Gold Treasure: 2600 ವರ್ಷಗಳಷ್ಟು ಹಳೆಯದಾದ ಚಿನ್ನದ ನಾಣ್ಯಗಳಿಂದ ತುಂಬಿದ ಪಾತ್ರೆ ಪತ್ತೆಯಾಗಿದೆ. ಮನೆಯ ಅಡಿಪಾಯ ಹಾಕುವಾಗ ಈ ನಿಧಿ ಪತ್ತೆಯಾಗಿದ್ದು, ಸಂಶೋಧಕರು ಇದನ್ನು ಪ್ರಾಚೀನ ಕಾಲದ ಸೈನಿಕರ ಸಂಬಳ ಎಂದು ಊಹಿಸಿದ್ದಾರೆ.

ಚಿನ್ನದ ನಿಧಿ ಸಿಗುವ ಕನಸನ್ನು ಎಲ್ಲರೂ ಕಾಣುತ್ತಾರೆ. ಆದ್ರೆ ನಿಜ ಜೀವನದಲ್ಲಿ ಬೆರಳಣಿಕೆ ಜನರಿಗಷ್ಟೇ ಇಂತಹ ಕನಸು ನನಸು ಆಗುತ್ತದೆ. ಚಿನ್ನದ ನಿಧಿ ಸಿಗೋದು, ದೊಡ್ಡಮೊತ್ತದ ಹಣ ಲಾಟರಿಯಲ್ಲಿ ಗೆಲ್ಲೋದು ಸೇರಿದಂತೆ ಎಲ್ಲವೂ ಅದೃಷ್ಟದ ಮೇಲೆ ನಿರ್ಧರಿತವಾಗುತ್ತದೆ. ಕೆಲವೊಮ್ಮೆ ತಾವು ವಾಸಿಸುತ್ತಿರುವ ಮನೆ ಪುರ್ನವೀಕರಣಕ್ಕೆ ಮುಂದಾದ ಸಂದರ್ಭದಲ್ಲಿ ಎಷ್ಟೋ ಜನರಿಗೆ ತಮ್ಮ ಪೂರ್ವಜರು ನೆಲದಡಿ ಅಥವಾ ಗೋಡೆಯಲ್ಲಿ ಬಚ್ಚಿಟ್ಟ ಚಿನ್ನಾಭರಣ, ಚಿನ್ನದ ನಾಣ್ಯಗಳು ಸಿಕ್ಕಿರುತ್ತವೆ. ಇತ್ತೀಚೆಗೆ ಇಂತಹವುದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮನೆಗೆ ಅಡಿಪಾಯ ಹಾಕುವ ಸಂದರ್ಭದಲ್ಲಿ ಚಿನ್ನದ ನಾಣ್ಯಗಳು ತುಂಬಿರುವ ಪಾತ್ರೆಯೊಂದು ಸಿಕ್ಕಿದೆ.ಈ ಚಿನ್ನದ ನಾಣ್ಯಗಳು ಸುಮಾರು 2,600 ವರ್ಷಗಳಷ್ಟು ಅಥವಾ ಅದಕ್ಕಿಂತ ಹೆಚ್ಚು ಹಳೆಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಚಿನ್ನದ ಪಾತ್ರೆ ಸಿಗುತ್ತಿದ್ದಂತೆ ಸುತ್ತಲಿದ್ದ ಜನರು ಒಂದು ಕ್ಷಣವೂ ಕಣ್ಣು ಮಿಟುಕಿಸದೇ ನೋಡುತ್ತಿದ್ದರು ಎಂದು ವರದಿಯಾಗಿದೆ. 

ಟರ್ಕಿಯ ನೋಶನನ್ ನಗರದಲ್ಲಿ ಮಿಚೆಗನ್ ಯುನಿವರ್ಸಿಟಿಯ ತಂಡದ ಸದಸ್ಯರು ಉತ್ಖನನ ನಡೆಸುವ ಸಂದರ್ಭದಲ್ಲಿ ಚಿನ್ನದ ನಾಣ್ಯಗಳು ತುಂಬಿರುವ ಪಾತ್ರೆ ಸಿಕ್ಕಿದೆ. ಮನೆಯ ಅಡಿಪಾಯದಲ್ಲಿ ಹೂಳಲಾದ ಚಿನ್ನದ ನಾಣ್ಯಗಳಿಂದ ತುಂಬಿರುವ ಪಾತ್ರೆಯನ್ನು ಪತ್ತೆ ಮಾಡುವಲ್ಲಿ ಉತ್ಖನನ ತಂಡ ಯಶಸ್ವಿಯಾಗಿದೆ. ಸದ್ಯ ಸುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿಸಲಾಗಿದ್ದು, ಇಡೀ ತಂಡ ಉತ್ಖನನ ನಡೆಸಲಾಗುತ್ತಿದೆ.

ವರದಿಗಳ ಪ್ರಕಾರ, ಮನೆಯೊಂದರ ಮೂಲೆಯಲ್ಲಿ ಚಿನ್ನದ ನಿಧಿ ಸಿಕ್ಕಿದೆ. ಈ ಚಿನ್ನದ ನಿಧಿ ಕ್ರಿಸ್ತ ಪೂರ್ವ 3 ಅಥವಾ 5ನೇ ಶತಮಾನಕ್ಕಿಂತಲೂ ಹಳೆಯದು. ಈ ಸಂಬಂಧ ಸಂಶೋಧನೆ ನಡೆಯುತ್ತಿದ್ದು, ನಿಖರ ಸಮಯದ ಬಗ್ಗೆ ತಿಳಿದು ಬಂದಿಲ್ಲ. ಈ ಪ್ರಾಚೀನ ಕಾಲದ ನಾಣ್ಯಗಳ ಮೇಲೆ ವ್ಯಕ್ತಿಯೋರ್ವಮ ಮಂಡಿಯೂರಿ ಬಿಲ್ಲು ಬಿಡುತ್ತಿರುವ ದೃಶ್ಯಗಳನ್ನು ಕೆತ್ತನೆ ಮಾಡಲಾಗಿದೆ. ಈ ಚಿತ್ರಗಳು ಚಿನ್ನದ ನಾಣ್ಯಗಳ ಇತಿಹಾಸವನ್ನು ಹೇಳುತ್ತಿದ್ದು, ಇವುಗಳನ್ನು ಅತ್ಯಂತ ಪ್ರಮುಖ ಎಂದು ಸಹ ಪರಿಗಣಿಸಲಾಗುತ್ತದೆ.

ಇದುವೇ ಸೈನಿಕರ ಸಂಬಳ
ಈ ಚಿನ್ನದ ನಾಣ್ಯಗಳನ್ನು 'ಡೇರಿಕ್' ಎಂದು ಕರೆಯಲಾಗುತ್ತದೆ. ಡೇರಿಕ್ ಅನ್ನೋದು ಪ್ರಾಚೀನ ಕಾಲದ ಕರೆನ್ಸಿ ಆಗಿತ್ತು. ಈ ನಾಣ್ಯಗಳನ್ನು ಸೈನಿಕರಿಗೆ ವೇತನ ರೂಪದಲ್ಲಿ ನೀಡಲಾಗುತ್ತಿತ್ತು. ಈ ನಾಣ್ಯಗಳೇ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದಿರಬಹುದು ಎಂದು ಊಹಿಸಲಾಗಿದೆ. ಈ ನಿಧಿ ಪತ್ತೆಯಾದ ಬೆನ್ನಲ್ಲೇ ಸಂಶೋಧನಾ ತಂಡಗಳು ನೋಷನ್‌ನಲ್ಲಿ ಹೊಸ ಹಂತದ ಉತ್ಖನನವನ್ನು ಪ್ರಾರಂಭಿಸಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 'ಛಾವಾ' ಎಫೆಕ್ಟ್​: ಕೋಟೆಯನ್ನು ಅಗೆದು ಚಿನ್ನದ ನಿಧಿ ಹುಡುಕಿದ ಗ್ರಾಮಸ್ಥರು! ವಿಡಿಯೋ ವೈರಲ್​

ಗ್ರೀನ್ ಮತ್ತು ಪರ್ಷಿಯನ್ ಸೈನ್ಯ 
ಒಂದು ಕಾಲದಲ್ಲಿ ನೋಶನ್ ನಗರ ಗ್ರೀಕ್ ಮತ್ತು ಪರ್ಷಿಯನ್ ಸೇನೆಗಳ ಯುದ್ಧಭೂಮಿಯಾಗಿತ್ತು. ಕ್ರಿಸ್ತ ಪೂರ್ವ 430-427ರ ಕಾಲಘಟ್ಟದಲ್ಲಿ ನೋಶನ್ ಭೀಕರ ಯುದ್ಧಗಳಿಗೆ ಸಾಕ್ಷಿಯಾಗಿತ್ತು. ಈ ಯುದ್ಧಗಳು ನಡೆಯುವ ಸಂದರ್ಭದಲ್ಲಿ ಸ್ಥಳೀಯರು ತಮ್ಮ ಚಿನ್ನಾಭರಣ ಮತ್ತು ಸಂಪತ್ತನ್ನು ನೆಲದಡಿ ಹೂತಿರಬಹುದು ಎಂದು ಸಂಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಿಧಿ ತುಂಬಾ ಅಪರೂಪ. ಅಂದಿನ ಜನರು ತಮ್ಮ ಸಂಪತ್ತನ್ನು ಆಯಕಟ್ಟಿನ ಪ್ರದೇಶದಲ್ಲಿ ಗುಂಡಿ ತೋಡಿ ಮುಚ್ಚಿಡುತ್ತಿದ್ದರು. ತಮ್ಮ ಕಷ್ಟಕಾಲದಲ್ಲಿ ಈ ಸಂಪತ್ತು ಬಳಕೆ ಮಾಡಿಕೊಳ್ಳುತ್ತಿದ್ದರು. ಅವರ ನಿಧನದ ಬಳಿಕ ಚಿನ್ನ ಭೂಮಿಯಲ್ಲಿಯೇ ಉಳಿಯುತ್ತಿತ್ತು ಎಂದು ಪುರಾತತ್ವಶಾಸ್ತ್ರಜ್ಞ ಕ್ರಿಸ್ಟೋಫರ್ ರಾಟ್ಟೆ ಹೇಳುತ್ತಾರೆ.

ಸದ್ಯ ಈ ಚಿನ್ನದ ನಾಣ್ಯಗಳನ್ನು ಎಫೆಸಸ್ ವಸ್ತುಸಂಗ್ರಹಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಚಿನ್ನದ ನಾಣ್ಯಗಳ ಇತಿಹಾಸವನ್ನು ತಿಳಿಯುವ ಪ್ರಯುತ್ನದಲ್ಲಿ ಸಂಶೋಧಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಾಣ್ಯಗಳು ಅತಿದೊಡ್ಡ ಇತಿಹಾಸವನ್ನು ಹೊಂದಿವೆ ಎಂದು ಅಂದಾಜಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ನಿಧಿಗೆ ಸಂಬಂಧಿಸಿದ ಇನ್ನಷ್ಟು ಅಚ್ಚರಿಯ ವಿಷಯಗಳು ಬೆಳಕಿಗೆ ಬರಲಿ ಎಂದು ವರದಿಯಾಗಿದೆ. 

ಇದನ್ನೂ ಓದಿ: ಸಮುದ್ರ ತೀರದ ಮರಳಿನಲ್ಲಿ ಅಡಗಿದೆ ಚಿನ್ನದ ನಿಧಿ: ಹೊಸ ಸಂಶೋಧನೆಯಿಂದ ಹೆಚ್ಚಿದ ಕೌತುಕ