ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ಕೊಡಲಾಗುವ ಎಚ್-1ಬಿ ವೀಸಾ ಅರ್ಜಿಗಳಲ್ಲಿ 85,000 ಅರ್ಜಿಗಳನ್ನು ಆರಿಸಲು ಬಳಸಲಾಗುತ್ತಿದ್ದ ‘ರ್ಯಾಂಡಮ್ ಲಾಟರಿ ವ್ಯವಸ್ಥೆ’ಗೆ ಪೂರ್ಣವಿರಾಮ ಇಟ್ಟಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಘೋಷಿಸಿದೆ.
ವಾಷಿಂಗ್ಟನ್: ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ಕೊಡಲಾಗುವ ಎಚ್-1ಬಿ ವೀಸಾ ಅರ್ಜಿಗಳಲ್ಲಿ 85,000 ಅರ್ಜಿಗಳನ್ನು ಆರಿಸಲು ಬಳಸಲಾಗುತ್ತಿದ್ದ ‘ರ್ಯಾಂಡಮ್ ಲಾಟರಿ ವ್ಯವಸ್ಥೆ’ಗೆ ಪೂರ್ಣವಿರಾಮ ಇಟ್ಟಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಘೋಷಿಸಿದೆ. ಇದರಿಂದಾಗಿ, ಈ ವ್ಯವಸ್ಥೆಯನ್ನು ನೆಚ್ಚಿಕೊಂಡಿದ್ದ ಬಹುತೇಕ ಭಾರತೀಯರಿಗೆ ಭಾರೀ ನಿರಾಸೆಯಾಗಿದೆ.
2026ರ ಫೆ.27ರಿಂದ ಅಧಿಕಾರಿಗಳೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಅಧಿಕ ಕೌಶಲ್ಯ ಹಾಗೂ ವೇತನವಿರುವವರಿಗೆ ವೀಸಾ ನೀಡುತ್ತಾರೆ. ಇದರಿಂದ ಅಮೆರಿಕದಲ್ಲೇ ವೃತ್ತಿಜೀವನ ಆರಂಭಿಸಲು ಬಯಸಿದ್ದವರು ಹಾಗೂ ಕಡಿಮೆ ವೇತನದಲ್ಲಿ ಅವರನ್ನು ಕೆಲಸಕ್ಕಿಟ್ಟುಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಕಷ್ಟವಾಗಲಿದೆ.
ಕಾರಣವೇನು?:
ಅಮೆರಿಕದ ಕಂಪನಿಗಳು ಸಾಮಾನ್ಯವಾಗಿ ತಮ್ಮ ಖರ್ಚನ್ನು ತಗ್ಗಿಸುವ ಸಲುವಾಗಿ, ಅಮೆರಿಕನ್ನರಿಗಿಂತ ಕಡಿಮೆ ವೇತನ ಪಡೆಯುವವರನ್ನು ವಿದೇಶಗಳಿಂದ ನೇಮಿಸಿಕೊಳ್ಳುತ್ತಿದ್ದವು. ಇದಕ್ಕಾಗಿ ಲಾಟರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಕೌಶಲ್ಯಪೂರ್ಣ ವ್ಯಕ್ತಿಗಳನ್ನು ಬಯಸುವ ಅಮೆರಿಕದ ಹಿತಾಸಕ್ತಿಗೆ ಇದು ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಈ ವ್ಯವಸ್ಥೆಯನ್ನು ಟ್ರಂಪ್ ಬದಲಿಸಿ, ದೇಶಕ್ಕೆ ಕೊಡುಗೆ ಕೊಡುವಂತಹವರಿಗಷ್ಟೇ ಬಾಗಿಲು ತೆರೆಯಲು ಮುಂದಾಗಿದೆ.
ಹೊಸ ವ್ಯವಸ್ಥೆ ಹೇಗಿರಲಿದೆ?:
ಮೊದಲಾದರೆ 85,000 ಜನರನ್ನು ಕಂಪ್ಯೂಟರ್ನಲ್ಲಿ ಲಾಟರಿ ಮಾದರಿ ವ್ಯವಸ್ಥೆಯಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಇದರಿಂದಾಗಿ, ಆಯ್ಕೆಯಾಗಲು ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿತ್ತು. ಕಡಿಮೆ ವೇತನದ ಹಲವರು ಇದರಡಿಯಲ್ಲಿ ಅಮೆರಿಕಕ್ಕೆ ಅಡಿ ಇಡಬಹುದಿತ್ತು.
ಆದರೆ ಇನ್ನುಮುಂದೆ ಅಧಿಕಾರಿಗಳು ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಹರನ್ನು ಆರಿಸುತ್ತಾರೆ. ಕಡಿಮೆ ಮೊತ್ತದ ಸಂಬಳ ಪಡೆಯುವ ಅಥವಾ ಕುಶಲತೆ ಬೇಡದ ಕೆಲಸಗಳಿಗಾಗಿ ಅಮೆರಿಕಕ್ಕೆ ಹಾರಲು ಮುಂದಾಗಿರುವವರನ್ನು ಮೊದಲ ಹಂತದಲ್ಲೇ ತಿರಸ್ಕರಿಸಲಾಗುವುದು.
ಭಾರತೀಯರಿಗ್ಯಾಕೆ ಚಿಂತೆ?:
ಎಚ್-1ಬಿ ವೀಸಾದ ಸೌಲಭ್ಯ ಪಡೆಯುವವರನ್ನು ಶೇ.70ರಷ್ಟು ಭಾರತೀಯರೇ ಇರುತ್ತಾರೆ. ಇದರಲ್ಲಿ ಕೌಶಲ್ಯಯುತ ಕೆಲಸಗಳು ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಅಮೆರಿಕಕ್ಕೆ ಹೋಗುವವರು ಇರುತ್ತಾರಾದರೂ ಅವರ ಸಂಖ್ಯೆ ಕಡಿಮೆಯಿರುತ್ತದೆ. ಹೊಸದಾಗಿ ಉದ್ಯೋಗ ಶುರುಮಾಡುವ ಅಥವಾ ಹೇಳಿಕೊಳ್ಳುವಂತಹ ವೇತನವಿರದವರೇ ಅರ್ಜಿದಾರರಲ್ಲಿ ಬಹುಪಾಲು ಇರುವ ಕಾರಣ, ಅವರ ಅಮೆರಿಕ ಕನಸು ಕನಸಾಗಿಯೇ ಉಳಿಯಲಿದೆ.
ಅತ್ತ ಎಚ್-1ಬಿ ವೀಸಾ ಪಡೆಯಲು 90 ಲಕ್ಷ ರು. ಕೊಡಬೇಕಾಗಿರುವುದರಿಂದ ಅಮೆರಿಕದ ಕಂಪನಿಗಳು ಸಣ್ಣಪುಟ್ಟ ಹುದ್ದೆಗೆ ಬರುವವರಿಗಾಗಿ ಅಷ್ಟು ಖರ್ಚು ಮಾಡಲು ಮುಂದಾಗುವುದಿಲ್ಲ.


