Elephant dance : ಸೋಶಿಯಲ್ ಮೀಡಿಯಾದಲ್ಲಿ ಆನೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ನಿಜವಾಗ್ಲೂ ಆನೆ ಡಾನ್ಸ್ ಮಾಡಿದ್ಯಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಇಂದು ವಿಶ್ವ ಆನೆಗಳ ದಿನ (World Elephant Day). ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆಗಳ ದಿನವನ್ನು ಆಚರಿಸಲಾಗುತ್ತದೆ. ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ ಎನ್ನುಮವ ಮಾತೊಂದಿದೆ. ಗಣೇಶನ ರೂಪವೆಂದು ಪೂಜಿಸಲ್ಪಡುವ ಆನೆ ಎಲ್ಲರ ಆಕರ್ಷಣೆ. ಸುಂದರ ಹಾಡು ಅಥವಾ ಮ್ಯೂಜಿಕ್ ಕೇಳಿದಾಗ ನಮಗೆ ಅರಿವಿಲ್ಲದೆ ತಲೆದೂಗ್ತೇವೆ. ಮನುಷ್ಯ ಹಾಡು ಹೇಳೋದು, ಡಾನ್ಸ್ ಮಾಡೋದು ಸಾಮಾನ್ಯ. ಅದೇ ಪ್ರಾಣಿಗಳು ಅಪರೂಪ. ಇತ್ತೀಚಿಗೆ ಪ್ರಾಣಿಗಳು ಡಾನ್ಸ್ ಮಾಡಿದ ಕೆಲ ವಿಡಿಯೋ ವೈರಲ್ ಆಗ್ತಿರುತ್ತವೆ. ಈಗ ಆನೆ ಡಾನ್ಸ್ (Dance) ಮಾಡಿದ ವಿಡಿಯೋ ವೈರಲ್ ಆಗಿದೆ.

ರೀಲ್ ಮಾಡಲು ಯುವತಿಯೊಬ್ಬರು ಆನೆ ಮುಂದೆ ಡಾನ್ಸ್ ಮಾಡಿದ್ದಾರೆ. ಆದ್ರೆ ಈ ವಿಡಿಯೋದಲ್ಲಿ ಗಮನ ಸೆಳೆದಿದ್ದು ಯುವತಿ ಡಾನ್ಸ್ ಅಲ್ಲ, ಅವರ ಹಿಂದಿರುವ ಆನೆ ಡಾನ್ಸ್. ಮ್ಯೂಜಿಕ್ ಗೆ ಯುವತಿ ಸ್ಟೆಪ್ ಹಾಕ್ತಿದ್ದಂತೆ ಆನೆ ಕೂಡ ತನ್ನ ತಲೆದೂಗ್ತಾ, ಕಿವಿ ಅಲ್ಲಾಡಿಸ್ತಾ ಇದೆ. ಇದನ್ನು ನೋಡಿದ ಬಳಕೆದಾರರು ಆನೆ ಡಾನ್ಸ್ ಮಾಡ್ತಿದೆ ಎಂದಿದ್ದಾರೆ. ಆನೆ ಡಾನ್ಸ್ ಮೆಚ್ಚಿಕೊಂಡವರ ಸಂಖ್ಯೆ ಸಾಕಷ್ಟಿದೆ. ಯುವತಿ ಡಾನ್ಸ್ ಗಿಂತ ನಮ್ಮನ್ನು ಸೆಳೆದಿದ್ದು ಆನೆ ಡಾನ್ಸ್ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಯುವತಿ ಡಾನ್ಸ್ ಮಾಡಿರುವುದು ಎಲ್ಲಿ ಎಂಬುದು ಸ್ಪಷ್ಟವಾಗಿಲ್ಲ. ಈ ಹಿಂದೆ ಕೂಡ ಭರತನಾಟ್ಯ ಮಾಡ್ತಿದ್ದ ಯುವತಿಯರ ಹಿಂದಿದ್ದ ಆನೆ ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈಗಿನದ್ದು ಹಾಗೂ ಹಳೆಯ ವಿಡಿಯೋ ಎರಡರಲ್ಲೂ ಇರುವ ಆನೆ ಒಂದೆ. ಇಬ್ಬರು ಒಂದೇ ಜಾಗದಲ್ಲಿ ಡಾನ್ಸ್ ಮಾಡಿದ್ದಾರೆ. ಹಾಡು ಕೇಳ್ತಿದ್ದಂತೆ ಆನೆ ತಲೆದೂಗಲು ಶುರು ಮಾಡುತ್ತದೆ.

ನಿಜವಾಗಿಯೂ ಆನೆ ಡಾನ್ಸ್ ಮಾಡಿದ್ಯಾ? : ಈಗ ವಿಡಿಯೋಗಳನ್ನು ನಂಬೋದು ಕಷ್ಟ. ಯಾವುದು ವರ್ಜಿನಲ್ ಯಾವುದು ಎಐ ಅಂತ ತಿಳಿಯೋದಿಲ್ಲ. ಆದ್ರೆ ಇಲ್ಲಿರುವ ಆನೆ ತಲೆದೂಗಿದ್ದು ಸತ್ಯ. ಅದು ನಿಜವಾಗ್ಲೂ ಡಾನ್ಸಾ ಎನ್ನುವ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ಹಿಂದೆ ಭರತನಾಟ್ಯದ ವಿಡಿಯೋ ವೈರಲ್ ಆಗ್ತಿದ್ದಂತೆ ಆನೆ ಡಾನ್ಸ್ ನೋಡಿ ಜನರು ಖುಷಿಯಾಗಿದ್ದರು. ಆದ್ರೆ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಇದ್ರ ಬಗ್ಗೆ ಆತಂಕಕಾಗಿ ವಿಷ್ಯ ಹೊರ ಹಾಕಿದ್ದರು. ಆನೆ, ಸಾಂಗ್ ಕೇಳಿ ಡಾನ್ಸ್ ಮಾಡ್ತಿಲ್ಲ. ಇದು ಆನಂದಕ್ಕಿಂತ ಹೆಚ್ಚು ಒತ್ತಡದ ಸಂಕೇತ ಎಂದಿದ್ದರು. ಅವರ ಪ್ರಕಾರ ಆನೆ ಒತ್ತಡದಲ್ಲಿದೆ. ಸಂಕಟದಲ್ಲಿದ್ದಾಗ ಆನೆ ಏನು ಮಾಡುತ್ತೆ ಎನ್ನುವುದನ್ನು ತಿಳಿಸಲು ಅವರು ಒಂದು ವಿಡಿಯೋ ಕೂಡ ಹಂಚಿಕೊಂಡಿದ್ದರು.

ಆನೆಗಳಿಗೆ ತಮ್ಮದೇ ಆದ ಜೀವನ ವಿಧಾನ ಇದೆ. ಅವು ತಮ್ಮದೇ ರೀತಿಯಲ್ಲಿ ಭಾವನೆ ಹಂಚಿಕೊಳ್ಳುತ್ತವೆ. ಆನೆಗಳು ಒತ್ತಡ, ಬೇಸರ ಅಥವಾ ಆತಂಕಕ್ಕೆ ಪ್ರತಿಕ್ರಿಯೆಯಾಗಿ, ವಿಶೇಷವಾಗಿ ಸೆರೆಯಲ್ಲಿದ್ದಾಗ ಅವು, ಹಿಂದಕ್ಕೆ ಮತ್ತು ಮುಂದಕ್ಕೆ ತೂಗಾಡುತ್ತವೆ ಎಂದು ಪರ್ವೀನ್ ಕಸ್ವಾನ್ ಹೇಳಿದ್ದಾರೆ. ಇದನ್ನು ಸ್ಟೀರಿಯೊಟೈಪಿಕ್ ಸ್ವೇಯಿಂಗ್ ಎಂದು ಕರೆಯುತ್ತಾರೆ. ಈ ನಡವಳಿಕೆ ಸಾಮಾನ್ಯವಾಗಿ ಆನೆಗಳು ಪ್ರತ್ಯೇಕವಾಗಿರುವಾಗ, ಪ್ರಚೋದನೆಯ ಕೊರತೆಯಿರುವಾಗ ಅಥವಾ ಅನಾನುಕೂಲ ವಾತಾವರಣ ಇರುವಾಗ ಮಾಡ್ತವೆ. ಭಾವನಾತ್ಮಕ ಯಾತನೆಯ ಸಂಕೇತವೂ ಆಗಿರಬಹುದು ಎನ್ನುತ್ತಾರೆ ಪರ್ವೀನ್. ಆನೆಗಳು ಹೆಚ್ಚು ಸೋಶಿಯಲ್ ಪ್ರಾಣಿಗಳಾಗಿವೆ. ಅವು ಹಿಂಡಿನಿಂದ ಬೇರ್ಪಟ್ಟಾಗ ಅಥವಾ ಪರಿಚಯವಿಲ್ಲದ ಜಾಗದಲ್ಲಿ ತೂಗಾಡುತ್ತವೆ.

YouTube video player