ಇರಾನ್ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಡೊನಾಲ್ಡ್ ಟ್ರಂಪ್, ಮಷಿನ್ಗನ್ ಹಿಡಿದ ತಮ್ಮ ಎಐ ಚಿತ್ರವನ್ನು ಹಂಚಿಕೊಂಡು 'ಸ್ಮಾರ್ಟ್ ಆಗಿ' ಎಂದು ಎಚ್ಚರಿಸಿದ್ದಾರೆ. ಇರಾನ್ ಮುಂದಿಟ್ಟಿದ್ದ 3 ಹಂತದ ಚರ್ಚೆಯ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದು, ಅಣ್ವಸ್ತ್ರ ಒಪ್ಪಂದದ ಬಗ್ಗೆ ಜಾಣತನ ತೋರುವಂತೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕದ ನಡುವಿನ ಶಾಂತಿ ಮಾತುಕತೆಗೆ ಮುಹೂರ್ತವೇ ಕೂಡಿಬರದಿರುವುದು ಹಾಗೂ ನಡೆದ ಸಭೆಗಳೆಲ್ಲಾ ವಿಫಲವಾಗಿರುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನವನ್ನು ಹೆಚ್ಚಿಸಿದೆ. ‘ನಾನಿನ್ನು ಒಳ್ಳೆಯವನಾಗಿ ಇರೋದಿಲ್ಲ. ನೀವು (ಇರಾನ್) ಬೇಗ ಸ್ಮಾರ್ಟ್ ಆಗಿ’ ಎಂಬ ಪೋಸ್ಟ್ನೊಂದಿಗೆ, ತಾವು ಯುದ್ಧಭೂಮಿಯಲ್ಲಿ ಮಷಿನ್ಗನ್ ಹಿಡಿದು ನಿಂತಿರುವಂತಹ ಎಐ ಚಿತ್ರವನ್ನು ಟ್ರುತ್ನಲ್ಲಿ ಹಂಚಿಕೊಂಡಿದ್ದಾರೆ.
ಇರಾನ್ಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್
ಜತೆಗೆ, ‘ಇರಾನ್ಗೆ ಯಾವುದೇ ಕೆಲಸವನ್ನು ಸಂಘಟಿತವಾಗಿ, ಫಲಪ್ರದವಾಗಿ ಮಾಡಲು ಬರುವುದೇ ಇಲ್ಲ. ಅಣ್ವಸ್ತ್ರದ ಗುರಿ ಬಿಟ್ಟು ಡೀಲ್ ಮಾಡಿಕೊಳ್ಳುವುದು ಹೇಗೆಂದು ಅವರಿಗೆ ತಿಳಿದಿಲ್ಲ. ಅವರು ಈ ವಿಷಯದಲ್ಲಿ ಆದಷ್ಟು ಬೇಗ ಜಾಣತನ ತೋರುವುದು ಒಳಿತು’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಹೋರ್ಮುಜ್ನಲ್ಲಿ ತನ್ನ ಹಡಗುಗಳಿಗೆ ಹೇರಿರುವ ನಿರ್ಬಂಧ ತೆಗೆದುಹಾಕಿದರೆ ತಾನು ಕೂಡ ಜಲಸಂಧಿಯನ್ನು ಮುಕ್ತ ಮಾಡುವುದಾಗಿ ಹೇಳಿದ್ದ ಇರಾನ್, 3 ಹಂತದ ಚರ್ಚೆಯ ಪ್ರಸ್ತಾಪ ಮುಂದಿಟ್ಟಿತ್ತು. ಅದರಲ್ಲಿ ಮೊದಲ ಎರಡು ಹಂತದ ಚರ್ಚೆಯ ಅಂಶಗಳಿಗೆ ಅಮೆರಿಕ ಒಪ್ಪಿಕೊಂಡರೆ ಮಾತ್ರವೇ ಮೂರನೇ ಹಂತದಲ್ಲಿ ಅಣ್ವಸ್ತ್ರ ವಿಷಯದ ಚರ್ಚೆ ಮಾಡುವುದಾಗಿ ಹೇಳಿತ್ತು. ಆದರೆ ಅದನ್ನು ಇದೀಗ ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ನಾಣ್ಯ ಆಯ್ತು, ಈಗ ಟ್ರಂಪ್ ಚಿತ್ರ ಇರೋ ಪಾಸ್ಪೋರ್ಟ್
ವಾಷಿಂಗ್ಟನ್: ಅಮೆರಿಕದ 250 ವರ್ಷಾಚರಣೆ ಹಿನ್ನೆಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಚಿತ್ರವುಳ್ಳ ನಾಣ್ಯ ಬಿಡುಗಡೆಯಾದ ಬೆನ್ನಲ್ಲೇ ಇದೀಗ ಅವರ ಫೋಟೋ ಇರುವ ವಿಶೇಷ ಪಾಸ್ಪೋರ್ಟ್ ಕೂಡ ಸಿದ್ಧವಾಗಲಿದೆ.
ಶ್ವೇತಭವನವು ತನ್ನ ಎಕ್ಸ್ ಖಾತೆಯಲ್ಲಿ ಹೊಸ ಪಾಸ್ಪೋರ್ಟ್ನ ಮೊದಲ ಫೋಟೋವನ್ನು ಹಂಚಿಕೊಂಡಿದ್ದು, ‘ಪೇಟ್ರಿಯೆಟ್ ಪಾಸ್ಪೋರ್ಟ್ ಅನಾವರಣಗೊಂಡಿದೆ. ಸೀಮಿತ ಸಂಖ್ಯೆಯಲ್ಲಿ ಲಭ್ಯ’ ಎಂದಿದೆ.ಇದರ ಒಂದು ಬದಿ ಟ್ರಂಪ್ರ ಫೋಟೋ ಹಾಗೂ ಸ್ವರ್ಣವರ್ಣದಲ್ಲಿ ಅವರ ಸಹಿ ಇದೆ. ಜತೆಗೆ ಸ್ವಾತಂತ್ರ್ಯದ ಘೋಷಣೆಗಳನ್ನೂ ಬರೆಯಲಾಗಿದೆ. ಇದನ್ನು ಡೆಮಾಕ್ರೆಟಿಕ್ ಸಂಸದ, ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಟೀಕಿಸಿದ್ದು, ‘ಅಮೆರಿಕದ ಪಾಸ್ಪೋರ್ಟ್ಗಳಲ್ಲಿ ಟ್ರಂಪ್ ಫೋಟೋ ಹಾಕುವುದು ಅಸಂಬದ್ಧ. ಪಾಸ್ಪೋರ್ಟ್ ಅಮೆರಿಕದ ಜನರನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯನ್ನಲ್ಲ’ ಎಂದು ಕಿಡಿ ಕಾರಿದ್ದಾರೆ.


