China Japan military tensions: ತೈವಾನ್ ಕುರಿತ ಹೇಳಿಕೆ ಚೀನಾ ಜಪಾನ್ ನಡುವಿನ ಉದ್ವಿಗ್ನತೆ ಹೆಚ್ಚಳ. ಈ ಸಂದರ್ಭದಲ್ಲಿ, ರಷ್ಯಾ ತನ್ನ ಪರಮಾಣು ಸಾಮರ್ಥ್ಯದ ಯುದ್ಧನೌಕೆಗಳೊಂದಿಗೆ ಚೀನಾಕ್ಕೆ ಬೆಂಬಲ ಸೂಚಿಸಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ಜಪಾನ್ ಜಂಟಿ ಮಿಲಿಟರಿ ಶಕ್ತಿ ಪ್ರದರ್ಶನ ನಡೆಸಿವೆ.
ತೈವಾನ್ ಕುರಿತು ಜಪಾನಿನ ಪ್ರಧಾನಿ ಸನೇ ತಕೈಚಿ ಅವರ ಹೇಳಿಕೆಗಳ ನಂತರ ಚೀನಾ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಗಳು ತೀವ್ರಗೊಂಡಿವೆ. ಈ ಪರಿಸ್ಥಿತಿಯಲ್ಲಿ, ರಷ್ಯಾವು ತನ್ನ ಪರಮಾಣು ಸಾಮರ್ಥ್ಯದ ಯುದ್ಧನೌಕೆಗಳನ್ನು ಚೀನಾದ ಗಸ್ತು ತಿರುಗುವ ಪಡೆಗಳನ್ನು ಬೆಂಬಲಿಸಲು ನಿಯೋಜಿಸುವ ಮೂಲಕ ಬೀಜಿಂಗ್ನ ಪರವಾಗಿ ನಿಂತಿದೆ. ಇದು ಪೂರ್ವ ಏಷ್ಯಾದಲ್ಲಿ ಭುಗಿಲೆದ್ದಿರುವ ಉದ್ವಿಗ್ನತೆಯ ಸ್ಪಷ್ಟ ಸಂಕೇತವಾಗಿದೆ. ಡಿ. 9 ರಂದು, ಎರಡು ರಷ್ಯಾದ Tu-95 ಬಾಂಬರ್ಗಳು ಎರಡು ಚೀನೀ H-6 ಬಾಂಬರ್ಗಳೊಂದಿಗೆ ಜಂಟಿ ಹಾರಾಟ ನಡೆಸಿದವು, ಇದು ಜಪಾನಿನ ಫೈಟರ್ ಜೆಟ್ಗಳನ್ನು ಪ್ರತಿಕ್ರಿಯೆಗೆ ಪ್ರಚೋದಿಸಿತು.
ಅಮೆರಿಕ-ಜಪಾನ್ನಿಂದ ಶಕ್ತಿ ಪ್ರದರ್ಶನ
ರಷ್ಯಾ ಮತ್ತು ಚೀನಾದ ಜಂಟಿ ಕಾರ್ಯಾಚರಣೆಯ ಬೆನ್ನಲ್ಲೇ ಜಪಾನ್ ಮತ್ತು ಅಮೆರಿಕ ತಮ್ಮ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದವು. 'ಬಲಪ್ರಯೋಗದ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ತಡೆಯಲು ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಬದ್ಧವಾಗಿವೆ' ಎಂದು ಜಪಾನ್ ರಕ್ಷಣಾ ಸಚಿವಾಲಯ ಗುರುವಾರ (ಡಿಸೆಂಬರ್ 11, 2025) ತಿಳಿಸಿದೆ. ಡಿ. 10 ರಂದು, ಎರಡು ಯುಎಸ್ನ B-52 ಕಾರ್ಯತಂತ್ರದ ಬಾಂಬರ್ಗಳು ಜಪಾನ್ ಸಮುದ್ರದ ಮೇಲೆ ಹಾರಾಟ ನಡೆಸಿದವು. ಈ ಬಾಂಬರ್ಗಳ ಜೊತೆಗೆ ಮೂರು ಜಪಾನಿನ F-35 ಸ್ಟೆಲ್ತ್ ಫೈಟರ್ ಜೆಟ್ಗಳು ಮತ್ತು ಮೂರು F-15 ಏರ್ ಸುಪೀರಿಯಾರಿಟಿ ಜೆಟ್ಗಳು ಹಾರಾಟ ನಡೆಸಿದವು. ಚೀನಾ ಪ್ರಾದೇಶಿಕ ತಾಲೀಮುಗಳನ್ನ ಪ್ರಾರಂಭಿಸಿದ ನಂತರ ಯುಎಸ್ ತನ್ನ ಮಿಲಿಟರಿ ಉಪಸ್ಥಿತಿಯನ್ನು ಈ ರೀತಿ ಪ್ರದರ್ಶಿಸಿದ್ದು ಇದೇ ಮೊದಲು.
ಚೀನಾ ವಿರುದ್ಧ ರಾಡಾರ್ ಲಾಕ್-ಆನ್ ಆರೋಪ
ಕಳೆದ ವಾರ, ಚೀನಾ ಜಪಾನ್ನ ದಕ್ಷಿಣಕ್ಕೆ ವಿಮಾನವಾಹಕ ನೌಕೆಗಳನ್ನು ಬಳಸಿಕೊಂಡು ತಾಲೀಮು ನಡೆಸಿತು. ಈ ಸಂದರ್ಭದಲ್ಲಿ ಚೀನಾದ ಪಡೆಗಳು ಜಪಾನಿನ ಜೆಟ್ಗಳ ಮೇಲೆ ರಾಡಾರ್ ಲಾಕ್-ಆನ್ಗಳನ್ನು ನಡೆಸಿದವು ಎಂದು ಜಪಾನ್ ಆರೋಪಿಸಿದೆ. ಈ ಕುತಂತ್ರ ಜಪಾನ್ ಅಪಾಯಕಾರಿ ಎಂದು ಖಂಡಿಸಿತು. ಆದಾಗ್ಯೂ, ಚೀನಾ ಈ ಆರೋಪವನ್ನು ತಳ್ಳಿಹಾಕಿದ್ದು, ಜಪಾನಿನ ವಿಮಾನವು ತಮ್ಮ ಪ್ರದೇಶವನ್ನು ಅನಧಿಕೃತವಾಗಿ ಅತಿಕ್ರಮಿಸಿದೆ ಎಂದು ಹೇಳಿದೆ. ಚೀನಾ ಮತ್ತು ರಷ್ಯಾದ ಬಾಂಬರ್ಗಳ ಜಂಟಿ ಹಾರಾಟವು ಜಪಾನ್ ವಿರುದ್ಧದ ಸ್ಪಷ್ಟ ಬಲಪ್ರದರ್ಶನ ಎಂದು ಜಪಾನ್ನ ಜಂಟಿ ಸಿಬ್ಬಂದಿ ಮುಖ್ಯಸ್ಥ ಜನರಲ್ ಹಿರೋಕಿ ಉಚಿಕುರಾ ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆ ಪ್ರಾದೇಶಿಕ ಶಾಂತಿ ಸ್ಥಿರತೆಗೆ ಅಪಾಯಕಾರಿ:
ವಾಷಿಂಗ್ಟನ್ ಕೂಡ ಈ ಘಟನೆಯನ್ನು ಟೀಕಿಸಿದೆ, ಇದು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಹಾನಿಕಾರಕ ಎಂದು ಹೇಳಿದೆ. ಯುಎಸ್ ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡರಲ್ಲೂ ತನ್ನ ಪಡೆಗಳನ್ನು, ವಿಮಾನವಾಹಕ ನೌಕೆ ಸ್ಟ್ರೈಕ್ ಗ್ರೂಪ್ಗಳು ಮತ್ತು ಯುಎಸ್ ಮೆರೈನ್ ಎಕ್ಸ್ಪೆಡಿಷನರಿ ಫೋರ್ಸ್ಗಳನ್ನು ನಿಯೋಜಿಸಿ ತನ್ನ ಮೈತ್ರಿಯ ಬದ್ಧತೆಯನ್ನು ಪುನರುಚ್ಚರಿಸಿದೆ. ಏತನ್ಮಧ್ಯೆ, ಜಪಾನ್ನ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಅವರು ಇತರ ದೇಶಗಳೊಂದಿಗೆ ರಾಜತಾಂತ್ರಿಕ ಚರ್ಚೆಗಳನ್ನು ಮುಂದುವರಿಸುವುದಾಗಿ ಮತ್ತು ಜಪಾನ್ನ ನಿಲುವುಗಳ ಬಗ್ಗೆ ತಿಳುವಳಿಕೆಯನ್ನು ಪಡೆಯುವುದಾಗಿ ಹೇಳಿದ್ದಾರೆ.
ಚೀನಾದ ಸಮರ್ಥನೆ
ಚೀನಾ ಮತ್ತು ರಷ್ಯಾದ ಮಿಲಿಟರಿಗಳ ಜಂಟಿ ಗಸ್ತುಗಳ ಬಗ್ಗೆ ಜಪಾನ್ ಚಿಂತಿಸಬೇಕಾಗಿಲ್ಲ, ಏಕೆಂದರೆ ಇದು ಅವರ ವಾರ್ಷಿಕ ಜಂಟಿ ಕಾರ್ಯಕ್ರಮದ ಭಾಗವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.


