ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಬಳಕೆ ಮಾಡುವವರು ಈ ಒಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ವೈದ್ಯೆಯ ಈ ಮಾತನ್ನು ಕೇಳಿ...
ಮುಟ್ಟಿನ ದಿನಗಳಲ್ಲಿ ಹಿಂದೆಲ್ಲಾ ಬಟ್ಟೆ ಉಪಯೋಗಿಸಲಾಗುತ್ತಿತ್ತು. ಆ ಬಳಿಕ ಪ್ಯಾಡ್ ಸಂಸ್ಕೃತಿ ಬಂತು. ಕೋಟ್ಯಂತರ ಮಂದಿ ಪ್ಯಾಡ್ ಬಳಸುತ್ತಿದ್ದಾರೆ. ಆದರೆ ಕೆಲ ವರ್ಷಗಳಿಂದ ಮುಟ್ಟಿನ ಕಪ್, ಋತುಚಕ್ರದ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಬಳಕೆ ಹೆಚ್ಚಾಗಿದೆ. ಇದನ್ನು ಬಳಸುವವರು ಕೂಡ ಅಸಂಖ್ಯ ಮಹಿಳೆಯರು, ಯುವತಿಯರು, ಬಾಲಕಿಯರು ಇದ್ದಾರೆ. ಮೃದುವಾದ ರಬ್ಬರ್ ಅಥವಾ ಸಿಲಿಕೋನ್ನಿಂದ ಮಾಡಿದ ಬೆಲ್ ಆಕಾರದ ಕಂಟೇನರ್ ಆಗಿದ್ದು, ಇದನ್ನು ಮುಟ್ಟಿನ ದ್ರವವನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಋತುಚಕ್ರದ ಕಪ್ ಅನ್ನು ಯೋನಿಯೊಳಗೆ ಸೇರಿಸುವ ಮೂಲಕ ಬಳಸಲಾಗುತ್ತದೆ. ಈ ಕಪ್ ಒಂದು ಬಾರಿ ಖರೀದಿಸಿದರೆ, ಅದನ್ನು ಹಲವು ವರ್ಷಗಳವರೆಗೆ ಬಳಸಬಹುದು. ಇದು ಸ್ಯಾನಿಟರಿ ಪ್ಯಾಡ್ಗಳು ಮತ್ತು ಟ್ಯಾಂಪೂನ್ಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಾಯಕವಾಗಿರುತ್ತದೆ. ಇದೂ ಅಲ್ಲದೇ ಹಲವಾರು ಕಾರಣಗಳಿಂದ ಮುಟ್ಟಿನ ಕಪ್ ಅನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ.
ಇದು ತುಂಬಾ ಪ್ರಯೋಜನಕಾರಿ ಎನ್ನುವಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಬಳಸುವವರು ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಆ ಬಗ್ಗೆ ಸ್ತ್ರೀರೋಗ ತಜ್ಞರಾದ ಡಾ. ದೀಪ್ತಿ ತಿಳಿಸಿದ್ದಾರೆ. ತಮ್ಮ ಕ್ಲಿನಿಕ್ಗೆ ಬಂದ ಮಹಿಳೆ ಸಿಕ್ಕಾಪಟ್ಟೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದನ್ನು ತಿಳಿಸಿದರು. ಆಮೇಲೆ ಗೊತ್ತಾದದ್ದು 15 ದಿನಗಳಿಂದ ಅವರು ಮುಟ್ಟಿನ ಕಪ್ ಅನ್ನು ದೇಹದ ಒಳಗೆ ಸೇರಿಸಿಕೊಂಡು ಮರೆತಿದ್ದರು ಎನ್ನುವುದು. ಸಾಧಾರಣವಾಗಿ ಈ ರೀತಿ ಯಾವ ಮಹಿಳೆಯರೂ ಮಾಡುವುದಿಲ್ಲ ಎಂದೇ ಅಂದುಕೊಳ್ಳಬಹುದು. ಆದರೆ ಮುಟ್ಟು ಆಗಬಹುದು ಎನ್ನುವ ಕಾರಣದಿಂದ ಕಪ್ ಅನ್ನು ಮೊದಲೇ ಇನ್ಸರ್ಟ್ ಮಾಡಿಟ್ಟುಕೊಂಡು ಮೈಮರೆತಿದ್ದಳೋ ಅಥವಾ ಇನ್ನೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂಥವರೂ ಇರಬಹುದು ಎನ್ನುವ ಕಾರಣದಿಂದ ಡಾ.ದೀಪ್ತಿ ಅವರು ಈ ತಪ್ಪನ್ನು ಎಂದಿಗೂ ಮಾಡಬೇಡಿ ಎಂದು ಹೇಳಿದ್ದಾರೆ.
ಹೀಗೆ ಅವಧಿ ಮೀರಿ ಮುಟ್ಟಿನ ಕಪ್ ಅನ್ನು ದೇಹದ ಒಳಗೆ ಇಟ್ಟುಕೊಂಡರೆ ಅದು ಪ್ರಾಣಕ್ಕೆ ಕುತ್ತು ತರಬಹುದು ಎಂದಿದ್ದಾರೆ ವೈದ್ಯೆ. ಆದ್ದರಿಂದ ಮುಟ್ಟಿನ ಕಪ್ ಬಳಕೆ ಮಾಡುವವರು ಕನಿಷ್ಠ 4-5 ಗಂಟೆಗೆ ಒಮ್ಮೆ ಅದನ್ನು ಕ್ಲಿಯರ್ ಮಾಡಿಕೊಳ್ಳಬೇಕು. ಅದರಲ್ಲಿ ಸಂಗ್ರಹವಾಗುವ ರಕ್ತವನ್ನು ಚೆಲ್ಲಿ ಅದನ್ನು ಬಳಸಬೇಕು. ಇಲ್ಲದಿದ್ದರೆ ಕಿಡ್ನಿ ಫೇಲ್ಯೂರ್ ಆಗುತ್ತದೆ. ಆದ್ದರಿಂದ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದಿದ್ದಾರೆ. ಆದರೆ ಈ ರೀತಿ 15 ದಿನ ಅದನ್ನು ಅಲ್ಲಿಯೇ ಬಿಟ್ಟು ಇರುವ ಮಹಿಳೆಯರೂ ಇರುತ್ತಾರೆಯೇ ಎನ್ನುವ ಬಗ್ಗೆ ಕಮೆಂಟ್ನಲ್ಲಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ವೈದ್ಯೆ, ಅಂಥವರೂ ಇರುತ್ತಾರೆ. ಅದು ತಮ್ಮಗಮನಕ್ಕೆ ಬಂದಿದೆ ಎಂದಿದ್ದು, ಈ ಕಪ್ ಬಗ್ಗೆ ಗಮನ ಕೊಡುವಂತೆ ಹೇಳಿದ್ದಾರೆ.
ಇನ್ನು ಈ ಕಪ್ ಕುರಿತು ಹೇಳುವುದಾದರೆ, ಇದೊಂದು ಚಿಕ್ಕ, ಮಡಿಸಬಹುದಾದ, ಹೊಂದಿಕೊಳ್ಳುವ ಕೊಳವೆಯ ಆಕಾರದ ಸಾಧನವಾಗಿದ್ದು, ವೈದ್ಯಕೀಯ ದರ್ಜೆಯ ಸಿಲಿಕೋನ್, ರಬ್ಬರ್ ಅಥವಾ ಲ್ಯಾಟೆಕ್ಸ್ನಿಂದ ಮಾಡಲ್ಪಟ್ಟಿದೆ. ಇದು ಮುಟ್ಟಿನ ರಕ್ತವನ್ನು ಸಂಗ್ರಹಿಸಲು ಯೋನಿಯೊಳಗೆ ಸೇರಿಸಲಾಗುತ್ತದೆ. ಟ್ಯಾಂಪೂನ್ಗಳು ಮತ್ತು ಸ್ಯಾನಿಟರಿ ಪ್ಯಾಡ್ಗಳು ಮುಟ್ಟಿನ ದ್ರವವನ್ನು ಹೀರಿಕೊಳ್ಳುತ್ತವೆ, ಆದರೆ ಮುಟ್ಟಿನ ಕಪ್ ಅದನ್ನು ಸಂಗ್ರಹಿಸುತ್ತದೆ. ಕಪ್ ಅನ್ನು ಮಡಚಿ, ಟ್ಯಾಂಪೂನ್ನಂತೆ ಯೋನಿಯೊಳಗೆ ಸೇರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಒಂದು ಅತ್ಯಗತ್ಯ ಎಚ್ಚರಿಕೆ ವಹಿಸಬೇಕು. ಅದೇನೆಂದರೆ ಯೋನಿಯ ಸೈಜ್ಗೆ ಅನುಗುಣವಾಗಿ ಕಪ್ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಅದು ಇನ್ಫೆಕ್ಷನ್ ಆಗಬಹುದು.


