ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅತ್ಯಂತ ನಿಬಿಡವಾದ, ತೈಲ ಸಾಗಾಣಿಕೆಗೆ ಅತಿ ಮುಖ್ಯ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಈಗ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಇತ್ತೀಚಿನ ದಿನಗಳಲ್ಲಿ ಮಧ್ಯ ಪೂರ್ವದ ಪರಿಸ್ಥಿತಿ ಒಂದು ರೀತಿಯಲ್ಲಿ ವೇಗದ ಟೇಬಲ್ ಟೆನ್ನಿಸ್ ಆಟದಂತೆ ಭಾಸವಾಗುತ್ತಿದ್ದು, ಒಂದು ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ಎಪ್ರಿಲ್ 17ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಅತ್ಯಂತ ನಿಬಿಡವಾದ, ತೈಲ ಸಾಗಾಣಿಕೆಗೆ ಅತಿ ಮುಖ್ಯ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಈಗ ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು. ಆದರೆ ಅದೇ ದಿನ, ಇರಾನಿನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ಗೆ (ಐಆರ್ಜಿಸಿ) ಸಂಬಂಧಿಸಿದ ಮಾಧ್ಯಮ ಸಂಸ್ಥೆಯೊಂದು ವಿದೇಶಾಂಗ ಸಚಿವ ಅರಾಘ್ಚಿ ಯಾವ ಷರತ್ತುಗಳಡಿ ಹೊರ್ಮುಸ್ ಜಲಸಂಧಿಯನ್ನು ಮರಳಿ ತೆರೆದಿದ್ದಾರೆಂದು ಪ್ರಶ್ನಿಸಿ, ಖಾರವಾಗಿ ಟೀಕಿಸಿತ್ತು.
ಅದಾದ ಒಂದೇ ದಿನದ ಬಳಿಕ, ಇರಾನಿನ ಮಿಲಿಟರಿ ವಕ್ತಾರರು ಹೊರ್ಮುಸ್ ಜಲಸಂಧಿ ಮರಳಿ ಮುಚ್ಚಲ್ಪಟ್ಟಿದೆ ಎಂದಿದ್ದು, ಜಲಸಂಧಿಯನ್ನು ದಾಟಲು ಪ್ರಯತ್ನಿಸಿದ ಕೆಲವು ಹಡಗುಗಳ ಮೇಲೆ ದಾಳಿಯೂ ನಡೆಯಿತು. ಇರಾನಿನ ನಿರ್ಧಾರವನ್ನು ಟ್ರಂಪ್ ಟೀಕಿಸಿ, ಈಗಾಗಲೇ ಅಮೆರಿಕ ಹೊರ್ಮುಸ್ ಜಲಸಂಧಿಗೆ ವಿಧಿಸಿರುವ ದಿಗ್ಬಂಧನ ಇರಾನಿನ ಹಡಗುಗಳ ಸಂಚಾರವನ್ನು ತಡೆಗಟ್ಟಿದೆ ಎಂದರು. ಬಳಿಕ ಎಪ್ರಿಲ್ 19ರಂದು, ಅಮೆರಿಕದ ತಂಡ ಇರಾನ್ ಜೊತೆ ಮರಳಿ ಹೊಸದಾಗಿ ಶಾಂತಿ ಮಾತುಕತೆ ಆರಂಭಿಸಲು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿಗೆ ತೆರಳಲಿದೆ ಎಂದ ಟ್ರಂಪ್, ಮಾತುಕತೆ ಏನಾದರೂ ವಿಫಲವಾದರೆ ವಿದ್ಯುತ್ ಘಟಕಗಳು ಸೇರಿದಂತೆ ಇರಾನಿನ ಸಾರ್ವಜನಿಕ ವ್ಯವಸ್ಥೆಗಳ ಮೇಲೆ ದಾಳಿ ನಡೆಸುವುದಾಗಿಯೂ ಎಚ್ಚರಿಸಿದರು.
ಟ್ರಂಪ್ ಹೀಗೆ ಒಂದಕ್ಕೊಂದು ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುವುದು ಹೊಸ ಬೆಳವಣಿಗೆ ಏನಲ್ಲ. ಆದರೆ, ಇರಾನಿನಿಂದ ಈ ರೀತಿ ಗೊಂದಲಕಾರಿಯಾದ ಸಂಕೇತಗಳು ಬರುತ್ತಿರುವುದು ಒಂದು ಹೆಚ್ಚು ಗಂಭೀರವಾದ ವಿಚಾರವನ್ನು ಪ್ರದರ್ಶಿಸುತ್ತಿದೆ. ಅದೇನೆಂದರೆ, ಇಸ್ಲಾಮಿಕ್ ರಿಪಬ್ಲಿಕ್ ಒಳಗೆ ಅಧಿಕಾರದ ಕಿತ್ತಾಟ ನಡೆಯುತ್ತಿದ್ದು, ಕಳೆದ 47 ವರ್ಷಗಳಲ್ಲಿ ಪ್ರಬಲ ಸರ್ವೋಚ್ಚ ನಾಯಕ ಇಲ್ಲದೆ ಇರುವುದು ಇದು ಕೇವಲ ಎರಡನೇ ಬಾರಿಯಾಗಿದೆ. ಓರ್ವ ವೀಕ್ಷಕರು ಇದನ್ನು 'ಜಂಗಲ್ ಆಫ್ ಪವರ್' ಎಂದು ಕರೆದಿದ್ದು, ಇರಾನಿನ 1979ರ ಕ್ರಾಂತಿಯ ನಂತರದ ದಿನಗಳ ಕೋಲಾಹಲಕ್ಕೆ ಹೋಲಿಸಿದ್ದಾರೆ. ಇದು ಇಸ್ಲಾಮಾಬಾದಿಗೆ ತೆರಳುತ್ತಿರುವ ಅಮೆರಿಕನ್ ತಂಡಕ್ಕೆ ಪರಿಸ್ಥಿತಿಯನ್ನು ಹೆಚ್ಚು ಕಷ್ಟಕರವಾಗಿಸಿದೆ. ಯಾಕೆಂದರೆ, ಇಲ್ಲಿ ಉಭಯ ಪಕ್ಷಗಳಿಗೂ ತಾವು ಇನ್ನೊಂದು ಬದಿಯಲ್ಲಿ ಯಾರ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎನ್ನುವುದೇ ಸ್ಪಷ್ಟವಾಗಿ ತಿಳಿದಿಲ್ಲ.
ಎಪ್ರಿಲ್ 11 ಮತ್ತು 12ರಂದು ನಡೆದ ಮೊದಲ ಸುತ್ತಿನ ಮಾತುಕತೆಗಳು ಈ ಅಂತರಗಳನ್ನು ಪ್ರದರ್ಶಿಸಿದ್ದವು. ಸಾಮಾನ್ಯವಾಗಿ ಇರಾನ್ ಸಣ್ಣದಾದ, ಶಿಸ್ತಿನ, ಮತ್ತು ಎಲ್ಲ ಮಾಹಿತಿಗಳನ್ನು ಹೊಂದಿರುವ ತಂಡಗಳನ್ನು ಕಳುಹಿಸುತ್ತದೆ. ಆದರೆ, ಈ ಬಾರಿ ಬಹುತೇಕ 80 ಇರಾನಿಯನ್ನರು ಇಸ್ಲಾಮಾಬಾದಿಗೆ ಬಂದಿದ್ದು, ಅವರಲ್ಲಿ ಬಹುತೇಕ 30 ಜನರು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಇರುವವರಾಗಿದ್ದರು. ಇವರಲ್ಲಿ 2015ರ ಪರಮಾಣು ಒಪ್ಪಂದ ರೂಪಿಸಲು ನೆರವಾದ ನುರಿತ ರಾಜತಂತ್ರಜ್ಞ ಮಜೀದ್ ತಖ್ತ್ ರವಾಂಚಿ, ಮತ್ತು ಅಮೆರಿಕದ ಜೊತೆಗಿನ ಯಾವುದೇ ಒಪ್ಪಂದವಾದರೂ ಶರಣಾಗತಿಗೆ ಸಮಾನ ಎಂದು ವಾದಿಸುವ ತೀವ್ರಗಾಮಿ ನಾಯಕ ಮಹ್ಮೂದ್ ನಬಾವಿಯನ್ ಸಹ ಸೇರಿದ್ದಾರೆ. ಇರಾನಿನ ಆಂತರಿಕ ಚಕಮಕಿ ಈಗ ಎಷ್ಟು ತೀವ್ರವಾಗಿದೆ ಎಂದರೆ, ಪಾಕಿಸ್ತಾನಿ ಮಧ್ಯಸ್ಥಿಕೆದಾರರು ಅಮೆರಿಕನ್ನರೊಡನೆ ಸಮಾಲೋಚನೆ ನಡೆಸುವುದಕ್ಕಿಂತಲೂ ಹೆಚ್ಚು ಸಮಯವನ್ನು ಇರಾನಿಯನ್ನರ ನಡುವಿನ ಮಾತಿನ ಚಕಮಕಿಯನ್ನು ನಿಯಂತ್ರಿಸಲು ಕಳೆದಿದ್ದರು!
ಇವೆಲ್ಲ ಗೊಂದಲಗಳಿಗೆ ಮುಖ್ಯ ಕಾರಣವೆಂದರೆ, ಇರಾನಿನ ನಾಯಕತ್ವದ ಉನ್ನತ ಹಂತದಲ್ಲಿ ನಿರ್ಮಾಣವಾಗಿರುವ ನಿರ್ವಾತ. ಇರಾನಿನ ಸರ್ವೋಚ್ಚ ನಾಯಕನಾಗಿ 37 ವರ್ಷಗಳ ಕಾಲ ಆಡಳಿತ ನಡೆಸಿದ ಅಲಿ ಖಮೇನಿ ಇಸ್ರೇಲ್ - ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ನಿಧನರಾದ ಬಳಿಕ, ಅವರ ಉತ್ತರಾಧಿಕಾರಿಗಳು ಇನ್ನೂ ಖಮೇನಿ ಅಂತ್ಯಕ್ರಿಯೆಯ ದಿನಾಂಕವನ್ನೂ ನಿಗದಿಪಡಿಸಿಲ್ಲ. ಖಮೇನಿ ಮಗ ಮೊಜ್ತಾಬಾ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಗಳಿದ್ದರೂ, ಅವರು ನಿಯಂತ್ರಣ ಸಾಧಿಸಲು ಒಂದೋ ಅನಾರೋಗ್ಯ ಹೊಂದಿದ್ದಾರೆ, ಅಥವಾ ಬಹಳಷ್ಟು ದುರ್ಬಲರಾಗಿದ್ದಾರೆ. ಇನ್ನು ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ನಡೆಸಿದ ನಿಖರ ದಾಳಿಗಳಲ್ಲಿ ಹಳೆಯ ಆಡಳಿತ ವ್ಯವಸ್ಥೆಗೆ ನಿಷ್ಠರಾಗಿದ್ದ ಹಲವು ಹಿರಿಯ ಸೇನಾ ಕಮಾಂಡರ್ಗಳು ಸಾವಿಗೀಡಾಗಿದ್ದಾರೆ. ಇನ್ನು ಅವರ ಜಾಗದಲ್ಲಿ ನೇಮಕಗೊಂಡ ಅಧಿಕಾರಿಗಳು ಯುದ್ಧದ ಸಂದರ್ಭದಲ್ಲಿ ಇರಾನ್ ತನ್ನ ಸೇನಾ ಕಮಾಂಡಿನಲ್ಲಿ ಅಳವಡಿಸಿದ್ದ ವಿಕೇಂದ್ರೀಕರಣದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ.
ಎಪ್ರಿಲ್ 8ರ ಕದನ ವಿರಾಮದ ಬಳಿಕ, ಯುದ್ಧದ ಸಂದರ್ಭದಲ್ಲಿ ಇದ್ದ ಒಗ್ಗಟ್ಟು ಒಡೆಯಲಾರಂಭಿಸಿದೆ. ಅಧಿಕೃತ ಹೇಳಿಕೆಗಳ ಪ್ರಕಾರ, ಇರಾನಿನ ಅಧಿಕಾರ ಈಗ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕೈಯಲ್ಲಿದೆ. ಈ ಸಮಿತಿ ಅಧ್ಯಕ್ಷ, ಸಂಸತ್ತಿನ ಸ್ಪೀಕರ್, ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರನ್ನು ಒಳಗೊಂಡಿದೆ. ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರನ್ನು ಮುಖ್ಯ ಮಧ್ಯಸ್ಥಿಕೆದಾರರನ್ನಾಗಿಸಿದ್ದು, ಅರಾಘ್ಚಿ ಅವರ ಕೆಳಗೆ ಕಾರ್ಯಾಚರಿಸುತ್ತಿದ್ದಾರೆ. ಆದರೆ, 1,90,000 ಯೋಧರನ್ನು ಹೊಂದಿರುವ, ಇಸ್ಲಾಮಿಕ್ ಸಿಸ್ಟಮ್ ಅನ್ನು ರಕ್ಷಿಸುತ್ತಿರುವ ಐಆರ್ಜಿಸಿ ಮಾತ್ರ ಯಾವುದೇ ಮಾತುಕತೆಯ ವಿರುದ್ಧವಿದೆ. ಈ ಯುದ್ಧ ಈಗ ಹೊರ್ಮುಸ್ ಜಲಸಂಧಿಯ ಸುತ್ತಲೂ ತೆರೆ - ಮುಚ್ಚು - ತೆರೆ ಎನ್ನುವ ಗೊಂದಲಮಯ ಸನ್ನಿವೇಶವನ್ನು ಸೃಷ್ಟಿಸಿದೆ.
ಕಟ್ಟುನಿಟ್ಟಿನ ನಿಯಮ ಸಡಿಲು
ಇನ್ನು ಇರಾನಿನ ಒಳಗೂ ಮಿಲಿಟರಿ ಹೆಚ್ಚು ಹೆಚ್ಚು ದಿಟ್ಟವಾಗುತ್ತಿರುವುದು ಸ್ಪಷ್ಟವಾಗಿಯೇ ಕಂಡುಬರುತ್ತಿದೆ. ಐಆರ್ಜಿಸಿ ಸಂಪರ್ಕಿತ ಜಾಲಗಳು ಪ್ರತಿ ರಾತ್ರಿಯೂ ಸರ್ಕಾರದ ಪರ ಜನರನ್ನು ಕಲೆಹಾಕಿ, ಘೋಷಣೆಗಳನ್ನು ಮೊಳಗಿಸುತ್ತಿದ್ದು, ಅವರು ನೇರವಾಗಿಯೇ ಅರಾಘ್ಚಿ ಮತ್ತು ಘಾಲಿಬಾಫ್ ವಿರುದ್ಧ ನೇರವಾಗಿಯೇ ಆರೋಪಿಸುತ್ತಾರೆ. ಅಧಿಕೃತ ಘೋಷಣೆಗಳು ಈಗ ಇಸ್ಲಾಮಿಕ್ ವಿದ್ವಾಂಸರ ಬದಲು ಸಮವಸ್ತ್ರ ಧರಿಸಿರುವ ಸೇನಾಧಿಕಾರಿಗಳಿಂದ ಬರುತ್ತಿದ್ದು, ಇದು ನಿಜಕ್ಕೂ ಅಧಿಕಾರ ಹೊಂದಿರುವವರು ಯಾರು ಎನ್ನುವುದರ ದೊಡ್ಡ, ಸ್ಪಷ್ಟ ಸಂದೇಶ ರವಾನಿಸುತ್ತಿದೆ. ಕಟ್ಟುನಿಟ್ಟಿನ ನಿಯಮಗಳೂ ಈಗ ಸಡಿಲಾಗುತ್ತಿವೆ. ಇತ್ತೀಚಿನ ರ್ಯಾಲಿ ಒಂದರಲ್ಲಿ ತಲೆಗೆ ವಸ್ತ್ರ ಧರಿಸಿರದ ಓರ್ವ ಮಹಿಳೆ ಘೋಷಣೆಗಳನ್ನು ಕೂಗಿದ್ದು, ಮಹಿಳೆಯರು ಏಕಾಂಗಿಯಾಗಿ ಪುರುಷರ ಮುಂದೆ ಹಾಡಬಾರದು, ಘೋಷಣೆ ಕೂಗಬಾರದು ಎನ್ನುವ 40 ವರ್ಷಗಳ ಹಳೆಯ ನಿಷೇಧವನ್ನು ಮುರಿದಿದ್ದಾರೆ. ಐಆರ್ಜಿಸಿ ಸಂಬಂಧಿತ ಮಾಧ್ಯಮ ಮೇ 1ರಂದು ನಡೆಸಲು ಉದ್ದೇಶಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವಂತೆ ಸಲಹೆ ನೀಡಿದೆ.
ಇವೆಲ್ಲ ಗಲಭೆಗಳು ಅಮೆರಿಕವನ್ನು ಒಳ್ಳೆಯ ಒಪ್ಪಂದಕ್ಕೆ ಬರುವಂತೆ ಮಾಡಲು ಹೇರುತ್ತಿರುವ ಒತ್ತಡ ಎಂದು ಹಲವರು ಭಾವಿಸಿದ್ದಾರೆ. ಏಕೆಂದರೆ, ಇರಾನಿನ ಆಡಳಿತದ ಒಳಗೆ ಭಿನ್ನಾಭಿಪ್ರಾಯಗಳು ಇರುವುದು ಹೊಸದೇನಲ್ಲ. ಇರಾನಿನ ನಾಯಕತ್ವ ಮೊದಲಿನಿಂದಲೂ ರಾಷ್ಟ್ರೀಯವಾದಿಗಳು, ಅಂದರೆ ಇರಾನಿಗೆ ಪ್ರಾಯೋಗಿಕ ಪ್ರಯೋಜನಗಳೇನು ಎಂದು ನೋಡುವವರು ಮತ್ತು ಇಸ್ಲಾಮಿಸ್ಟ್ಗಳು, ಅಂದರೆ ಕ್ರಾಂತಿಕಾರಿ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎನ್ನುವ ಎರಡು ಬಣಗಳನ್ನು ಹೊಂದಿತ್ತು. ಇನ್ನು ಹಣದ ವಿಚಾರವಂತೂ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಬಹಳಷ್ಟು ಜನರಲ್ಗಳು ಅಮೆರಿಕದ ನಿರ್ಬಂಧಗಳನ್ನು ತಪ್ಪಿಸಿಕೊಂಡು, ಅದರಿಂದಲೂ ಭಾರೀ ಲಾಭ ಗಳಿಸುವುದರಲ್ಲಿ ನಿಪುಣರಾಗಿದ್ದಾರೆ.
ಮೊಜ್ತಾಬಾ ಖಮೇನಿ ಮತ್ತು ಘಾಲಿಬಾಫ್ ಸುತ್ತಲಿನ ಗುಂಪುಗಳೂ ಭಾರೀ ಪ್ರಮಾಣದಲ್ಲಿ ವಿದೇಶೀ ಆಸ್ತಿಗಳನ್ನು ನಿಯಂತ್ರಿಸುತ್ತವೆ ಎನ್ನಲಾಗಿದ್ದು, ಆ ಕುರಿತು ಈಗ ಮಾಧ್ಯಮಗಳು ವರದಿ ಮಾಡುತ್ತಿವೆ. ಇರಾನಿನಲ್ಲಿ ಪ್ರತಿಯೊಂದು ಗುಂಪೂ ಪರಮಾಣು ಕಾರ್ಯಕ್ರಮ, ಕೊಲ್ಲಿ ಸಮುದ್ರಗಳ ನಿಯಂತ್ರಣ, ಮತ್ತು ಇರಾನಿನ ಪ್ರಾಕ್ಸಿ ಸೇನೆಗಳು ಸೇರಿದಂತೆ, ದೊಡ್ಡ ವಿಚಾರಗಳ ಕುರಿತಂತೆ ತನ್ನದೇ ಆದ ಅಭಿಪ್ರಾಯಗಳನ್ನು ಹೊಂದಿವೆ. ನಿರ್ಬಂಧಗಳ ತೆರವಿಗೆ ಪ್ರತಿಯಾಗಿ, ಪ್ರಾಕ್ಸಿ ಗುಂಪುಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಲು ರಾಷ್ಟ್ರೀಯವಾದಿಗಳು ಸಿದ್ಧರಿದ್ದಾರೆ. ಆದರೆ, ಇಸ್ಲಾಮಿಸ್ಟ್ಗಳು ಇಂತಹ ಪ್ರಾಕ್ಸಿ ಗುಂಪುಗಳು ತಮ್ಮ 'ಪ್ರತಿರೋಧ'ದ ಬೆನ್ನೆಲುಬು ಎಂದೇ ಭಾವಿಸಿದ್ದಾರೆ.
ತಾವು ತೀವ್ರ ರೀತಿಯ ಪರಮಾಣು ಕಾರ್ಯಕ್ರಮಗಳನ್ನು ಕೈಗೊಂಡರೆ ಅದು ಅಮೆರಿಕನ್ ದಾಳಿಗಳನ್ನು ಆಹ್ವಾನಿಸಬಹುದು ಎಂದು ರಾಷ್ಟ್ರೀಯವಾದಿಗಳು ಆತಂಕ ಹೊಂದಿದ್ದರೆ, ಇಸ್ಲಾಮಿಸ್ಟ್ಗಳು ಉತ್ತರ ಕೊರಿಯಾದ ರೀತಿಯಲ್ಲಿ ನಾವೂ ಪರಮಾಣು ಬಾಂಬ್ ಹೊಂದಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಎಲ್ಲರ ನಡುವೆ ಒಗ್ಗಟ್ಟು ಮೂಡಿಸುವ ಸಲುವಾಗಿ ಎಪ್ರಿಲ್ 15ರಂದು ಟೆಹರಾನ್ಗೆ ಭೇಟಿ ನೀಡಿದ್ದಾರೆ. ಇನ್ನು ಇರಾನ್ಗೆ ಯುದ್ಧದಿಂದ ಉಂಟಾಗಿರುವ ಹಾನಿಯನ್ನು ಮರು ನಿರ್ಮಾಣ ನಡೆಸಬೇಕಿದ್ದು, ಒಟ್ಟು 270 ಬಿಲಿಯನ್ ಡಾಲರ್ (ಅಂದಾಜು 25 ಲಕ್ಷ ಕೋಟಿ ರೂಪಾಯಿ) ನಷ್ಟ ಉಂಟಾಗಿದೆ ಎನ್ನಲಾಗಿದೆ. ಒಂದು ವೇಳೆ ಇರಾನ್ ಶಾಂತಿ ಮಾತುಕತೆಗಾಗಿ ಇಸ್ಲಾಮಾಬಾದಿನತ್ತ ಮುಖ ಮಾಡಿದರೂ, ಈ ಆಂತರಿಕ ಕದನಗಳ ಕಾರಣದಿಂದ, ಒಂದು ವೇಳೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೂ ಯಾವುದೇ ನೈಜ ಶಾಂತಿ ದೀರ್ಘಕಾಲ ಬಾಳಿಕೆ ಬರದಂತೆ ಮಾಡಿಬಿಡುವ ಅಪಾಯಗಳು ದಟ್ಟವಾಗಿವೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


