ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಗ್ರಹಾಗಾರಗಳು ತುಂಬಿದ್ದು, ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಜನ ದಂಗೆ ಏಳುವ ಸಾಧ್ಯತೆಯನ್ನೂ ಸೃಷ್ಟಿಸಿದೆ.

ಟೆಹರಾನ್‌/ವಾಷಿಂಗ್ಟನ್‌: ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ಹೊಸ ತಲೆನೋವು ಸೃಷ್ಟಿಯಾಗಿದೆ. ಉತ್ಪಾದಿಸಿದ ತೈಲವನ್ನು ರಫ್ತು ಮಾಡಲಾಗದ ಸ್ಥಿತಿ ಒಂದೆಡೆಯಾದರೆ. ಮತ್ತೊಂದೆಡೆ ಅವುಗಳನ್ನು ಸಂಗ್ರಹಿಸಿಡಲೂ ಸಾಧ್ಯವಾಗದ ಸ್ಥಿತಿಗೆ ಇರಾನ್‌ ತಲುಪಿದೆ. ಇದು ಇರಾನ್‌ ತೈಲ ಉತ್ಪಾದನೆ ಕಡಿತಕ್ಕೆ ದಾರಿಮಾಡಿಕೊಡುವುದಷ್ಟೇ ಅಲ್ಲದೆ, ದೇಶದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ಉತ್ಪಾದನೆ ಸ್ಥಗಿತಗೊಳಿಸಿದರೆ ಘಟಕಗಳಿಗೆ ಹಾನಿ

ಇಂಧನ ಸಂಶೋಧನಾ ಸಂಸ್ಥೆ ಕೆಪ್ಲರ್‌ ಪ್ರಕಾರ, ಇರಾನ್‌ ಬಳಿ ಇನ್ನು ಕೇವಲ 12-22 ದಿನಗಳ ತೈಲ ಸಂಗ್ರಹ ಸಾಮರ್ಥ್ಯವಷ್ಟೇ ಇದೆ. ಒಂದು ವೇಳೆ ಇದು ಕೂಡ ಭರ್ತಿಯಾದರೆ ನಿತ್ಯ 1.5 ದಶಲಕ್ಷ ಬ್ಯಾರೆಲ್‌ನಷ್ಟು ತೈಲ ಉತ್ಪಾದನೆ ಕಡಿತಗೊಳಿಸಬೇಕಾದ ಸ್ಥಿತಿಗೆ ಇರಾನ್‌ ಸಿಲುಕಲಿದೆ. ಈಗಾಗಲೇ ಇರಾನ್‌ 2.5 ದಶಲಕ್ಷ ಬ್ಯಾರೆಲ್‌ ತೈಲ ಉತ್ಪಾದನೆ ಕಡಿತಗೊಳಿಸಿದೆ.

ಮಾರ್ಚ್‌ನಲ್ಲಿ ಇರಾನ್‌ನ ತೈಲ ರಫ್ತು 18.5 ಲಕ್ಷ ಬ್ಯಾರೆಲ್‌ನಷ್ಟಿತ್ತು. ಇದೀಗ ಅದು 5.67 ಲಕ್ಷ ಬ್ಯಾರೆಲ್‌ಗೆ ಇಳಿದಿದೆ. ಸದ್ಯಕ್ಕೆ ಇದರಿಂದ ದೇಶದ ಮೇಲೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದಿದ್ದರೂ ಮೂರ್ನಾಲ್ಕು ತಿಂಗಳ ಬಳಿಕ ನಿರ್ಬಂಧದ ಬಿಸಿ ತಟ್ಟಲಿದೆ.

ಇರಾನ್‌ನಲ್ಲಿ ಮತ್ತೆ ಜನರ ದಂಗೆ?

ಯುದ್ಧದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೆಲವೇ ವಾರಗಳಲ್ಲಿ ಇರಾನ್‌ನಲ್ಲಿ ಜನ ಮತ್ತೆ ದಂಗೆ ಏಳುವ ನಿರೀಕ್ಷೆ ಇದೆ. ಕಳೆದ ಜನವರಿಯಲ್ಲಷ್ಟೇ ಜನ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದು, ಅದನ್ನು ಧಮನ ಮಾಡಲಾಗಿತ್ತು. ಸದ್ಯದ ಸ್ಥಿತಿಯಲ್ಲಿ ಇರಾನ್‌ನ ಆಡಳಿತವು ಆರರಿಂದ ಎಂಟು ವಾರಗಳಷ್ಟು ಕಾಲ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆ ಬಳಿಕ ಜನ ದಂಗೆ ಏಳುವುದನ್ನು ತಪ್ಪಿಸಲು ಅಸಾಧ್ಯ ಎಂದು ಪರಮೋಚ್ಚ ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ ಎನ್ನಲಾಗಿದೆ.