ಸಿರಿಯಾ ಅಂತರ್ಯುದ್ಧದ ಸಮಯದಲ್ಲಿ ಅಧ್ಯಕ್ಷ ಬಷರ್ ಅಲ್-ಅಸಾದ್ ₹2,082 ಕೋಟಿ ಮೌಲ್ಯದ ಸಂಪತ್ತನ್ನು ರಷ್ಯಾಗೆ ಸಾಗಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..

ಮಾಸ್ಕೋ: ಸಿರಿಯಾದಲ್ಲಿ ಅಂತರ್ಯುದ್ಧ ನಡೆದ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಬಷರ್‌ ಅಲ್‌ ಅಸಾದ್‌ ಸರ್ಕಾರ, ತಮ್ಮ ದೇಶದ 2,082 ಕೋಟಿ ರು. ಮೌಲ್ಯದ ಸಂಪತ್ತನ್ನು ಮಿತ್ರ ರಾಷ್ಟ್ರ ರಷ್ಯಾಗೆ ಸಾಗಿಸಿದ್ದು ಇದೀಗ ಬಹಿರಂಗವಾಗಿದೆ.

ಸಿರಿಯಾ ಆರ್ಥಿಕತೆಯನ್ನು ಉಸಿರಿಗಟ್ಟಿಸುವ ಉದ್ದೇಶದಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿದ ಆರ್ಥಿಕ ನಿರ್ಬಂಧಗಳಿಂದ ತಪ್ಪಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ನಿಭಾಯಿಸಲು ಹಾಗೂ ರಷ್ಯಾದೊಂದಿಗಿನ ಆರ್ಥಿಕ ಸಂಬಂಧವನ್ನು ಬಲಗೊಳಿಸಲು ಅಸಾದ್ ಈ ಕ್ರಮ ಜರುಗಿಸಿದ್ದರು. 2018- 2019ರ ಅವಧಿಯಲ್ಲಿ ಹಣವನ್ನು ಸಿರಿಯಾ ವಿಮಾನಗಳಲ್ಲಿ ಮಾಸ್ಕೋಗೆ ಹೊತ್ತೊಯ್ಯಲಾಗಿತ್ತು. ನಗದು ಹಾಗೂ ಬಿಲ್‌ಗಳ ರೂಪದಲ್ಲಿ ರಷ್ಯಾದ ಬ್ಯಾಂಕುಗಳಲ್ಲಿ ಹಣವನ್ನು ಸಿರಿಯಾ ಠೇವಣಿ ಇರಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.

ರಷ್ಯಾದಲ್ಲಿ ರಿಯಲ್‌ ಎಸ್ಟೇಟ್ ದಂಧೆ:

ಅಷ್ಟೇ ಅಲ್ಲ, ಅಸಾದ್‌ ಪರಿವಾರ ರಷ್ಯಾದಲ್ಲಿ ಆಸ್ತಿಯನ್ನೂ ಖರೀದಿಸಿ ರಿಯಲ್‌ ಎಸ್ಟೇಟ್‌ಗಳ ಮೇಲೆಯೂ ಹೂಡಿಕೆ ಮಾಡಿತ್ತು. ಇತ್ತ, ಅಸಾದ್‌ರ ಪತ್ನಿ ಆಸ್ಮಾ ಅಂತಾರಾಷ್ಟ್ರೀಯ ಡ್ರಗ್‌ ದಂಧೆ, ಇಂಧನ ಕಳ್ಳಸಾಗಣೆ ಸೇರಿದಂತೆ ಸಿರಿಯಾದ ಆರ್ಥಿಕತೆಯನ್ನು ಅಕ್ರಮವಾಗಿ ನಿಯಂತ್ರಿಸಿ ಅಧಿಕ ಆದಾಯ ಗಳಿಸುತ್ತಿದ್ದರು ಎಂದೂ ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಕಾರ್ಯದರ್ಶಿ ಡೇವಿಡ್‌ ಶೆಂಕರ್, ‘ತಮ್ಮ ಅಕ್ರಮ ಸಂಪತ್ತು ಹಾಗೂ ಸಿರಿಯಾದ ಅಧಿಕಾರವನ್ನು ಕಾಪಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಜತೆಗೆ, ಇದು ಅಸಾದ್‌ ಹಾಗೂ ಅವರ ಆಪ್ತರ ಉತ್ತಮ ಜೀವನಕ್ಕೂ ಅವಶ್ಯಕವಾಗಿತ್ತು’ ಎಂದರು.