ದೆಹಲಿಯಿಂದ ಬಾಕುವಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೊಳಕಾದ ಸೀಟು ನೀಡಿದ್ದಕ್ಕಾಗಿ ಇಂಡಿಗೋ ಏರ್‌ಲೈನ್ಸ್‌ಗೆ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ 1.75 ಲಕ್ಷ ರೂ. ದಂಡ ವಿಧಿಸಿದೆ. ಮಹಿಳೆ ದೂರು ನೀಡಿದರೂ ವಿಮಾನ ಸಿಬ್ಬಂದಿ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.
ದೆಹಲಿ (ಆ.10): ಸಾಮಾನ್ಯವಾಗಿ ಜನರು ವಿಮಾನದಲ್ಲಿ ಹೋಗುವಾಗ ಅತ್ಯಂತ ಶುಭ್ರವಾದ ಬಟ್ಟೆ ಧರಿಸಿ, ಖುಷಿಯಿಂದ ಹೋಗುತ್ತಾರೆ. ಆದರೆ, ಹೀಗೆ ಶುಭ್ರವಾಗಿ ವಿಮಾನಕ್ಕೆ ಹೋದ ಮಹಿಳೆಗೆ ವಿಮಾನದಲ್ಲಿ ಕೊಳಕಾದ ಸೀಟನ್ನು ಕೊಡಲಾಗಿದೆ. ಈ ಬಗ್ಗೆ ಮಹಿಳೆ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದ ವಿಮಾನ ಸಿಬ್ಬಂದಿಗೆ ಇದಕ್ಕೆ ನಿಮ್ಮಿಂದ ಪರಿಹಾರ ಪಡೆಯದೇ ಇರುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಮಹಿಳೆಗೆ ಕೊಳಕಾದ ಸೀಟು ಕೊಟ್ಟ ವಿಮಾನಯಾನ ಸಂಸ್ಥೆಗೆ 1.75 ಲಕ್ಷ ರೂ. ದಂಡವನ್ನು ಕೋರ್ಟ್ ವಿಧಿಸಿದೆ.
ಅಜೆರ್ಬೈಜಾನ್‌ನ ಬಾಕುವಿನಿಂದ ದೆಹಲಿಗೆ ವಿಮಾನ ಪ್ರಯಾಣದ ಸಮಯದಲ್ಲಿ ಕೊಳಕು ಸೀಟು ನೀಡಿದ್ದಕ್ಕಾಗಿ ಇಂಡಿಗೋ ಏರ್‌ಲೈನ್ಸ್‌ಗೆ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯ 1.75 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಪ್ರಯಾಣಿಕ ಮಹಿಳೆಗೆ ನೀಡಿದ ಸೀಟು ಕೊಳಕು ಮತ್ತು ಕಲೆಗಳಿಂದ ಕೂಡಿದ್ದಾಗಿತ್ತು ಎಂದು ನ್ಯಾಯಾಲಯ ಮನವರಿಕೆ ಮಾಡಿಕೊಂಡಿದೆ. ಈ ಘಟನೆಯು ಪ್ರಯಾಣಿಕರಿಗೆ ಮಾನಸಿಕ ಯಾತನೆ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಿದೆ ಎಂದು ನ್ಯಾಯಾಲಯ ಹೇಳಿದೆ. ಡಿಸೆಂಬರ್‌ನಲ್ಲಿ ನಡೆದ ಪ್ರಯಾಣದ ಸಮಯದಲ್ಲಿ ಈ ಅನುಭವದ ನಂತರ ಪ್ರಯಾಣಿಕರು ಮಾಡಿದ ದೂರನ್ನು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ನ್ಯಾಯಾಲಯ ಗಮನಸೆಳೆದಿದೆ.
ನಿರಂತರವಾಗಿ ಆರು ತಿಂಗಳ ಕಾನೂನು ಹೋರಾಟದ ನಂತರ ನ್ಯಾಯಾಲಯವು ಇಂಡಿಗೋಗೆ ದಂಡ ವಿಧಿಸಿದೆ. ಚಾಣಕ್ಯಪುರಿಯ ಮಹಿಳೆ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಅವರಿಗೆ ನೀಡಲಾಗಿದ್ದ ಸೀಟು ಹರಿದು ಹೋಗಿದ್ದು ಜೊತೆಗೆ ಅದು ಕೊಳಕಾಗಿತ್ತು. ಬದಲಿ ಸೀಟು ಕೇಳಿದರೂ, ಸೀಟುಗಳು ಭರ್ತಿಯಾಗಿದ್ದರಿಂದ ಬದಲಾಯಿಸಲಿಲ್ಲ. ನಂತರ ಅವರು ನಡೆಸಿದ ಕಾನೂನು ಹೋರಾಟದ ನಂತರ ತೀರ್ಪು ಬಂದಿದೆ.
ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರ ದೂರಿಗೆ ಅಸಡ್ಡೆ ಮತ್ತು ಕೆಟ್ಟ ಮನೋಭಾವವನ್ನು ತೋರಿಸಿದೆ ಎಂದು ನ್ಯಾಯಾಲಯ ಟೀಕಿಸಿದೆ. ಏರ್‌ಲೈನ್ಸ್ ದೂರನ್ನು ವಿರೋಧಿಸಲು ಪ್ರಯತ್ನಿಸಿದರೂ, ಸಿಚುಯೇಶನ್ ಡೇಟಾ ಡಿಸ್ಪ್ಲೇ ವರದಿಯನ್ನು ಸಲ್ಲಿಸುವಲ್ಲಿ ವಿಫಲವಾದದ್ದು ಕಂಪನಿಯ ವಾದವನ್ನು ದುರ್ಬಲಗೊಳಿಸಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಯಾಣಿಕರಿಗೆ ಮಾನಸಿಕ ಮತ್ತು ದೈಹಿಕ ತೊಂದರೆಗೆ 1.5 ಲಕ್ಷ ರೂಪಾಯಿ ಮತ್ತು ಮೊಕದ್ದಮೆ ವೆಚ್ಚಕ್ಕೆ 25,000 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇಂಡಿಗೋದಿಂದ ಇಂತಹ ಅನುಭವ ಮತ್ತೆ ಆಗಬಾರದು ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.


