DP World CEO Resigns Over Epstein Files; Yuvaraj Narayan New CEO ಜೆಫ್ರಿ ಎಪ್ಸ್ಟೀನ್ ಹಗರಣದ ಎಫೆಕ್ಟ್ನಿಂದಾಗಿ ಡಿಪಿ ವರ್ಲ್ಡ್ (DP World) ಅಧ್ಯಕ್ಷ ಸುಲ್ತಾನ್ ಸುಲಾಯೆಮ್ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಯುವರಾಜ್ ನಾರಾಯಣ್ ಅವರು ಸಿಇಒ ಆಗಿ ನೇಮಕವಾಗಿದ್ದಾರೆ.
ನವದೆಹಲಿ (ಫೆ.14):ವಿಶ್ವದ ಅತಿದೊಡ್ಡ ಬಂದರು ಕಂಪನಿಗಳಲ್ಲಿ ಒಂದಾದ ಡಿಪಿ ವರ್ಲ್ಡ್ನ ಅಧ್ಯಕ್ಷರನ್ನು ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ಚಿತ್ರ ಮತ್ತು ವ್ಯವಹಾರ ಬಿಡುಗಡೆಯಾದ ನಂತರ ಪದಚ್ಯುತಗೊಳಿಸಲಾಗಿದೆ. ದುಬೈ ಅನ್ನು ವಿಶ್ವದ ಅತ್ಯುತ್ತಮ ವ್ಯಾಪಾರ ಕೇಂದ್ರವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರನ್ನು ಪದಚ್ಯುತಗೊಳಿಸಲಾಗಿದೆ. ಸುಲ್ತಾನ್ ಅಹ್ಮದ್ ಬಿನ್ ಸುಲಾಯಮ್ನನ್ನು ವಜಾ ಮಾಡಿದ ಬಳಕ, ಡಿಪಿ ವರ್ಲ್ಡ್ ಭಾರತೀಯ ಮೂಲದ ಕಾರ್ಯನಿರ್ವಾಹಕ ಯುವರಾಜ್ ನಾರಾಯಣ್ ಅವರನ್ನು ತನ್ನ ಹೊಸ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ.
ಸುಲ್ತಾನ್ ಸುಲಾಯೆಮ್ ತನ್ನ ಮನೆಯ ಅಡುಗೆಮನೆಯಲ್ಲಿ ಜೆಫ್ರಿ ಎಪ್ಸ್ಟೀನ್ ಜೊತೆ ಅಡುಗೆ ಮಾಡುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಎಪ್ಸ್ಟೀನ್ ಅವರ ದಾಖಲೆಗಳಲ್ಲಿ ಅವರ ಹೆಸರು 9400 ಬಾರಿ ಉಲ್ಲೇಖಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಎಪ್ಸ್ಟೀನ್ ಜೊತೆಗಿನ ಇಮೇಲ್ ಸಂಭಾಷಣೆಗಳಲ್ಲಿ ದುಬೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಂದಿಗಿನ ಲೈಂಗಿಕ ಸಂಬಂಧದ ವಿವರಣೆಗಳೂ ಇವೆ. ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಈ ಬಗ್ಗೆ ಎಪ್ಸ್ಟೀನ್ ಗೆ ಹೇಳುತ್ತಾ, "ಇದು ನಾನು ಅನುಭವಿಸಿದ ಅದ್ಭುತ ಸೆ*ಕ್ಸ್, ಅದ್ಭುತ ದೇಹ" ಎಂದು ಹೇಳಿದ್ದಾರೆ. ಜೆಫ್ರಿ ಎಪ್ಸ್ಟೀನ್ ಜೊತೆ ಅವರು ಅನೇಕ ವೈಯಕ್ತಿಕ ಮತ್ತು ಅಧಿಕೃತ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದು ದಾಖಲೆಗಳು ಸೂಚಿಸುತ್ತವೆ.
ವೆಬ್ಸೈಟ್ನಿಂದ ಚಿತ್ರವನ್ನೂ ತೆಗೆದುಹಾಕಿದ ಡಿಪಿ ವರ್ಲ್ಡ್
ಒಂದು ದಶಕದಲ್ಲಿ ಇಬ್ಬರೂ ನೂರಾರು ಇಮೇಲ್ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಡಿಪಿ ವರ್ಲ್ಡ್ ಶುಕ್ರವಾರ ತುರ್ತು ಪತ್ರಿಕಾ ಪ್ರಕಟಣೆಯಲ್ಲಿ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರ ರಾಜೀನಾಮೆಯನ್ನು ಘೋಷಿಸಿತು. ಬದಲಾಗಿ, ಎಸ್ಸಾ ಖಾಸಿಮ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಯುವರಾಜ್ ನಾರಾಯಣ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಡಿಪಿ ವರ್ಲ್ಡ್ನ ವೆಬ್ಸೈಟ್ನಿಂದ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರ ಚಿತ್ರವನ್ನೂ ತೆಗೆದುಹಾಕಲಾಗಿದೆ.
ಡಿಪಿ ವರ್ಲ್ಡ್, ಭಾರತದ ಕೊಚ್ಚಿ ಬಂದರು ಸೇರಿದಂತೆ ಆರು ಖಂಡಗಳನ್ನು ಒಳಗೊಂಡ ಬಂದರು ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಹೊಂದಿದೆ. ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಈ ಬಹುರಾಷ್ಟ್ರೀಯ ಕಂಪನಿಯನ್ನು 40 ವರ್ಷಗಳ ಕಾಲ ಮುನ್ನಡೆಸಿದರು. ಎಪ್ಸ್ಟೀನ್ ಫೈಲ್ಗಳಲ್ಲಿ ಅಹ್ಮದ್ ಬಿನ್ ಸುಲಾಯೆಮ್ ಅವರ ಹೆಸರು ಇದೆ ಎಂದು ಸ್ಪಷ್ಟವಾದ ನಂತರ, ಯುಕೆ ಅಭಿವೃದ್ಧಿ ಹಣಕಾಸು ಸಂಸ್ಥೆ ಮತ್ತು ಕೆನಡಾದ ಎರಡನೇ ಅತಿದೊಡ್ಡ ಪಿಂಚಣಿ ನಿಧಿಯಾದ ಲಾ ಕೈಕ್ಸಾ, ಡಿಪಿ ವರ್ಲ್ಡ್ನಲ್ಲಿನ ತಮ್ಮ ಯೋಜಿತ ಹೂಡಿಕೆಗಳನ್ನು ಸ್ಥಗಿತಗೊಳಿಸಿದವು.
ಯಾರಿವರು ಯುವರಾಜ್ ನಾರಾಯಣ್?
ಯುವರಾಜ್ ನಾರಾಯಣ್ ಅವರು ಭಾರತೀಯ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಅವರು ಡಿಪಿ ವರ್ಲ್ಡ್ನಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಅವರು 2004 ರಲ್ಲಿ ಕಂಪನಿಯನ್ನು ಸೇರಿದರು ಮತ್ತು 2005 ರಲ್ಲಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡರು ಎಂದು ಕಂಪನಿಯ ವೆಬ್ಸೈಟ್ ತಿಳಿಸಿದೆ.
ಇಷ್ಟು ವರ್ಷಗಳಲ್ಲಿ, ನಾರಾಯಣ್ ಅವರು ಕಂಪನಿಯ ಹಣಕಾಸು ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಸ್ತರಣೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರೂಪ್ ಡೆಪ್ಯೂಟಿ ಸಿಇಒ ಮತ್ತು ಸಿಎಫ್ಒ ಆಗಿ ಅವರ ಇತ್ತೀಚಿನ ಪಾತ್ರದಲ್ಲಿ, ಅವರು ಡಿಪಿ ವರ್ಲ್ಡ್ನ ಜಾಗತಿಕ ನೆಟ್ವರ್ಕ್ನಾದ್ಯಂತ ಹಣಕಾಸು ನಿರ್ವಹಣೆ, ಬಂಡವಾಳ ಹಂಚಿಕೆ, ಕಾರ್ಪೊರೇಟ್ ಹಣಕಾಸು ಮತ್ತು ಪ್ರಮುಖ ಕಾರ್ಯಾಚರಣೆಯ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಿದರು.


