ಫಿನ್ಲೆಂಡ್ ವಾಯುಪಡೆಯ ತರಬೇತಿ ಪೈಲಟ್‌ಗಳು ಆಕಾಶದಲ್ಲಿ ಪುರುಷ ಲಿಂಗದ ಆಕೃತಿಯಲ್ಲಿ ವಿಮಾನ ಹಾರಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಉದ್ದೇಶಪೂರ್ವಕ ಕೃತ್ಯವನ್ನು ವಾಯುಪಡೆ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಪೈಲಟ್‌ಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಹೆಲ್ಸಿಂಕಿ (ಏ.22): ಫಿನ್ಲೆಂಡ್ ವಾಯುಪಡೆಯ (Finnish Air Force) ತರಬೇತಿ ಪೈಲಟ್‌ಗಳು ತಮ್ಮ ವಿಮಾನವನ್ನು ಹಾರಿಸಿದ ಫ್ಲೈಟ್ ಪಾಥ್‌ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತರಬೇತಿ ವೇಳೆ ಪೈಲಟ್‌ಗಳು ವಿಮಾನವನ್ನು ಪುರುಷ ಲಿಂಗದ (Phallic Shape) ಆಕೃತಿಯಲ್ಲಿ ಹಾರಿಸಿದ್ದು, ಇದರ ವಿಡಿಯೋ ಮತ್ತು ಮ್ಯಾಪ್ ಡಾಟಾ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಾಯುಪಡೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ಏಪ್ರಿಲ್ 13 ರಂದು ರಿಸರ್ವ್ ಆಫೀಸರ್ ಪೈಲಟ್ ಕೋರ್ಸ್‌ನ ತರಬೇತಿ ನಿರತ ಪೈಲಟ್‌ಗಳಿಗೆ ಅಭ್ಯಾಸ ಹಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಫಿನ್ಲೆಂಡ್‌ನ ಟಿಕಾಕೋಸ್ಕಿಯಿಂದ ಬೆಳಿಗ್ಗೆ 7:30 ಕ್ಕೆ ನಾಲ್ಕು ವಿಮಾನಗಳು ಟೇಕ್ ಆಫ್ ಆಗಿದ್ದವು. ಫ್ಲೈಟ್ ಟ್ರ್ಯಾಕಿಂಗ್ ಸೈಟ್‌ಗಳಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಈ ವಿಮಾನಗಳು ಆಕಾಶದಲ್ಲಿ ಸಂಚರಿಸಿದ ಪಥವು ಪುರುಷ ಲಿಂಗದ ಆಕಾರವನ್ನು ಹೋಲುತ್ತಿತ್ತು. ವಾಯುಪಡೆಯ ಅಧಿಕಾರಿಗಳು ಈ ಘಟನೆಯನ್ನು ದೃಢಪಡಿಸಿದ್ದು, ಇದು ತರಬೇತಿ ಪೈಲಟ್‌ಗಳ ಉದ್ದೇಶಪೂರ್ವಕ ಕೃತ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ವಾಯುಪಡೆಯ ಪ್ರತಿಕ್ರಿಯೆ ಮತ್ತು ಶಿಸ್ತುಕ್ರಮ

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಫಿನ್ನಿಶ್ ವಾಯುಪಡೆ, ಸಂಬಂಧಪಟ್ಟ ಪೈಲಟ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಘೋಷಿಸಿದೆ. ಈ ಬಗ್ಗೆ ಈಗಾಗಲೇ ಆಂತರಿಕ ತನಿಖೆ ಆರಂಭವಾಗಿದ್ದು, ಪೈಲಟ್‌ಗಳಿಗೆ ಯಾವ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

"ಸೈನಿಕರು ಕಟ್ಟುನಿಟ್ಟಾದ ನಡವಳಿಕೆ ನಿಯಮಗಳನ್ನು ಪಾಲಿಸಬೇಕು. ಶಿಸ್ತಿನಿಂದ ಚ್ಯುತಿ ಉಂಟಾದಾಗ ಅದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು" ಎಂದು ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ವಿಮಾನಗಳು ನಿಗದಿಪಡಿಸಿದ ವಾಯುಪ್ರದೇಶದಲ್ಲೇ ಹಾರಾಟ ನಡೆಸಿದ್ದು, ಈ ಕೃತ್ಯದಿಂದ ವಾಯು ಸಂಚಾರಕ್ಕೆ ಅಥವಾ ನಾಗರಿಕ ಸುರಕ್ಷತೆಗೆ ಯಾವುದೇ ಅಡ್ಡಿಯಾಗಿಲ್ಲ.

ಹಿಂದೆಯೂ ನಡೆದಿದ್ದ ಇಂತಹ ಘಟನೆಗಳು

ಇದೇ ರೀತಿಯ ಘಟನೆಯೊಂದು 2023 ರಲ್ಲಿ ನಡೆದಿತ್ತು. ಲುಫ್ಥಾನ್ಸ ಏರ್ ಲೈನ್ಸ್‌ನ ಪೈಲಟ್ ಒಬ್ಬರು ವಿಮಾನದ ಹಾದಿಯನ್ನು ಬದಲಿಸಿದ್ದಕ್ಕೆ ಪ್ರತಿಭಟನೆಯ ರೂಪದಲ್ಲಿ ಆಕಾಶದಲ್ಲಿ ಪುರುಷ ಲಿಂಗದ ಆಕೃತಿ ಬರುವಂತೆ ವಿಮಾನ ಹಾರಾಟ ನಡೆಸಿ ಸುದ್ದಿಯಾಗಿದ್ದರು.