ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮನತಣಿಸಲು ಸರ್ಕಾರ ದಿನಕ್ಕೊಂದು ಪದವಿ ನೀಡುತ್ತಿದೆ. ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
ಇಸ್ಲಾಮಾಬಾದ್ (ಡಿ.06) ಪಾಕಿಸ್ತಾನ ಸೇನೆ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಜಟಾಪಟಿ ತೀವ್ರಗೊಂಡಿದೆ. ಇಮ್ರಾನ್ ಖಾನ್ ಹತ್ಯೆಗೆ ಪಾಕಸ್ತಾನ ಸೇನೆ ಪ್ರಯತ್ನಿಸಿತ್ತು ಅನ್ನೋ ಗಂಭೀರ ಆರೋಪ, ಇದಕ್ಕೆ ಸಂಬಂದಪಟ್ಟಂತೆ ಇಮ್ರಾನ್ ಖಾನ್ ಕುಟುಂಬಸ್ಥರ ಆರೋಪ ತೀವ್ರ ಸ್ಪರೂಪ ಪಡೆದುಕೊಂಡಿದೆ. ಇಮ್ರಾನ್ ಖಾನ್ ಹತ್ಯೆ ಆರೋಪದ ನಡುವೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಚೀಫ್ ಆಫ್ ಡೆಫೆನ್ಸ್ ಫೋರ್ಸ್ ಪದವಿ ನೀಡಲಾಗಿದೆ. ಇತ್ತೀಚೆಗಷ್ಟೆ ಫೀಲ್ಡ್ ಆಫ್ ಮಾರ್ಶಲ್ ಸ್ಥಾನ ನೀಡಲಾಗಿತ್ತು. ಈ ನಡೆಯಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಆಕ್ರೋಶಗೊಂಡಿದ್ದಾರೆ. ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ಪಾಕಿಸ್ತಾನ ಸೇನೆ ಪ್ರತಿಕ್ರಿಯಿಸಿದ್ದು, ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದಿದೆ.
ಇಮ್ರಾನ್ ಖಾನ್ ಹೇಳಿಕೆ ಬೆನ್ನಲ್ಲೇ ಜಟಾಪಟಿ ಜೋರು
ಇಮ್ರಾನ್ ಖಾನ್ ಹತ್ಯೆಗೆ ಪಾಕಿಸ್ತಾನ ಸೇನೆ ಪ್ರಯತ್ನಿಸಿದ ಗಂಭೀರ ಆರೋಪ ಹೊರಬೀಳುತ್ತಿದ್ದಂತೆ, ಇಮ್ರಾನ್ ಖಾನ್ ಜೈಲಿನಲ್ಲಿ ಅನುಮಾನಸ್ವದ ಸಾವು, ಇಮ್ರಾನ್ ಖಾನ್‌ಗೆ ಎಲ್ಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿತ್ತು. ಇದರ ಬೆನ್ನಲ್ಲೇ ಇಮ್ರಾನ್ ಖಾನ್ ಕುಟುಂಬ ಸದಸ್ಯರಿಗೆ ಇಮ್ರಾನ್ ಖಾನ್ ಇರುವ ಜೈಲಿನಲ್ಲ ಭೇಟಿಗೂ ಅವಕಾಶ ನೀಡಲಿಲ್ಲ. ಹೋರಾಟ, ಆಕ್ರೋಶದ ಬಳಿಕ ಇಮ್ರಾನ್ ಖಾನ್ ಸಹದೋರಿ, ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗ ಇಮ್ರಾನ್ ಖಾನ್ ಸಂದೇಶ ತಿಳಿಸಿದ್ದರು. ಆಸೀಮ್ ಮುನೀರ್ ರಾಜಕೀಯ ಮಾಡುತ್ತಿದ್ದಾರೆ. ಪಾಕಿಸ್ತಾನ ಸೇನೆ, ರಾಜಕೀಯ ನಾಯಕರನ್ನು ಗೌರವಿಸಬೇಕು. ಇಲ್ಲಿ ರಾಜಕೀಯ ಮಾಡಬಾರದು. ಅಸೀಮ್ ಮುನೀರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂಬ ಇಮ್ರಾನ್ ಮಾತುಗಳನ್ನು ಸಹೋದರಿ ಬಹಿರಂಗಪಡಿಸಿದ್ದರು. ಈ ಹೇಳಿಕೆಯಿಂದ ಆಸೀಮ್ ಮುನೀರ್ ಕೆರಳಿದ್ದಾರೆ. ಇತ್ತ ಪಾಕಿಸ್ತಾನ ಸೇನೆಯ ವಕ್ತಾರರ ಮೂಲಕ ತಿರುಗೇಟು ನೀಡುವ ಪ್ರಯತ್ನ ಮಾಡಿದೆ.
ಕ್ರಿಮಿನಲ್ ಭೇಟಿಯಾಗಿ ಏನೇ ಬೇಕಾದರು ಹೇಳಿದರೆ ಆಗುವುದಿಲ್ಲ
ಜೈಲಿನಲ್ಲಿರುವ ಒಬ್ಬ ಕ್ರಿಮಿನಲ್ ಭೇಟಿಯಾಗಿ ಬಂದು ಆತ ಹೇಳಿದ್ದು ಮಾಧ್ಯಮಗಳ ಮೂಲಕ ಹೇಳಿ, ಪಾಕಿಸ್ತಾನ ಸೇನೆ ವಿರುದ್ದ ಮಾತನಾಡಿದರೆ ಸಹಿಸುವುದಿಲ್ಲ. ಇದನ್ನು ಪಾಕಿಸ್ತಾನ ಜನರು ಒಪ್ಪಿಕೊಳ್ಳುವುದಿಲ್ಲ. ಇಮ್ರಾನ್ ಖಾನ್ ಅಧಿಕಾರ ಕಳೆದುಕೊಂಡಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರಲು ಸಾಧ್ಯವಾಗುತ್ತಿಲ್ಲ. ಇನ್ನು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಈ ಹತಾಶೆಯಿಂದ ಇಮ್ರನ್ ಖಾನ್ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಲೆ.ಜನರಲ್ ಅಹಮ್ಮದ್ ಶರೀಫ್ ಚೌಧರಿ ಹೇಳಿದ್ದಾರೆ.
ಪಾಕ್ ಸೇನೆ ವಿರುದ್ಧ ಇಮ್ರಾನ್ ಹೇಳಿಕೆ ಹಿಂದೆ ಭಾರತ
ಪಾಕಿಸ್ತಾನ ಸೇನೆ ವಿರುದ್ದ ಇಮ್ರಾನ್ ಖಾನ್ ಹೇಳಿಕೆ ನೀಡುತ್ತಿದ್ದಾರೆ. ಇದರ ಹಿಂದೆ ಭಾರತ ಹಾಗೂ ಆಫ್ಘಾನಿಸ್ತಾನದ ಕೈವಾಡವಿದೆ ಎಂದು ಲೆ.ಜನರಲ್ ಚೌಧರಿ ಆರೋಪಿಸಿದ್ದಾರೆ. ಭಾರತ ಹಾಗೂ ಆಫ್ಘಾನಿಸ್ತಾನ ಕುಮ್ಮಕ್ಕಿನಿಂದ ತಾಲಿಬಾನ್‌ಗಳು ಸಕ್ರಿಯವಾಗಿದ್ದಾರೆ. ಆದರೆ ಪಾಕಿಸ್ತಾನ ಎಲ್ಲಾ ಸವಾಲು ಎದುರಿಸಲು ಸನ್ನದ್ಧವಾಗಿದೆ. ಪಾಕಿಸ್ತಾನ ಶತ್ರುಗಳಿಗೆ ಊಹೆಗೂ ಮೀರಿದ ಶಾಕ್ ನೀಡಲಿದೆ. ಬಳಿಕ ಪಾಕಿಸ್ತಾನ ಅನ್ನೋ ಭಯ ಸದಾ ಕಾಲ ಇರುವಂತೆ ಮಾಡುತ್ತೇವೆ ಎಂದು ಲೆ.ಜನರಲ್ ಚೌಧರಿ ಗುಡುಗಿದ್ದಾರೆ.


