ಮಿಹೈಲೊ ಟೊಲೋಟೋಸ್ (Man without woman) ಎಂಬ ವ್ಯಕ್ತಿ ತನ್ನ 82 ವರ್ಷಗಳ ಜೀವನದಲ್ಲಿ ಒಮ್ಮೆಯೂ ಹೆಣ್ಣನ್ನು ನೋಡಲಿಲ್ಲ. ಹುಟ್ಟುವಾಗಲೇ ತಾಯಿ ತೀರಿಕೊಂಡಳು. ನಂತರ ಆತನ ಬದುಕಿನಲ್ಲಿ ಏನಾಯಿತು? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ.  

ಈ ತಲೆಬರಹ ಓದಿದಾಗ, ಇದು ಅಸಾಧ್ಯ ಎಂದೇ ನಮ್ಮ ಮೊದಲ ರಿಯಾಕ್ಷನ್, ಅಲ್ಲವೆ? ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ, ಪುರುಷರು ಮಹಿಳೆಯರನ್ನು ನೋಡದೆ ಬದುಕುವುದೇ ಅಸಾಧ್ಯ. ಮನೆ, ಕಚೇರಿ, ಬೀದಿ, ಫೋನ್‌ ಅಥವಾ ತೆರೆ ಮೇಲೆ ನೋಡದೆ ಹತ್ತು ಹೆಜ್ಜೆ ನಡೆಯುವುದೇ ಸಾಧ್ಯವಿಲ್ಲ. ಇಂತಹ ಕಾಲದಲ್ಲಿ, ಯಾರಾದರೂ ತಮ್ಮ ಸಂಪೂರ್ಣ ಜೀವನವನ್ನು ಒಬ್ಬ ಮಹಿಳೆಯನ್ನೂ ನೋಡದೆ ಬದುಕಿದ್ದಾರೆ ಎಂಬುದು ಕಲ್ಪನೆಯಷ್ಟೇ ಅನಿಸಬಹುದು. ಆದರೆ ಇದು ಕತೆ ಅಲ್ಲ. ಇದಕ್ಕೆ ಐತಿಹಾಸಿಕ ದಾಖಲೆ ಇದೆ. ಕಣ್ಣಾರೆ ಕಂಡವರು ಇದ್ದಾರೆ.

ಆತನ ಹೆಸರು ಮಿಹೈಲೊ ಟೊಲೋಟೋಸ್. ಇತ್ತೀಚೆಗೆ ತಮ್ಮ 82ನೇ ವಯಸ್ಸಿನಲ್ಲಿ ಮೃತಪಟ್ಟರು. ಅವರು ತಮ್ಮ ಜೀವನದಲ್ಲಿ ಒಮ್ಮೆಯೂ ಹೆಣ್ಣನ್ನು ನೋಡಿಲ್ಲ. ಮಗುವಾಗಿದ್ದಾಗಲೂ, ಯವ್ವದಲ್ಲಿಯೂ, ವೃದ್ಧಾವಸ್ಥೆಯಲ್ಲಿಯೂ ನೋಡಲಿಲ್ಲ. ಅವರ ಸಂಪೂರ್ಣ ಜೀವನ ಒಂದು ದ್ವೀಪದಲ್ಲಿ ಕಳೆಯಿತು. ಅಲ್ಲಿ ಇತರ ಪುರುಷರಿದ್ದರು. ಆದರೆ ಮಹಿಳೆಯರಿರಲಿಲ್ಲ. ಅಲ್ಲಿ ಸಾವಿರ ವರ್ಷದಿಂದಲೂ ಮಹಿಳೆಯರಿಗೆ ಪ್ರವೇಶ ನಿಷೇಧಿತ.

ಅದು ಹೆಂಗಸರಿಗೆ ಸದಾ ನಿಷೇಧಿತ!

ಆ ಸ್ಥಳವೇ ಮೌಂಟ್ ಅಥೋಸ್. ಅದು ಮಹಿಳೆಯರಿಗೆ ಪ್ರವೇಶವಿಲ್ಲದ ಭೂಮಿ. ಇದಕ್ಕೆ ಕಾನೂನು ಮತ್ತು ನಂಬಿಕೆಯ ಬಲವಿದೆ. ಮೌಂಟ್ ಅಥೋಸ್ ಒಂದು ಸನ್ಯಾಸಿ ಪ್ರದೇಶ. ಇದು ಕೇವಲ ಮಠಗಳ ಗುಂಪಲ್ಲ. ಇದು ಗ್ರೀಸ್‌ನಲ್ಲಿರುವ ಸ್ವಾಯತ್ತ ಧಾರ್ಮಿಕ ಪ್ರದೇಶ. ಪ್ರಾಚೀನ ಸನ್ಯಾಸಿ ಕಾನೂನುಗಳಿಂದ ಇಲ್ಲಿನ ಆಡಳಿತ ನಡೆಸಲ್ಪಡುತ್ತದೆ. ಸರ್ಕಾರದಿಂದಲೇ ಮಾನ್ಯತೆ ಪಡೆದಿದೆ. ಅಲ್ಲಿ ಎಲ್ಲಾ ನಿಯಮಗಳಿಗಿಂತ ಕಠಿಣವಾದ ಒಂದೇ ಒಂದು ನಿಯಮ ಅಂದರೆ- ಎಂದಿಗೂ ಮಹಿಳೆಯರಿಗೆ ಪ್ರವೇಶವಿಲ್ಲ.

ಈ ನಿಷೇಧವನ್ನು ಅವಾಟೋನ್ ಎಂದು ಕರೆಯಲಾಗುತ್ತದೆ. ಇದು ಎಲ್ಲರಿಗೂ ಅನ್ವಯಿಸುತ್ತದೆ. ಪ್ರವಾಸಿಗರು, ಪತ್ರಕರ್ತರು, ರಾಜಕೀಯ ನಾಯಕರು- ಯಾರಿಗೂ ವಿನಾಯಿತಿ ಇಲ್ಲ. ಹೆಣ್ಣು ಪ್ರಾಣಿಗಳಿಗೂ ಬಹುತೇಕ ಪ್ರವೇಶವಿಲ್ಲ. ಅಲ್ಲಿ ಅಂಗೀಕರಿಸಲ್ಪಟ್ಟಿರುವ ಏಕೈಕ ಸ್ತ್ರೀ ಸಾನ್ನಿಧ್ಯ ದೈವಿಕವಾವಾದದ್ದು. ಕನ್ಯಾ ಮರಿಯಮ್ಮನನ್ನು ಆ ಭೂಮಿಯ ಆಧ್ಯಾತ್ಮಿಕ ರಕ್ಷಕಿ ಎಂದು ನಂಬಲಾಗುತ್ತದೆ. ಈ ನಿಯಮ ದ್ವೇಷ ಅಥವಾ ಭಯದಿಂದಲ್ಲ. ಸಂಪೂರ್ಣ ಸನ್ಯಾಸಿ ಜೀವನಕ್ಕಾಗಿ. ಸಂಪೂರ್ಣವಾಗಿ ಪ್ರಾರ್ಥನೆ, ಶಿಸ್ತು, ತ್ಯಾಗಕ್ಕೆ ಸಮರ್ಪಿತ ಜೀವನ ನಡೆಸುವ ಉದ್ದೇಶದಿಂದ.

ಇಂಥ ಪ್ರದೇಶಕ್ಕೆ ಮಿಹೈಲೊ ಟೊಲೋಟೋಸ್ ಬಂದುದು ಶಿಶು ಆಗಿರುವಾಗಲೇ. ಅವರ ತಾಯಿ ಹೆರಿಗೆಯಾದ ತಕ್ಷಣವೇ ನಿಧನರಾದರು. ಆಗ ಸನ್ಯಾಸಿಗಳು ಅವರನ್ನು ಈ ಮಠಕ್ಕೆ ಕರೆದುಕೊಂಡು ಹೋಗಿ, ಅಲ್ಲಿಯೇ ಬೆಳೆಸಿದರು. ಮಿಹೈಲೊ ತಮ್ಮ ಜೀವನದ ಕೊನೆಯವರೆಗೂ ಅಲ್ಲಿಯೇ ಉಳಿದರು. ಅವರ ಜಗತ್ತು ಬಲು ಸಣ್ಣದು ಮತ್ತು ಪುನರಾವರ್ತಿತ ಆಗಿತ್ತು. ಕಲ್ಲಿನ ಕಟ್ಟಡಗಳು. ಕಿರಿದಾದ ದಾರಿಗಳು. ಪ್ರಾರ್ಥನಾ ಮಂದಿರಗಳು. ಹೊಲಗಳು. ಇತರ ಸನ್ಯಾಸಿಗಳು. ದಿನಗಳು ಸೂರ್ಯೋದಯಕ್ಕೂ ಮುಂಚೆ ಪ್ರಾರಂಭ. ಮೌನ ಸಾಮಾನ್ಯ. ಶಿಸ್ತು, ಪ್ರಾರ್ಥನೆ, ವಿಧಿಗಳೇ ಎಲ್ಲ.

ನಗರಗಳಿಗೆ ಹೋಗುವ ಅವಕಾಶ ಇರಲಿಲ್ಲ. ಅಂಗಡಿಗಳೂ ಇರಲಿಲ್ಲ. ಹೊರಗಿನ ಜನರ ಸಂಭಾಷಣೆಯೂ ಇಲ್ಲ. ಹೊರ ಜಗತ್ತಿನ ಸುದ್ದಿಗಳು ನಿಧಾನವಾಗಿ ಬರುತ್ತಿದ್ದವು. ಕೆಲವೊಮ್ಮೆ ಬರುತ್ತಲೇ ಇರಲಿಲ್ಲ. ಮಿಹೈಲೊ ಟೊಲೋಟೋಸ್‌ಗೆ ಮಹಿಳೆಯನ್ನು ನೋಡದಿರುವುದು ಕೊರತೆಯಾಗಿ ಅನುಭವವಾಗಲಿಲ್ಲ. ಅದು ಅವರ ಬದುಕಿನ ಸಹಜ ವಾಸ್ತವವಾಗಿತ್ತು. ಇದರಿಂದ ಅವರು ಏನನ್ನಾದರೂ ಕಳೆದುಕೊಂಡಿದ್ದೇನೆ ಎಂದು ಯೋಚಿಸಿರಬಹುದಾ? ಊಹಿಸುವುದು ಕಷ್ಟ. ಆದರೆ ಮಿಹೈಲೊ ಟೊಲೋಟೋಸ್ ಆ ಬಗ್ಗೆ ಕುತೂಹಲ, ವಿಷಾದ ಅಥವಾ ಆಸೆಯನ್ನು ವ್ಯಕ್ತಪಡಿಸಿದ್ದರೆಂಬ ಯಾವುದೇ ದಾಖಲೆ ಇಲ್ಲ. ಅವರ ಜೊತೆಯಲ್ಲಿ ಬದುಕಿದ ಸನ್ಯಾಸಿಗಳು ಅವರನ್ನು ಶಾಂತ, ಸೌಮ್ಯ ಮತ್ತು ಆಳವಾದ ಭಕ್ತಿಯುಳ್ಳ ವ್ಯಕ್ತಿಯೆಂದು ವರ್ಣಿಸಿದ್ದಾರೆ.

ಯಾರಾದರೂ ಒಂದೇ ವ್ಯವಸ್ಥೆಯೊಳಗೆ ಬೆಳೆದು ಅದನ್ನು ಎಂದಿಗೂ ಬಿಟ್ಟು ಹೋಗದಿದ್ದರೆ, ಆ ವ್ಯವಸ್ಥೆ ನಿರ್ಬಂಧದಂತೆ ಕಾಣುವುದಿಲ್ಲ. ಅದೇ ಜಗತ್ತಾಗಿಬಿಡುತ್ತದೆ. ಇಂತಹ ಸಂಪೂರ್ಣ ಪ್ರತ್ಯೇಕತೆ ಇಂದು ಅಚ್ಚರಿಯ ಕತೆ. ಮಿಹೈಲೊ ಟೊಲೋಟೋಸ್ ತಮ್ಮನ್ನು ವಿಶೇಷ ವ್ಯಕ್ತಿಯೆಂದು ಕಂಡುಕೊಂಡಿರಲಿಲ್ಲ. ಬಂಡಾಯ ಮಾಡಲಿಲ್ಲ. ಅವರ ಜೀವನ ಸುಮ್ಮನೆ ಸಾಗಿತು. ನಮಗೆ ಮಾತ್ರ ಅದು ಅಸಾಧಾರಣವಾಗಿ ಕಾಣುತ್ತದೆ. ಯಾಕೆಂದರೆ ಅದು ನಮ್ಮ ಆಧುನಿಕ ನಿರೀಕ್ಷೆಗಳಿಂದ ಎಷ್ಟೋ ದೂರದಲ್ಲಿದೆ.