ಬಲೂಚಿಸ್ತಾನದ ತೈಲ ಸಂಪನ್ಮೂಲಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನ ತಪ್ಪು ಮಾಹಿತಿ ನೀಡಿದೆ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಆರೋಪಿಸಿದ್ದಾರೆ. ಬಲೂಚಿಸ್ತಾನದ ನೆಲ ಮಾರಾಟಕ್ಕಿಲ್ಲ, ಸಂಪನ್ಮೂಲಗಳ ಶೋಷಣೆಗೆ ಅವಕಾಶವಿಲ್ಲ ಎಂದು ಎಚ್ಚರಿಸಿದ್ದಾರೆ.
ಬಲೂಚಿಸ್ತಾನ್‌ದ ಅಪಾರ ತೈಲ ಮತ್ತು ಖನಿಜ ಸಂಪನ್ಮೂಲಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನದ ಜನರಲ್ ಅಸಿಮ್ ಮುನೀರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಆರೋಪಿಸಿದ್ದಾರೆ.
ಅಮೆರಿಕ-ಪಾಕಿಸ್ತಾನ ತೈಲ ಒಪ್ಪಂದದ ಬಗ್ಗೆ ಬಹಿರಂಗ ಪತ್ರದಲ್ಲಿ, ತೈಲ ಬಲೂಚಿಸ್ತಾನದಲ್ಲಿದೆ, ಪಾಕಿಸ್ತಾನದಲ್ಲಿ ಅಲ್ಲ. ಈ ಪ್ರದೇಶ ಐತಿಹಾಸಿಕವಾಗಿ ಸಾರ್ವಭೌಮ ಬಲೂಚಿಸ್ತಾನ್ ಗಣರಾಜ್ಯದ ಭಾಗವಾಗಿದೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಾಗವಲ್ಲ ಎಂದು ಬಲೂಚ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ-ಪಾಕ್ ತೈಲ ಒಪ್ಪಂದದ ವಿವಾದ
ಟ್ರಂಪ್ ಇತ್ತೀಚೆಗೆ ಪಾಕಿಸ್ತಾನದೊಂದಿಗೆ ತೈಲ ಒಪ್ಪಂದ ಘೋಷಿಸಿದ್ದು, ಭವಿಷ್ಯದಲ್ಲಿ ಭಾರತವೂ ಪಾಕಿಸ್ತಾನದಿಂದ ತೈಲ ಖರೀದಿಸಬಹುದು ಎಂದು ಹೇಳಿಕೆ ನೀಡಿದ್ದರು. ಆದರೆ, ಬಲೂಚ್ ನಾಯಕರು ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಬಲೂಚಿಸ್ತಾನ ನೆಲ ಮಾರಾಟಕ್ಕಿಲ್ಲ. ಇಲ್ಲಿನ ಸಂಪನ್ಮೂಲಗಳ ಶೋಷಣೆಯನ್ನು ಪಾಕಿಸ್ತಾನ, ಚೀನಾ ಅಥವಾ ಯಾವುದೇ ದೇಶಕ್ಕೆ ಅನುಮತಿಸಲಾಗುವುದಿಲ್ಲ ಎಂದು ಮೀರ್ ಯಾರ್ ಬಲೂಚ್ ಎಚ್ಚರಿಸಿದ್ದಾರೆ.
ಬಲೂಚ್ ಜನರ ಐತಿಹಾಸಿಕ ಹೋರಾಟ
ಬಲೂಚಿಸ್ತಾನದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಗಳಿಂದ ಸ್ಥಳೀಯ ಬಲೂಚ್ ಸಮುದಾಯಗಳಲ್ಲಿ ಅಸಮಾಧಾನ ಮೂಡಿದೆ. ಪಾಕಿಸ್ತಾನದ ಆಕ್ರಮಣ ಮತ್ತು ಚೀನಾದ ಆರ್ಥಿಕ ಒಳನುಸುಳುವಿಕೆ ವಿರುದ್ಧ ಬಲೂಚ್ ಜನರು ದೀರ್ಘಕಾಲದಿಂದ ಹೋರಾಡುತ್ತಿದ್ದಾರೆ. 'ನಮ್ಮ ಸಂಪನ್ಮೂಲಗಳ ಮೇಲೆ ಬಲೂಚ್ ಜನರಿಗೆ ಮಾತ್ರ ಹಕ್ಕಿದೆ. ಇಸ್ಲಾಮಾಬಾದ್ ಅಥವಾ ಪಂಜಾಬ್‌ನ ಕಚೇರಿಗಳ ಇಚ್ಛೆಗೆ ಒಳಪಡದೆ ಇವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಬಲೂಚ್ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ಈ ಒಪ್ಪಂದವು ಭಾರತದ ಮೇಲೆ ಒತ್ತಡ ಹೇರಲು ಅಮೆರಿಕದ ತಂತ್ರವಾಗಿರಬಹುದು ಎಂಬ ಊಹಾಪೋಹಗಳ ನಡುವೆ, ಬಲೂಚಿಸ್ತಾನದ ತೈಲ ವಿವಾದವು ಅಂತಾರಾಷ್ಟ್ರೀಯ ಗಮನ ಸೆಳೆದಿದೆ.


