ಬಾಂಗ್ಲಾದೇಶದಲ್ಲಿ, ಶೇಖ್ ಹಸೀನಾ ವಿರೋಧಿ ಎನ್‌ಸಿಪಿ ನಾಯಕ ಮೊಹಮ್ಮದ್ ಮೋತಲೇಬ್ ಶಿಕ್ದರ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಘಟನೆಯು ಇತ್ತೀಚೆಗೆ ಮತ್ತೊಬ್ಬ ವಿದ್ಯಾರ್ಥಿ ನಾಯಕನ ಹತ್ಯೆಯ ನಂತರ ದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತೋರಿಸುತ್ತದೆ.

ನವದೆಹಲಿ (ಡಿ.22): ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಶೇಖ್ ಹಸೀನಾ ವಿರೋಧಿ ನಾಯಕನ ಮೇಲೆ ದಾಳಿ ನಡೆದಿದೆ. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ರಾಷ್ಟ್ರೀಯ ನಾಗರಿಕರ ಪಕ್ಷದ (ಎನ್‌ಸಿಪಿ) ನಾಯಕ ಮೊಹಮ್ಮದ್ ಮೋತಲೇಬ್ ಶಿಕ್ದರ್ ಅವರನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಖುಲ್ನಾದಲ್ಲಿರುವ ಅವರ ಮನೆಯೊಳಗೆ ಗುಂಡಿಕ್ಕಿ ಕೊಲ್ಲಲಾಗಿದೆ. ವರದಿಗಳ ಪ್ರಕಾರ, ದಾಳಿಕೋರರು ನೇರವಾಗಿ ಮೋತಲೇಬ್ ಅವರ ತಲೆಗೆ ಗುಂಡು ಹಾರಿಸಿದ್ದಾರೆ. ಗಂಭೀರ ಗಾಯಗಳೊಂದಿಗೆ ಆತ ಕುಸಿದು ಬಿದ್ದಿದ್ದ ಎನ್ನಲಾಗಿದೆ. ಪಕ್ಕದಲ್ಲಿದ್ದವರು ತಕ್ಷಣ ಅವರನ್ನು ಮೇಲಕ್ಕೆತ್ತಿ ಖುಲ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಕಾರ, ಆರಂಭದಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಗುಂಡು ಅವರ ಕಿವಿಯ ಮೂಲಕ ಹಾದು ಹೋಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ. ಗುಂಡು ಅವರ ಮೆದುಳನ್ನು ತಲುಪದಿರುವುದು ಅದೃಷ್ಟವಶಾತ್, ಅವರ ಜೀವವನ್ನು ಉಳಿಸಿದೆ ಎಂದು ಪೊಲೀಸ್ ಅಧಿಕಾರಿ ಅನಿಮೇಶ್ ಮಂಡಲ್ ಹೇಳಿದ್ದಾರೆ. ಗಾಯಗೊಂಡಿರುವ ನಾಯಕ ಎನ್‌ಸಿಪಿ ಪಕ್ಷದ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಮೋತಲೇಬ್ ಶಿಕ್ದರ್ ಎನ್‌ಸಿಪಿಯ ಖುಲ್ನಾ ವಿಭಾಗದ ಮುಖ್ಯಸ್ಥ ಮತ್ತು ಪಕ್ಷದ ಸಂಯೋಜಿತ ಕಾರ್ಮಿಕ ಸಂಘಟನೆಯಾದ ಎನ್‌ಸಿಪಿ ಶ್ರಮಿಕ್ ಶಕ್ತಿಯ ಸಂಘಟಕರಾಗಿದ್ದು, ಅವರ ಮೇಲಿನ ದಾಳಿಯು ಆ ಪ್ರದೇಶದಲ್ಲಿ ಭೀತಿಯನ್ನು ಹರಡಿದೆ.

ಎನ್‌ಸಿಪಿ ಖುಲ್ನಾದಲ್ಲಿ ಕಾರ್ಮಿಕ ಮೆರವಣಿಗೆ ಆಯೋಜಿಸಲು ಯೋಜಿಸುತ್ತಿತ್ತು. ಶಿಕ್ದರ್ ಆ ಕೆಲಸದಲ್ಲಿ ತೊಡಗಿದ್ದರು. ದಾಳಿಕೋರರನ್ನು ಬಂಧಿಸಲು ಪೊಲೀಸರು ಹಲವಾರು ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.

ಎನ್‌ಸಿಪಿ ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಪ್ರಮುಖ ಚಳುವಳಿಯನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಂದ ರೂಪುಗೊಂಡ ಪಕ್ಷವಾಗಿದ್ದು, ಇದು ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾಯಿತು.

ವಿದ್ಯಾರ್ಥಿ ನಾಯಕ ಉಸ್ಮಾನ್‌ ಹದಿ ಕೆಲ ದಿನಗಳ ಹಿಂದೆ ಸಾವು

ಕೆಲವು ದಿನಗಳ ಹಿಂದೆ ಢಾಕಾದಲ್ಲಿ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರನ್ನು ಗುಂಡಿಕ್ಕಿ ಕೊಂದ ನಂತರ, ಬಾಂಗ್ಲಾದೇಶದಾದ್ಯಂತ ಉದ್ವಿಗ್ನತೆ ಹೆಚ್ಚಿರುವ ಮಧ್ಯೆ ಈ ದಾಳಿ ನಡೆದಿದೆ. ಡಿಸೆಂಬರ್ 12 ರಂದು ಢಾಕಾದ ಮಸೀದಿಯಿಂದ ಹೊರಬರುತ್ತಿದ್ದಾಗ ಮುಸುಕುಧಾರಿ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದರು. ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರದ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಯಿತು, ಅಲ್ಲಿ ಅವರು ಡಿಸೆಂಬರ್ 18 ರಂದು ನಿಧನರಾದರು. ಹಾದಿ ಢಾಕಾ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿ ಸಂಘಟನೆಯಾದ ಇಂಕ್ವಿಲಾಬ್ ಮಂಚ್‌ನ ಸ್ಥಾಪಕರಾಗಿದ್ದರು. ಅವರ ಸಾವು ರಾಜಧಾನಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ಕಾರಣವಾಯಿತು.

ಬಾಂಗ್ಲಾದಲ್ಲಿ ಹಿಂಸಾಚಾರ, ಭಾರತೀಯ ಸೇನೆ ಹೈಅಲರ್ಟ್‌

ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದಲ್ಲಿ ಭಾರತ ವಿರೋಧಿ ಭಾವನೆಗಳು ಸ್ಥಿರವಾಗಿ ಬೆಳೆದಿವೆ. ಶುಕ್ರವಾರ, ಇಂಕ್ವಿಲಾಬ್ ಮಂಚ್ ಮತ್ತು ಜಮಾತ್-ಇ-ಇಸ್ಲಾಮಿಯ ಮೂಲಭೂತವಾದಿಗಳು ಹಾದಿಯ ಸಾವನ್ನು ಪ್ರತಿಭಟಿಸಲು ಬೆನಪೋಲ್‌ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು. ಚಿತ್ತಗಾಂಗ್‌ನ ಚಂದ್ರನಾಥ ದೇವಾಲಯದ ಹೊರಗೆ ಉಗ್ರಗಾಮಿಗಳು ಧಾರ್ಮಿಕ ಘೋಷಣೆಗಳನ್ನು ಕೂಗಿದರು.

ಇದರ ನಡುವೆ, ಭಾರತೀಯ ಸೇನೆಯೂ ಸಕ್ರಿಯವಾಗಿದ್ದು, ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪೂರ್ವ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಆರ್‌ಸಿ ತಿವಾರಿ ಗುರುವಾರ ಸಂಜೆ ಭಾರತ-ಬಾಂಗ್ಲಾದೇಶ ಗಡಿಗೆ ಭೇಟಿ ನೀಡಿದರು.