂಬರ್ ಪ್ಲೇಟ್ನಲ್ಲಿ ಜಾರ್ಖಂಡ್ ರಿಜಿಸ್ಟ್ರೇಷನ್ ಸಂಖ್ಯೆಯಿದೆ. ಸುತ್ತಲೂ ಅಂಗಡಿ-ಮುಂಗಟ್ಟುಗಳ ಫಲಕಗಳು ಕೂಡ ಹಿಂದಿ ಭಾಷೆಯಲ್ಲಿವೆ. ನಗರದ ಪ್ರಮುಖ ರಸ್ತೆಯ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ಕೆಲವರು ಅರ್ಧ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದಿ ವಿಟ್ಟಿ ರೈಟರ್ ಎಂಬ ಯೂಟೂಬ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

