ತುರ್ಕಮೆನಿಸ್ತಾನದಲ್ಲಿ ನಡೆದ ಅಂತರರಾಷ್ಟ್ರೀಯ ವೇದಿಕೆಯ ಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗಾಗಿ 40 ನಿಮಿಷಗಳ ಕಾಲ ಕಾದ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್, ಕೊನೆಗೆ ಪುಟಿನ್ ಹಾಗೂ ಟರ್ಕಿಶ್ ಅಧ್ಯಕ್ಷ ಎರ್ಡೋಗನ್ ನಡೆಸುತ್ತಿದ್ದ ಸಭೆಗೆ ನುಗ್ಗಿದ್ದಾರೆ.
ಮಾಸ್ಕೋ (ಡಿ.12): ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಶುಕ್ರವಾರ ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರನ್ನು ಭೇಟಿಯಾಗುತ್ತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಗೆ ನುಗ್ಗಿರುವ ಘಟನೆ ನಡೆದಿದೆ. ಈ ಘಟನೆ ತುರ್ಕಮೆನಿಸ್ತಾನದಲ್ಲಿ ಸಂಭವಿಸಿದೆ. ಅಂತರರಾಷ್ಟ್ರೀಯ ಶಾಂತಿ ಮತ್ತು ವಿಶ್ವಾಸ ವೇದಿಕೆ ಅಲ್ಲಿ ಸಭೆ ಸೇರುತ್ತಿತ್ತು. ಸಭೆಯ ಸಮಯದಲ್ಲಿ ಪುಟಿನ್ ಮತ್ತು ಶಹಬಾಜ್ ಭೇಟಿಯಾಗಬೇಕಿತ್ತು.
ಆದರೆ, ಶಹಬಾಜ್, ಪುಟಿನ್ ಅವರ ಭೇಟಿಯಾಗಿ 40 ನಿಮಿಷಗಳ ಕಾಲ ಕಾದರೂ ಪುಟಿನ್ ಬಂದಿರಲಿಲ್ಲ. ಇದರಿಂದಾಗಿ ಶೆಹಬಾಜ್ ಷರೀಪ್, ಪಕ್ಕದಲ್ಲಿಯೇ ನಡೆಯುತ್ತಿದ್ದ, ಎರ್ಡೋಗನ್ ಹಾಗೂ ಪುಟಿನ್ ಸಭೆಯ ಹಾಲ್‌ಗೆ ಹೋಗಿದ್ದಾರೆ. ಅದಾದ 10 ನಿಮಿಷಗಳ ನಂತರ ಅವರು ಹೊರಟು ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ, ಪುಟಿನ್ ಸಭೆಯ ಸಭಾಂಗಣದಿಂದ ಹೊರಬಂದು ಪತ್ರಕರ್ತರಿಗೆ ಕಣ್ಣು ಹೊಡೆದಿದ್ದರು. ಈ ಇಡೀ ಘಟನೆಯ ವೀಡಿಯೊವನ್ನು ರಷ್ಯಾ ಟುಡೇ (ಆರ್‌ಟಿ ನ್ಯೂಸ್) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇದು ಮೊದಲಲ್ಲ
ಪುಟಿನ್ ಮತ್ತು ಶಹಬಾಜ್ ಅವರ ಭೇಟಿಯ ಬಗ್ಗೆ ಇಷ್ಟೊಂದು ವಿಚಿತ್ರ ರೀತಿಯಲ್ಲಿ ಚರ್ಚಿಸಲಾಗುತ್ತಿರುವುದು ಇದೇ ಮೊದಲಲ್ಲ. ಇಬ್ಬರೂ ನಾಯಕರು ಭೇಟಿಯಾದಾಗಲೆಲ್ಲಾ ಇದೇ ರೀತಿಯ ಘಟನೆಗಳು ನಡೆದಿವೆ. ಚೀನಾದಲ್ಲಿ ನಡೆದ SCO ಶೃಂಗಸಭೆಯ ಸಂದರ್ಭದಲ್ಲಿ ಬೀಜಿಂಗ್‌ನಲ್ಲಿ ಪುಟಿನ್ ಮತ್ತು ಶಹಬಾಜ್ ಈ ಹಿಂದೆ ಭೇಟಿಯಾಗಿದ್ದರು. ಪುಟಿನ್ ಅವರೊಂದಿಗೆ ಮಾತನಾಡುವಾಗ ಷರೀಫ್ ತಮ್ಮ ಇಯರ್‌ಫೋನ್‌ಗಳನ್ನು ಸರಿಯಾಗಿ ಧರಿಸಲು ವಿಫಲರಾಗಿದ್ದರು. ಪುಟಿನ್ ನಂತರ ಷರೀಫ್‌ಗೆ ಇಯರ್‌ಫೋನ್‌ಗಳನ್ನು ಹೇಗೆ ಧರಿಸಬೇಕೆಂದು ವಿವರಿಸಲು ಪ್ರಯತ್ನಿಸಿದರು, ಮತ್ತು ಸಂಭಾಷಣೆಯ ಸಮಯದಲ್ಲಿ ಅವರು ನಗುತ್ತಿರುವುದು ಕೂಡ ಕಂಡುಬಂದಿತ್ತು.
ಶಹಬಾಜ್ ಷರೀಫ್ ಅವರ ಟ್ರಾನ್ಸ್‌ಲೇಟ್ ಇಯರ್‌ಫೋನ್‌ಗಳು ಪದೇ ಪದೇ ಅವರ ಕಿವಿಯಿಂದ ಜಾರಿ ಬೀಳುತ್ತಿತ್ತು, ಅವುಗಳನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರ ನಂತರ, ಪುಟಿನ್ ತಮ್ಮ ಹೆಡ್‌ಫೋನ್‌ಗಳನ್ನು ತೆಗೆದು ಅದನ್ನು ಹೇಗೆ ಹಾಕಬೇಕೆಂದು ತೋರಿಸಲು ಪ್ರಯತ್ನಿಸಿದ್ದರು.


