ಯುನೈಟೆಡ್ ಅರಬ್ ಎಮಿರೇಟ್ಸ್ (UAE) 'ಓಪೆಕ್' ಮತ್ತು 'ಓಪೆಕ್ ಪ್ಲಸ್' ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮತ್ತು ಇರಾನ್ ಸಂಘರ್ಷದ ನಡುವೆ ತೆಗೆದುಕೊಂಡ ಈ ನಿರ್ಧಾರ, ಸೌದಿ ಅರೇಬಿಯಾಕ್ಕೆ ಹಿನ್ನಡೆಯಾಗಿದೆ.
ದುಬೈ/ರಿಯಾದ್ (ಏ.28): ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮನೆಮಾಡಿರುವ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತೈಲ ಉತ್ಪಾದಕ ರಾಷ್ಟ್ರಗಳ ಪ್ರಭಾವಿ ಒಕ್ಕೂಟವಾದ 'ಓಪೆಕ್' (OPEC) ಮತ್ತು 'ಓಪೆಕ್ ಪ್ಲಸ್' (OPEC+) ನಿಂದ ಹೊರಬರುವುದಾಗಿ ಘೋಷಿಸಿದೆ. ಇರಾನ್ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಈ ಸಂಕಷ್ಟದ ಸಮಯದಲ್ಲಿ ಯುಎಇ ತೆಗೆದುಕೊಂಡಿರುವ ಈ ನಿರ್ಧಾರವು ಜಾಗತಿಕ ಇಂಧನ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.
ಮಂಗಳವಾರ ಅಧಿಕೃತಗೊಂಡ ಈ ನಿರ್ಧಾರವು ಓಪೆಕ್ ಒಕ್ಕೂಟದ ನಾಯಕತ್ವ ವಹಿಸಿರುವ ಸೌದಿ ಅರೇಬಿಯಾಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ದಶಕಗಳಿಂದ ಓಪೆಕ್‌ನ ಅತ್ಯಂತ ವಿಶ್ವಾಸಾರ್ಹ ಸದಸ್ಯ ರಾಷ್ಟ್ರವಾಗಿದ್ದ ಯುಎಇ ಹೊರಹೋಗಿರುವುದು, ತೈಲ ಮಾರುಕಟ್ಟೆ ಮತ್ತು ಪೂರೈಕೆ ಮಾರ್ಗಗಳು ಒತ್ತಡದಲ್ಲಿರುವ ಈ ಸಮಯದಲ್ಲಿ ಒಕ್ಕೂಟದೊಳಗಿನ ಸಮನ್ವಯತೆಯನ್ನು ದುರ್ಬಲಗೊಳಿಸುವ ಅಪಾಯವನ್ನು ತಂದೊಡ್ಡಿದೆ.
ಯುಎಇ ಇಂಧನ ಸಚಿವರ ಹೇಳಿಕೆ
ಯುಎಇ ಇಂಧನ ಸಚಿವ ಸುಹೈಲ್ ಅಲ್ ಮಜ್ರೂಯಿ ಈ ಬಗ್ಗೆ ಸೋಶಿಯಲ್ ಮೀಡಿಯಾ 'X' ನಲ್ಲಿ ಮಾಹಿತಿ ನೀಡಿದ್ದು, "ಓಪೆಕ್‌ನಿಂದ ಹೊರಬರುವ ಯುಎಇ ನಿರ್ಧಾರವು ಇಂಧನ ವಲಯದ ನೀತಿ ಆಧಾರಿತ ಬೆಳವಣಿಗೆಗಳಿಗೆ ಅನುಗುಣವಾಗಿದೆ ಮತ್ತು ದೀರ್ಘಕಾಲೀನ ಮಾರುಕಟ್ಟೆ ಮೂಲಭೂತ ಅಂಶಗಳೊಂದಿಗೆ ಹೊಂದಿಕೆಯಾಗುತ್ತದೆ," ಎಂದು ತಿಳಿಸಿದ್ದಾರೆ.
"ದಶಕಗಳ ಕಾಲದ ರಚನಾತ್ಮಕ ಸಹಕಾರಕ್ಕಾಗಿ ನಾವು ಓಪೆಕ್ ಮತ್ತು ಸದಸ್ಯ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜಾಗತಿಕ ಮಾರುಕಟ್ಟೆಯ ಸ್ಥಿರತೆಯನ್ನು ಬೆಂಬಲಿಸಲು ಮತ್ತು ಕಡಿಮೆ-ಹೊರಸೂಸುವಿಕೆಯ ಇಂಧನ ಪೂರೈಕೆಯನ್ನು ಒದಗಿಸುವ ಮೂಲಕ ಇಂಧನ ಭದ್ರತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ," ಎಂದು ಅವರು ಸೇರಿಸಿದ್ದಾರೆ.
ಹಿನ್ನೆಲೆ ಮತ್ತು ಹಾರ್ಮುಜ್ ಜಲಸಂಧಿಯ ಭೀತಿ
ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ವಾರಗಳಲ್ಲಿ ಇರಾನ್ ಸಂಬಂಧಿತ ದಾಳಿಗಳು ಮತ್ತು ಬೆದರಿಕೆಗಳು ಹೆಚ್ಚಾಗಿವೆ. ಪ್ರಪಂಚದ ಐದನೇ ಒಂದು ಭಾಗದಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ 'ಹಾರ್ಮುಜ್ ಜಲಸಂಧಿ'ಯಲ್ಲಿ ತೈಲ ಪೂರೈಕೆಗೆ ಭಾರಿ ಅಡ್ಡಿಯಾಗಿದೆ. ಈ ಭದ್ರತಾ ಬಿಕ್ಕಟ್ಟಿನ ನಡುವೆ ಯುಎಇ ತನ್ನ ಸ್ವಂತ ಹಾದಿಯನ್ನು ಹಿಡಿಯಲು ನಿರ್ಧರಿಸಿದೆ.
ಡೊನಾಲ್ಡ್ ಟ್ರಂಪ್‌ಗೆ ರಾಜಕೀಯ ಜಯ?
ಓಪೆಕ್ ಒಕ್ಕೂಟವು ತೈಲ ಬೆಲೆಗಳನ್ನು ಕೃತಕವಾಗಿ ಏರಿಸುವ ಮೂಲಕ ಇಡೀ ಜಗತ್ತನ್ನು ಸುಲಿಗೆ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಪದೇ ಪದೇ ಟೀಕಿಸಿದ್ದರು. "ಅಮೆರಿಕವು ಕೊಲ್ಲಿ ರಾಷ್ಟ್ರಗಳಿಗೆ ಮಿಲಿಟರಿ ರಕ್ಷಣೆ ನೀಡುತ್ತಿದೆ, ಆದರೆ ಅವರು ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನು ಶೋಷಿಸುತ್ತಿದ್ದಾರೆ," ಎಂದು ಅವರು ಆರೋಪಿಸಿದ್ದರು. ಈಗ ಯುಎಇ ಈ ಒಕ್ಕೂಟದಿಂದ ಹೊರಬಂದಿರುವುದನ್ನು ಟ್ರಂಪ್ ತಮ್ಮ ರಾಜಕೀಯ ಗೆಲುವು ಎಂದು ಬಿಂಬಿಸುತ್ತಿದ್ದಾರೆ.


