ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಯಹೂದಿ ಹಬ್ಬದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಈ ಕೃತ್ಯವನ್ನು ಪಾಕಿಸ್ತಾನಿ ಮೂಲದ ತಂದೆ ಮತ್ತು ಮಗ ಎಸಗಿದ್ದು, ಇದೊಂದು ಭಯೋತ್ಪಾದಕ ಕೃತ್ಯ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಬಣ್ಣಿಸಿದ್ದಾರೆ.
ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಯಹೂದಿಯ ಹಬ್ಬದ ಆಚರಣೆ ವೇಳೆ ಗುಂಡಿನ ಸುರಿಮಳೆಗೈದು 15 ಜನರ ಸಾವಿಗೆ ಕಾರಣರಾದ ಹಂತಕರು ಓರ್ವ ತಂದೆ ಹಾಗೂ ಮಗ ಎಂದು ತಿಳಿದು ಬಂದಿದೆ. ಅವರಿಬ್ಬರು ಪಾಕಿಸ್ತಾನಿ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ಈ ದಾಳಿಯೂ ಅತ್ಯಂತ ಕಠಿಣವಾದ ಗನ್ ನಿಯಂತ್ರಣ ಕಾಯ್ದೆಯನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಮೂರು ದಶಕಗಳಲ್ಲೇ ಅತ್ಯಂತ ಮಾರಕವಾದ ಗುಂಡಿನ ದಾಳಿ ಎನಿಸಿದೆ.
ಈ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದವರಲ್ಲಿ ಓರ್ವನಾದ 50 ವರ್ಷದ ಸಾಜೀದ್ ಅಕ್ರಮ್‌ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರೆ ಮತ್ತೊಬ್ಬ ದಾಳಿಕೋರ ಸಾಜೀದ್ ಅಕ್ರಮ್‌ನ ಮಗ 24 ವರ್ಷದ ನವೀದ್ ಅಕ್ರಮ್ ಗಾಯಗೊಂಡಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಲ್ಯಾನ್ಯನ್ ತಿಳಿಸಿದ್ದಾರೆ. ಈ ಇಬ್ಬರು ಪಾಕಿಸ್ತಾನಿ ಮೂಲದವರು ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳ ತನಿಖೆಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆರೋಪಿ ಅಕ್ರಮ್‌ನ ನ್ಯೂ ಸೌತ್ ವೇಲ್ಸ್‌ನ ಚಾಲನಾ ಪರವಾನಗಿಯ ಫೋಟೋವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅದರಲ್ಲಿ ಆತ ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿಯನ್ನು ಹೋಲುವ ಹಸಿರು ಶರ್ಟ್ ಧರಿಸಿರುವಂತೆ ಕಾಣುತ್ತಿದೆ.
ಇದನ್ನೂ ಓದಿ: ಇವು ಕೆರೆಯಲ್ಲಿ ಅರಳಿ ನಿಂತ ತಾವರೆಗಳಲ್ಲ: ಸಂಭಾರ್ ಸರೋವರದಲ್ಲಿ ಗುಲಾಬಿ ಚಿತ್ತಾರ ಬಿಡಿಸಿದ ಸಾವಿರಾರು ಫ್ಲೇಮಿಂಗೋಗಳು
ಮಗ ಆಸ್ಟ್ರೇಲಿಯಾದಲ್ಲಿ ಜನಿಸಿ ಆಸ್ಟ್ರೇಲಿಯಾದ ನಾಗರಿಕನಾಗಿದ್ದರೆ, ತಂದೆ 1998 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಗೆ ಬಂದವರು. 2001ರಲ್ಲಿ ಅವರ ವೀಸಾ ಪಾರ್ಟನರ್ ವೀಸಾ ಆಗಿ ಬದಲಾಗಿ ನಂತರ ರೆಸಿಡೆನ್ಸಿ ರಿಟರ್ನ್ ವೀಸಾ ಆಗಿ ಬದಲಾಯಿತು ಎಂದು ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಈ ವರ್ಷದ ಅಲ್ಲಿನ ಬೇಸಿಗೆಯ ಕೊನೆ ದಿನಗಳಲ್ಲಿ ಆಸ್ಟ್ರೇಲಿಯಾದ ಸಾಂಸ್ಕೃತಿಕ ಜೀವನದ ಪ್ರತಿರೂಪ ಎನಿಸಿರುವ ಬೋಂಡಿ ಬೀಚ್‌ನಲ್ಲಿ ಸಾವಿರಾರು ಜನರು ಸೇರಿದ್ದಾಗ ಈ ಗುಂಡಿನ ದಾಳಿ ನಡೆದಿದೆ. ಯಹೂದಿಯರ ಎಂಟು ದಿನಗಳ ಹನುಕ್ಕಾ ಹಬ್ಬದ ಆರಂಭವನ್ನು ಆಚರಿಸುವ ಚಾನುಕಾ ಬೈ ದಿ ಸೀ ಕಾರ್ಯಕ್ರಮಕ್ಕಾಗಿ ಅಲ್ಲಿ ಸಾವಿರಾರು ಜನ ಸೇರಿದ್ದರು. ಕೇವಲ 10 ನಿಮಿಷ ನಡೆದ ದಾಳಿಯೂ 15 ಜನರ ಬಲಿ ಪಡೆಯಿತು. ಗುಂಡಿನ ದಾಳಿಯಿಂದಾಗಿ ಅಲ್ಲಿ ಸೇರಿದ್ದ ನೂರಾರು ಜನರು ಮರಳಿನಲ್ಲಿ ಮತ್ತು ಹತ್ತಿರದ ಬೀದಿಗಳಲ್ಲಿ ಚದುರಿಹೋದರು. ಬೀಚ್‌ನ ಒಂದು ಸಣ್ಣ ಉದ್ಯಾನವನದಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮಕ್ಕೆ ಸುಮಾರು 1,000 ಜನರು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಸಂಜೆ 6:45 ರ ಸುಮಾರಿಗೆ ಗುಂಡು ಹಾರಿಸಲಾಗುತ್ತಿದೆ ಎಂಬ ವರದಿಗಳು ಬಂದ ನಂತರ ತುರ್ತು ಸೇವೆಗಳಿಗೆ ಕರೆ ಮಾಡಲಾಯಿತು. ಗುಂಡು ಹಾರಾಟದ ಸದ್ದು ಕೇಳಿ ಬರುತ್ತಿದ್ದಂತೆ ಸ್ನಾನದ ಸೂಟ್‌ಗಳನ್ನು ಧರಿಸಿದ ಜನರು ನೀರಿನಿಂದ ಓಡಿಹೋಗುತ್ತಿರುವುದನ್ನು ನೋಡುಗರ ವೀಡಿಯೊ ತೋರಿಸಿದೆ. ಕಪ್ಪು ಶರ್ಟ್‌ಗಳಲ್ಲಿದ್ದ ಇಬ್ಬರು ವ್ಯಕ್ತಿಗಳು ಬೀಚ್‌ಗೆ ಹೋಗುವ ಪಾದಚಾರಿ ಸೇತುವೆಯಿಂದ ಉದ್ದನೆಯ ಬಂದೂಕುಗಳಿಂದ ಗುಂಡು ಹಾರಿಸುತ್ತಿರುವುದನ್ನು ಪ್ರತ್ಯೇಕ ದೃಶ್ಯಗಳು ತೋರಿಸಿವೆ. ಈ ದುರಂತದಲ್ಲಿ 15 ಜನ ಸಾವನ್ನಪ್ಪಿದ್ದರೆ 40ಕ್ಕೂ ಹೆಚ್ಚು ಜನ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಮಗಳ ಸುರಕ್ಷತೆಗಾಗಿ ಅಮ್ಮನೇ ಅಪ್ಪನಾದ: ಗಂಡನ ಸಾವಿನ ನಂತರ ಗಂಡಿನಂತೆ ವೇಷ ಧರಿಸಿ ಬದುಕಿದ ತಾಯಿ
ಘಟನೆಯ ಬಳಿಕ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೋಮವಾರ ಬೆಳಗ್ಗೆ ಬೋಂಡಿ ಬೀಚ್‌ಗೆ ಭೇಟಿ ನೀಡಿ ಘಟನೆಯಲ್ಲಿ ಮೃತರಾದವರಿಗೆ ಹೂವುಗಳನ್ನು ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ಅವರು ಈ ದಾಳಿಯನ್ನು ನಮ್ಮ ರಾಷ್ಟ್ರಕ್ಕೆ ಕರಾಳ ಕ್ಷಣ ಎಂದು ಪ್ರಧಾನಿ ಅಲ್ಬನೀಸ್ ಕರೆದಿದ್ದಾರೆ. ನಾವು ನಿನ್ನೆ ನೋಡಿದ್ದು ಶುದ್ಧ ದುಷ್ಟ ಕೃತ್ಯ, ಯೆಹೂದ್ಯರ ವಿರುದ್ಧದ ಕೃತ್ಯ, ಆಸ್ಟ್ರೇಲಿಯಾದ ಪ್ರತಿಷ್ಠಿತ ಸ್ಥಳದಲ್ಲಿ ನಮ್ಮ ತೀರದಲ್ಲಿ ನಡೆದ ಭಯೋತ್ಪಾದನಾ ಕೃತ್ಯ ಎಂದು ಅಲ್ಬನೀಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೆಲವು ಯಹೂದಿಯರು, ಯಹೂದಿ ಸಮುದಾಯದ ಪುರುಷರು ಧರಿಸುವ ಕಿಪ್ಪಾ ಧರಿಸಿ ಮೇಣದ ದುರಂತದಲ್ಲಿ ಮೃತಪಟ್ಟವರಿಗೆ ಹೂವುಗಳು ಹಾಗೂ ಮೇಣದ ಬತ್ತಿಯ ಅರ್ಪಣೆ ಮಾಡುವ ದೃಶ್ಯಗಳು ಬೊಂಡಿ ಬೀಚ್‌ನಲ್ಲಿ ಕಂಡುಬಂತು.

